ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ವಿತರಣೆ; ಮಾರ್ಗಸೂಚಿ
ಬೆಂಗಳೂರು, ಸೆಪ್ಟೆಂಬರ್ 12; ಕರ್ನಾಟಕ ಸರ್ಕಾರ 2023-24ನೇ ಸಾಲಿನಲ್ಲಿ ಶಾಲಾ ಮಕ್ಕಳಲ್ಲಿರುವ ಅಪೌಷ್ಠಿಕತೆ ನಿವಾರಣೆಗಾಗಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದೊಂದಿಗೆ ಬೇಯಿಸಿದ ಮೊಟ್ಟೆ, ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ವಿತರಿಸುವುದಕ್ಕೆ ಚಾಲನೆ ನೀಡಿದೆ.
ಈ ಪೂರಕ ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಮಾರ್ಗಸೂಚಿಯೊಂದನ್ನು ಪ್ರಕಟಿಸಲಾಗಿದೆ. ಮೊಟ್ಟೆ, ಮೊಟ್ಟೆ ಸ್ವೀಕರಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಚಿಕ್ಕಿಯನ್ನು ಪೂರಕ ಪೌಷ್ಠಿಕಾಂಶವುಳ್ಳ ಆಹಾರವನ್ನು ವಾರ್ಷಿಕವಾಗಿ ಒಟ್ಟು 80 ದಿನಗಳ ಅವಧಿಗೆ ವಿತರಣೆ ಮಾಡಲು ಈ ಹಿಂದೆ ಅನುಮತಿ ನೀಡಲಾಗಿದೆ.

ಈ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಮೊಟ್ಟೆ/ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ವಿತರಿಸುವ ಆರಂಭಗೊಳ್ಳುವ ಮೊದಲ ವಾರದಲ್ಲಿ ಮೊದಲ ಹಂತದ ಚಟುವಟಿಕೆಗಾಗಿ, ಶಾಲೆಯ ತರಗತಿವಾರು ಎಲ್ಲಾ ವಿದ್ಯಾರ್ಥಿಗಳ ದೇಹದ ತೂಕ ಮತ್ತು ಎತ್ತರವನ್ನು ಅಳತೆಮಾಡಿ ದಾಖಲೆಯನ್ನು ಒಂದು ವಹಿಯಲ್ಲಿ ನಿರ್ವಹಿಸಬೇಕು. ಪ್ರತಿ ತಿಂಗಳ ಕೊನೆಯ ದಿನಾಂಕದಂದು ಒಂದು ಬಾರಿ ಪರಿಶೀಲಿಸಿ ರೀಡಿಂಗ್ ತೆಗೆದುಕೊಳ್ಳುವುದು.
ಆರಂಭದ ದಿನ ಮತ್ತು ಕೊನೆಯ ದಿನದ ರೀಡಿಂಗ್ ಅನ್ನು ಹೋಲಿಕೆ ಮಾಡಿ ನೋಡಿ ಪ್ರಗತಿ ವಿಶ್ಲೇಷಣೆ ಮಾಡಿ ಪ್ರತಿ ವಿದ್ಯಾರ್ಥಿಯಲ್ಲಿ ಆಗಿರಬಹುದಾದ ಭೌತಿಕ ಬೆಳವಣಿಗೆಯಲ್ಲಾದ ಬದಲಾವಣೆ ಕುರಿತಂತೆ ಅಭಿಪ್ರಾಯ ದಾಖಲಿಸುವುದು. ಈ ಜವಾಬ್ದಾರಿಯನ್ನು ಆಯಾ ಶಾಲೆಯ ಶಾಲೆಯ ದೈಹಿಕ ಶಿಕ್ಷಕರಿಗೆ, ದೈಹಿಕ ಶಿಕ್ಷಕರು ಇಲ್ಲದ ಶಾಲೆಗಳಲ್ಲಿ ಆಯಾ ತರಗತಿ ಶಿಕ್ಷಕರಿಗೆ ನೀಡಲಾಗಿದ್ದು, ದಾಖಲೆ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.
ಮಾರ್ಗಸೂಚಿಯ ವಿವರಗಳು; ಪ್ರತಿ ವಾರಕ್ಕೆ ವಿತರಣೆಗೆ ಅಗತ್ಯವಿರುವ ಪ್ರಮಾಣದಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ಮುಂಗಡವಾಗಿ ಪ್ರಾಮಾಣೀಕೃತವಾದ ಸ್ಥಳೀಯ ಮಾರುಕಟ್ಟೆಯ ಅಂಗಡಿ, ವ್ಯಾಪಾರಿ ಸಂಸ್ಥೆ, ಸಮೀಪದ ವ್ಯಾಪಾರಿ ಕೇಂದ್ರ, ಮೊಟ್ಟೆ/ ಬಾಳೆಹಣ್ಣು ಮಾರಾಟ ಮಾಡುವ ರೈತರು, ಶೇಂಗಾ ಚಿಕ್ಕಿ ತಯಾರಿಸುವ ಗೃಹ ಉದ್ಯೋಗ, ಸ್ತ್ರೀ ಶಕ್ತಿ ಕೇಂದ್ರ ಮುಂತಾದ ಆಹಾರ ತಯಾರಿಕ ಘಟಕಗಳಿಂದ, ಮುಕ್ತ ಮಾರುಕಟ್ಟೆಯಲ್ಲಿ ಅರ್ಹ ವರ್ತಕರಿಂದ ಗುಣಮಟ್ಟ ಖಾತ್ರಿಪಡಿಸಿಕೊಂಡು ಖರೀದಿಸುವುದು. ಈ ಸಂಬಂಧ ಅಧಿಕೃತ ಬಿಲ್ ಪಡೆದು ವೋಚರ್ ದಾಖಲೆಗಳನ್ನು ಕಡ್ಡಾಯವಾಗಿ ಇಟ್ಟು ನಿರ್ವಹಿಸುವುದು.
ವಿತರಣೆ ಪೂರ್ವದಲ್ಲಿ ಮೊಟ್ಟೆಯನ್ನು ತಿನ್ನುವ ವಿದ್ಯಾರ್ಥಿ ಫಲಾನುಭವಿಗಳು ಮತ್ತು ಮೊಟ್ಟೆಯನ್ನು ತಿನ್ನದೇ ಬಾಳೆಹಣ್ಣನ್ನು ತಿನ್ನುವ ವಿದ್ಯಾರ್ಥಿ ಫಲಾನುಭವಿಗಳು, ಬಾಳೆಹಣ್ಣು ತಿನ್ನದೇ ಇರುವವರಿಗೆ ಶೇಂಗಾ ಚಿಕ್ಕಿ ತಿನ್ನುವ ಫಲಾನುಭವಿಗಳು ಎಂಬುದಾಗಿ ಆಯಾ ವಿದ್ಯಾರ್ಥಿಗಳ ಮತ್ತು ಪೋಷಕರ ಒಪ್ಪಿಗೆ ಪಡೆದು ತರಗತಿವಾರು ಆಯಾ ತರಗತಿ ಶಿಕ್ಷಕರು ಕಡ್ಡಾಯವಾಗಿ ಗುರುತಿಸಿ, ಪ್ರತ್ಯೇಕವಾದ ಫಲಾನುಭವಿಗಳ ಪಟ್ಟಿ ದಾಖಲೆಯನ್ನು ಸಿದ್ಧಪಡಿಸಿಕೊಂಡು ಇದರಂತೆ, ವಿತರಣೆಯ ಅಗತ್ಯ ಕ್ರಮವನ್ನು ನಿರ್ವಹಿಸುವುದು.
ಮೊಟ್ಟೆ ಮತ್ತು ಬಾಳೆ ಹಣ್ಣನ್ನು ಅಥವಾ ಶೇಂಗಾ ಚಿಕ್ಕಿಯನ್ನು ಖರೀದಿಸಿದ ಲೆಕ್ಕಪತ್ರ ವಿವರಗಳನ್ನು, ಬಿಲ್, ವೋಚರ್ ದಾಖಲೆಗಳ ವಿವರಗಳನ್ನು ಮುಖ್ಯ ಶಿಕ್ಷಕರು ಕಡ್ಡಾಯವಾಗಿ ಶಾಲೆಯಲ್ಲಿ ಸಿದ್ದಪಡಿಸಿ ದಾಖಲೆ ನಿರ್ವಹಿಸಿ ಮೇಲಧಿಕಾರಿಗಳ ತಪಾಸಣೆಯ ಸಂದಂರ್ಭದಲ್ಲಿ ಹಾಜರುಪಡಿಸತಕ್ಕದ್ದು ಹಾಗೂ ಪ್ರತಿ ಮಾಹೆಯಲ್ಲಿ ಶಾಲಾ ಹಂತದ ಖರೀದಿ ಸಮಿತಿ ಸಭೆ ಸೇರಿದಾಗ ಪರಿಶೀಲನೆಗೆ ಹಾಜರುಪಡಿಸಿ, ದೈನಂದಿನ ಹಾಜರಾತಿಯಂತೆ ತರಗತಿವಾರು ಫಲಾನುಭವಿ ವಿದ್ಯಾರ್ಥಿಗಳ ಸಂಖ್ಯೆ, ಖರೀದಿ, ವಿತರಣೆಯ ವೆಚ್ಚದ ವಿವರ ಸಲ್ಲಿಸಿ ನಡಾವಳಿಯೊಂದಿಗೆ ದೃಢೀಕರಣ ಸಹಿ ಪಡೆದು ಶಾಲಾ ಹಂತದಲ್ಲಿ ಇಟ್ಟು ನಿರ್ವಹಿಸುವುದು.
ವಿತರಣೆಯ ನಿಗದಿತ ದಿನದಂದು ಹಾಜರಾಗಿರುವ ಪ್ರತಿ ವಿದ್ಯಾರ್ಥಿ ಫಲಾನುಭವಿಗೆ ವಿತರಿಸಿದ ಮೊಟ್ಟೆ/ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ಪೌಷ್ಠಿಕ ಆಹಾರದ ಸ್ವೀಕೃತೀಗಾಗಿ ಪ್ರತ್ಯೇಕ ಸ್ವೀಕೃತಿ ವಹಿ ದಾಖಲೆಯನ್ನು ಆಯಾ ತರಗತಿಯಲ್ಲಿಟ್ಟು ಸಹಿ ಪಡೆದು ದಾಖಲೆ ನಿರ್ವಹಿಸುವ ಜವಾಬ್ದಾರಿಯನ್ನು ಆಯಾ ಶಾಲೆಯ ತರಗತಿ ಶಿಕ್ಷಕರಿಗೆ ನೀಡಲಾಗಿದೆ. ಸದರಿ ತರಗತಿವಾರು ಫಲಾನುಭವಿ ಸ್ವೀಕೃತಿ ಸಹಿ-ವಹಿ ದಾಖಲೆಯನ್ನು ದೃಢೀಕರಣದೊಂದಿಗೆ ಮೇಲಾಧಿಕಾರಿಗಳ ತಪಾಸಣೆಯ ಸಂದರ್ಭದಲ್ಲಿ, ಖರೀದಿ ಸಮಿತಿಯ ಪರಿಶೀಲನೆಗೆ ಹಾಗೂ ತಾಲ್ಲೂಕು ಪಂಚಾಯತಿಗೆ ಸಲ್ಲಿಸುವ ಬಿಲ್ಲು ಲೆಕ್ಕ ವಿವರಗಳೊಂದಿಗೆ ಮುಖ್ಯಶಿಕ್ಷಕರು ಹಾಜರುಪಡಿಸಕ್ಕದ್ದು.
ಮೇಲ್ವಿಚಾರಣೆ, ಸೂಕ್ಷ್ಮ ಪರಿಶೀಲನೆ ಮತ್ತು ವರದಿ
* ಶಾಲಾ ಹಂತದ ಖರೀದಿ, ಸಂರಕ್ಷಣೆ ಮತ್ತು ವಿತರಣೆ, ನಿಗದಿತ ದಿನಗಳಂದು ವಿದ್ಯಾರ್ಥಿ ಫಲಾನುಭವಿಗಳ ಹಾಜರಾತಿ ಸಂಖ್ಯೆ ಹಾಗೂ ಬಿಸಿಯೂಟದೊಂದಿಗೆ ಫಲಾನುಭವಿಗಳ ಪೌಷ್ಠಿಕ ಆಹಾರ ಸ್ವೀಕೃತಿ, ಗುಣಮಟ್ಟ, ಸ್ವಚ್ಛತೆ ಮತ್ತು ವಿತರಣೆಯ ಪ್ರಮಾಣ ಇತ್ಯಾದಿ ಅಂಶಗಳ ಕುರಿತಾಗಿ ಆಯಾ ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕರಿಗಳು ಮತ್ತು ಬಿ.ಆರ್.ಸಿ ಅಧಿಕಾರಿಗಳು ಜಂಟಿಯಾಗಿ ಒಂದು ಟೀಂ ನಲ್ಲಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಜಂಟಿಯಾಗಿ ಮತ್ತೊಂದು ಟೀಂನಲ್ಲಿ, ಇದರೊಂದಿಗೆ ಸಂಬಂಧಿಸಿದ ಕ್ಲಸ್ಟರ್ ಸಿ.ಆರ್.ಪಿ.ಗಳು ಸಹ ಹಾಜರಿದ್ದು, ಆಗಾಗ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಮೇಲ್ವಿಚಾರಣೆ ಹಾಗೂ ಮಾರ್ಗದರ್ಶನ ನೀಡುವುದು.
* ಕ್ಲಸ್ಟರ್ ವಲಯದ ಶಾಲೆಗಳಿಗೆ ಸಿ.ಆರ್.ಪಿ.ಗಳು ನಿಯಮಿತವಾಗಿ ಭೇಟಿ ನೀಡಿ ಮೊಟ್ಟೆ/ ಬಾಳೆಹಣ್ಣು ಪೌಷ್ಠಿಕ ಆಹಾರವಾಗಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ನಿಗದಿತ ದಿನಗಳಲ್ಲಿ ದೈನಂದಿನ ಹಾಜರಾತಿಯಂತೆ ವಿದ್ಯಾರ್ಥಿ ಫಲಾನುಭವಿಗಳಿಗೆ ಇಲಾಖೆಯ ಮಾರ್ಗಸೂಚಿಯಂತೆ ಸಮರ್ಪಕವಾಗಿ ವಿತರಿಸುತ್ತಿರುವ ಕ್ರಮವನ್ನು ತಪ್ಪದೇ ಪರಿಶೀಲಿಸಬೇಕು ಹಾಗೂ ಈ ಬಗ್ಗೆ ಭೇಟಿ ವರದಿಯನ್ನು ಅಂಕಿ-ಅಂಶಗಳು, ಅಭಿಪ್ರಯಗಳೊಂದಿಗೆ ಕ್ಷೇತ್ರಶಿಕ್ಷಣಾಧಿಕಾರಿಯವರಿಗೆ ಮತ್ತು ಒಂದು ಪ್ರತಿಯನ್ನು ತಾಲ್ಲೂಕು ಪಂಚಾಯತ್ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ತಪ್ಪದೇ ಸಲ್ಲಿಸುವ ಕ್ರಮಕ್ಕಾಗಿ ಸೂಚಿಸಿದೆ.
* ಕಾರ್ಯಕ್ರಮ ಅನುಷ್ಠಾನಗೊಳಿಸಿದ ಜೂನ್ 2023 ರಿಂದ ಪ್ರಾರಂಭಿಸಿ ಮಾರ್ಚ್ 2024ರ ಅಂತ್ಯದವರೆಗಿನ ವಿತರಣೆಯ ಅವಧಿಯವರೆಗೆ ಪ್ರತಿ ಮಾಹೆಗಳ ಕೊನೆಯ ದಿನಾಂಕದಂದು ತಾವು ಭೇಟಿ ನೀಡಿದ ಶಾಲೆಗಳ ಪ್ರಗತಿ ಪರಿಶೀಲನೆಯ ವರದಿಯನ್ನು ಪರಿಶೀಲಿಸಿದ ಶಾಲೆಗಳಲ್ಲಿ ಕಾರ್ಯಕ್ರಮ ಅನುಷ್ಠಾನ, ಪ್ರಗತಿ, ಪರಿಣಾಮಗಳ ಕುರಿತಾಗಿ, ಅಂಕಿ ಅಂಶಗಳೊಂದಿಗೆ ಶಾಲಾವಾರು ಸಿದ್ದಪಡಿಸಿ ಸಂಬಂಧಿಸಿದ ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ಮತ್ತು ಬಿ.ಆರ್.ಸಿ. ಜಂಟಿಯಾಗಿ ಒಂದು ಪ್ರತಿಯನ್ನು ಆಯಾ ಜಿಲ್ಲೆಯ ಉಪನಿರ್ದೇಶಕರು(ಆಡಳಿತ)ರವರಿಗೆ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಅಕ್ಷರದಾಸೋಹ ಸಹಾಯಕ ನಿರ್ದೇಶಕರು ಜಂಟಿಯಾಗಿ ಒಂದು ಪ್ರತಿಯನ್ನು ಸಂಬಂಧಿಸಿದ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವರ ಪ್ರಗತಿ ಪರಿಶೀಲನೆಗೆ ಕಡ್ಡಾಯವಾಗಿ ಸಲ್ಲಿಸುವುದು.
ಮಾರ್ಗಸೂಚಿಯಂತೆ ಆಯಾ ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಿ ಸೂಕ್ತ ಮೇಲ್ವಿಚಾರಣೆಯೊಂದಿಗೆ ಯಶಸ್ವಿಗೊಳಿಸುವಂತೆ ಹಾಗೂ ಅಂತಿಮವಾಗಿ ಈ ಕಛೇರಿಗೆ ಸಮಗ್ರವಾಗಿ ವರದಿಯನ್ನು ಸಲ್ಲಿಸುವಂತೆ ಸಂಬಂಧಿಸಿದ ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ ಹಾಗೂ ಶಿಕ್ಷಣಾಧಿಕಾರಿಗಳು, ಪ್ರಧಾನಮಂತ್ರಿ ಪೋಷಣೆ ಶಕ್ತಿ ನಿರ್ಮಾಣ (ಮಧ್ಯಾಹ್ನ ಉಪಹಾರ ಯೋಜನೆ) ಇವರಿಗೆ ಸೂಚನೆ ನೀಡಲಾಗಿದೆ.












Click it and Unblock the Notifications