ಬಿಜಾಪುರ : ಕೊಳವೆ ಬಾವಿಯಲ್ಲಿ ಅಕ್ಷತಾ ಪತ್ತೆ
ಬಿಜಾಪುರ, ಜೂ. 19 : ಕೊಳವೆ ಬಾವಿಯಲ್ಲಿ ಕೊರೆದಿರುವ ಸುರಂಗ ಮಾರ್ಗ ಮೂಲಕ ಅಕ್ಷತಾ ಪತ್ತೆಯಾಗಿದ್ದಾಳೆ. ಆದರೆ, ಆಕೆ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ರಕ್ಷಣಾ ಪಡೆಗಳು ಶಂಕೆ ವ್ಯಕ್ತಪಡಿಸಿವೆ.
4.30 : ನಾಗಠಾಣಾದಲ್ಲಿ ಕೊಳವೆ ಬಾವಿಗೆ ಬಿದ್ದಿರುವ ಅಕ್ಷತಾಳನ್ನು ರಕ್ಷಿಸುವ ಕಾರ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶದಲ್ಲಿ ಮಳೆ ಬರುತ್ತಿದ್ದು, ಜೋರಾಗಿ ಗಾಳಿ ಬಿಸುತ್ತಿದೆ. ಆದ್ದರಿಂದ ಕೈಯಿಂದ ಸುರಂಗ ಕೊರೆಯುವ ಕಾಮಗಾರಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

3.30 : ಅಕ್ಷತಾ ರಕ್ಷಣೆ ಕಾರ್ಯ ಚುರುಕುಗೊಂಡಿದೆ 35 ಅಡಿ ಆಳಕ್ಕೆ ಸುರಂಗ ಮಾರ್ಗ ತಲುಪಿದ ನಂತರ ಜೆಸಿಬಿ ಮೂಲಕ ಸುರಂಗ ಕೊರೆಯುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದ್ದು, ಹಟ್ಟಿ ಚಿನ್ನದ ಗಣಿಯ ವಿಪತ್ತು ನಿರ್ವಹಣಾ ಪಡೆ, ಕೈಯಿಂದ ಸುರಂಗ ಕೊರೆಯಲು ಆರಂಭಿಸಿದೆ.
2 ಗಂಟೆ : ಬಾಲಕಿ ಅಕ್ಷತಾ ರಕ್ಷಿಸುವ ಕಾರ್ಯ ಮುಂದುವರೆದಿದೆ. ಅಕ್ಷತಾ ಸಿಲುಕಿರುವ ಸ್ಥಳದಿಂದ ಐದು ಅಡಿ ಕೆಳಗೆ ಸುರಂಗ ತೊಡಲು ಹಟ್ಟಿ ಚಿನ್ನದ ಗಣಿ ಅಧಿಕಾರಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಮೂರರಿಂದ ನಾಲ್ಕು ಗಂಟೆಗಳ ಕಾರ್ಯಾಚರಣೆ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
12.30 : ನಾಗಠಾಣಾದಲ್ಲಿ ಕೊಳವೆ ಬಾವಿ ಕೊರೆಸಿದ್ದ ತೋಟದ ಮಾಲೀಕ ರಾಮುಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಳವೆ ಬಾವಿಯನ್ನು ಕೊರೆಸಿ ನೀರು ದೊರಕದೆ ಇದ್ದ ಕಾರಣ ಅದನ್ನು ಮುಚ್ಚದೆ ಆತ ಹಾಗೆಯೇ ಬಿಟ್ಟಿದ್ದ. ಆ ಬಾವಿಗೆ ಮಂಗಳವಾರ ಸಂಜೆ ಅಕ್ಷತಾ ಬಿದ್ದಿದ್ದು, ಅವಳನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ.
11.30 : ರೋಬೋ ಬಳಸಿ ಅಕ್ಷತಾ ರಕ್ಷಿಸುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದ್ದು, ಕೊಳವೆ ಬಾವಿಗೆ ಅಡ್ಡವಾಗಿ ಸುರಂಗ ಮಾರ್ಗ ಕೊರೆದು ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ. ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಮಾಧ್ಯಮಗಳಿಗೆ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
10.30 : ಕೊಳವೆ ಬಾವಿಗೆ ಬಿದ್ದ ಅಕ್ಷತಾ ಮೇಲೆ ಮಣ್ಣು ಬಿದ್ದಿರುವುದರಿಂದ ರಕ್ಷಣಾ ಕಾರ್ಯಚರಣೆಗೆ ಅಡ್ಡಿ ಉಂಟಾಗಿದೆ ಎಂದು ಬಿಜಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ರೋಬೋ ಬಳಸಿ ಮಗುವನ್ನು ರಕ್ಷಿಸಲು ಮಣ್ಣು ಅಡ್ಡಿಯಾಗುತ್ತಿದೆ ಎಂದು ಹೇಳಿದ್ದಾರೆ.
ಸಮಯ 9.30 : ಮಗುವಿನ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ ಹೇಳಿರುವ ಸಚಿವ ಎಂ.ಬಿ.ಪಾಟೀಲ್, ಮಗು ಬಾವಿಗೆ ಬಿದ್ದಾಗ ಪೋಷಕರ ಗಾಬರಿಯಿಂದಾಗಿ ಮತ್ತು ಕಾರ್ಯಾಚರಣೆ ನಡೆಸುವ ವೇಳೆ ಮಣ್ಣು ಬಾವಿಯಲ್ಲಿರುವ ಅಕ್ಷತಾ ಮೇಲೆ ಬಿದ್ದಿರಬಹುದು ಎಂದು ಹೇಳಿದ್ದಾರೆ. ಹಟ್ಟಿ ಗಣಿಯ ಸಿಬ್ಬಂದಿ ಸುರಂಗ ಕೊರೆಯುವ ಕಾರ್ಯವನ್ನು ಮುಂದುವರೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಮಯ 8.30 : ಬಿಜಾಪುರದ ನಾಗಾಠಾಣಾದಲ್ಲಿ ಕೊಳೆವೆ ಬಾವಿಗೆ ಮಂಗಳವಾರ ಸಂಜೆ ಬಿದ್ದ ನಾಲ್ಕು ವರ್ಷದ ಬಾಲಕಿ ಅಕ್ಷತಾಳನ್ನು ರಕ್ಷಿಸುವ ಕಾರ್ಯ ಗುರುವಾರವೂ ಮುಂದುವರೆದಿದೆ. ರಕ್ಷಣಾ ಕಾರ್ಯಚರಣೆಗೆ ಬಂಡೆಗಳು ಅಡ್ಡ ಬಂದಿದ್ದು, ಬಾಲಕಿಯನ್ನು ರಕ್ಷಿಸುವ ಕಾರ್ಯ ವಿಳಂಬವಾಗುತ್ತಿದೆ.
ಬುಧವಾರ ರಾತ್ರಿಯಿಡೀ ರೋಬೋಟ್ ಬಳಸಿ ಮಗುವನ್ನು ಮೇಲೆತ್ತಲು ಪ್ರಯತ್ನ ನಡೆಸಲಾಯಿತು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಸುರಂಗ ತೋಡುವ ಕಾರ್ಯವನ್ನು ಮುಂದುವರೆಸಲಾಗಿದೆ. ಮಣ್ಣು ಕುಸಿತದಿಂದಾಗಿ ರೋಬೋ ಇಳಿಸಿ ಮಗುವನ್ನು ಮೇಲೆತ್ತಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಕ್ಷತಾ ಬಾವಿಗೆ ಬಿದ್ದು ಒಂದು ದಿನ ಕಳೆದಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ, ಅಗ್ನಿಶಾಮಕ ದಳ, ಹಟ್ಟಿ ಚಿನ್ನದ ಗಣಿ ವಿಪತ್ತು ನಿರ್ವಹಣಾ ದಳ ಸೇರಿದಂತೆ ಪೂನಾ ಮತ್ತು ಚೆನ್ನೈನ ತಜ್ಞರು ಅಕ್ಷತಾಳನ್ನು ಮೇಲೆತ್ತಲು ಶತ ಪ್ರಯತ್ನ ಮುಂದುವರೆಸಿದ್ದಾರೆ. [ಬುಧವಾರದ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ]
ಗುರುವಾರ ಬೆಳಗ್ಗೆ ಜೆಸಿಬಿಗಳ ಮೂಲಕ ಸುರಂಗ ತೋಡುವ ಕಾರ್ಯ ನಡೆಯುತ್ತಿದೆ. 35 ಅಡಿ ಆಳದವರೆಗೆ ಸುರಂಗ ಮಾರ್ಗ ಕೊರೆಯಲಾಯ್ತು. ಬಳಿಕ ಅಡ್ಡಲಾಗಿ ಸುರಂಗ ಕೊರೆಯಲು ಮುಂದಾದಾಗ ಬಂಡೆಗಳು ಅಡ್ಡ ಬಂದಿದ್ದರಿಂದ ಸುರಂಗ ಕೊರೆಯುವ ಕಾರ್ಯ ವಿಳಂಬವಾಗುತ್ತಿದೆ. [ಬಾವಿ ಕೊರೆತ : ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳು]
ಕೊಳವೆ ಬಾವಿಯೊಳಗೆ ನಿರಂತರವಾಗಿ ಆಮ್ಲಜನಕ ಪೂರೈಸಲಾಗುತ್ತಿದೆ. ಬಾವಿಯೊಳಗೆ ಕ್ಯಾಮೆರಾ ಬಿಟ್ಟು ಹೆಚ್ಚಿನ ಮಾಹಿತಿ ಸಂಗ್ರಹಿಸುವ ಉದ್ದೇಶವೂ ವಿಫಲವಾಗಿದೆ. ಕ್ಯಾಮರಾಗಳಿಗೆ ಮಣ್ಣು ಅಡ್ಡ ಸಿಗುತ್ತಿದೆ. ಆದರೆ, ಮಗುವಿನ ಚಲನವಲನಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಅಕ್ಷತಾ ಮಂಗಳವಾರ ಸಂಜೆ ಸುಮಾರು 7 ಗಂಟೆಯ ವೇಳೆಗೆ ಕೊಳವೆ ಬಾವಿಗೆ ಬಿದ್ದಿದ್ದಾಳೆ. 24 ಗಂಟೆಗೂ ಹೆಚ್ಚಿನ ಸಮಯದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ.












Click it and Unblock the Notifications