ಮಕ್ಕಳ ಪ್ರವೇಶ ಪರೀಕ್ಷೆ, ಪಾಲಕರ ಸಂದರ್ಶನ ನಡೆಸಿದರೆ ಹುಷಾರ್
ಬೆಂಗಳೂರು, ಫೆ. 3: ಖಾಸಗಿ ಶಾಲೆಗಳಿಗೆ ಹಣ ಹಾಗೂ ಬುದ್ಧಿವಂತ ವಿದ್ಯಾರ್ಥಿಗಳು ಮಾತ್ರ ಬೇಕು. ಜೊತೆಗೆ ಅವರ ಪಾಲಕರು ವಿದ್ಯಾವಂತರಾಗಿರಬೇಕು. ಹಾಗಿದ್ದರೆ ಮಾತ್ರ ಹಲವು ಶಾಲೆಗಳಲ್ಲಿ ಪ್ರವೇಶ ಭಾಗ್ಯ ಸಿಗುತ್ತದೆ. ಏಕೆಂದರೆ ವಿದ್ಯಾವಂತ ಪಾಲಕರ ಬುದ್ಧಿವಂತ ಮಕ್ಕಳು ಮಾತ್ರ ಉತ್ತಮ ರಿಸಲ್ಟ್ ಕೊಡಬಲ್ಲರು. ಹಾಗಾದರೆ ಮಾತ್ರ ಶಾಲೆಗೆ ಡೊನೇಶನ್ ಕೇಳಲು ಹಕ್ಕು ಬರುತ್ತದೆ.
ಆದ್ದರಿಂದ ಸರ್ಕಾರ ಇಂತಹ ಶಾಲೆಗಳಿಗೆ ಮೂಗುದಾರ ಹಾಕಲು ನಿರ್ಧರಿಸಿದೆ. ಶಾಲೆಗೆ ಪ್ರವೇಶ ಪಡೆಯುವಾಗ ಮಕ್ಕಳಿಗೆ ಪ್ರವೇಶ ಪರೀಕ್ಷೆ ಹಾಗೂ ಪಾಲಕರ ಸಂದರ್ಶನ ನಡೆಸುವುದನ್ನು ನಿಷೇಧಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. [ಭಾರತೀಯತೆ ಕೇಸರೀಕರಣ ಅಲ್ಲ]

25 ಸಾವಿರ ರು. ದಂಡ : ಇಂತಹ ಚಟುವಟಿಕೆ ಕಂಡುಬಂದರೆ 25 ಸಾವಿರ ರು. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ಈ ಕುರಿತು ಜ. 24ರಂದೇ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಲಾಗಿದ್ದು, ಇಲಾಖೆ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. [ಆರ್ ಟಿಇ ಸೀಟಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ]
ಮಕ್ಕಳಿಗೆ ಪ್ರವೇಶ ಪರೀಕ್ಷೆ ನಡೆಸುವುದು 2009ರ ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 13(2) (ಬಿ) ಪರಿಚ್ಛೇದದ ಅನ್ವಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಈ ಅಪರಾಧಕ್ಕೆ 25,000 ರು. ವರೆಗೂ ದಂಡ ವಿಧಿಸಬಹುದು ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಪ್ರವೇಶಕ್ಕೂ ಆದೇಶ ಅನ್ವಯಿಸುತ್ತದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನಿಗದಿತ ಮೀಸಲಾತಿ ಸೀಟುಗಳನ್ನು ನೀಡಬೇಕು. ಪ್ರವೇಶ ಪಟ್ಟಿಯನ್ನು ವಿದ್ಯಾರ್ಥಿಯು ಹಿಂದಿನ ವರ್ಗದಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ತಯಾರಿಸಬೇಕೆಂದು ಸ್ಪಷ್ಟವಾಗಿ ಸೂಚಿಸಲಾಗಿದೆ. [ಅನಧಿಕೃತ ಶಾಲೆಗಳ ವಿರುದ್ಧ ಕ್ರಿಮಿನಲ್ ಕೇಸ್]

ಅನುದಾನ ರಹಿತ ಶಾಲೆ : ಇಂತಹ ಶಾಲೆಗಳಲ್ಲಿ 1 ರಿಂದ 5 ನೇ ತರಗತಿವರೆಗೆ ಶಿಕ್ಷಣ ಶುಲ್ಕ ಹಾಗೂ ಅಭಿವೃದ್ಧಿ ಶುಲ್ಕವಾಗಿ 600 ರು.ಗಳನ್ನು ಸಂಗ್ರಹಿಸಬಹುದು. 6, 7 ಮತ್ತು 8ನೇ ತರಗತಿಯಲ್ಲಿ ಶಿಕ್ಷಣೇತರ ಶುಲ್ಕ 38 ರು. ಹಾಗೂ ಅಭಿವೃದ್ಧಿ ಶುಲ್ಕ 600 ರು. ಪಡೆಯಬಹುದು. ಆದರೆ, ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಂದ ಈ ಶುಲ್ಕ ಪಡೆಯುವಂತಿಲ್ಲ.
ಅನುದಾನಿತ ಶಾಲೆ : ಇಂತಹ ಶಾಲೆಗಳಲ್ಲಿ 1 ರಿಂದ 5 ನೇ ತರಗತಿವರೆಗೆ ಶಿಕ್ಷಣ, ಶಿಕ್ಷಣೇತರ ಹಾಗೂ ಅಭಿವೃದ್ಧಿ ಶುಲ್ಕಗಳನ್ನು ಪಡೆಯುವಂತಿಲ್ಲ. ಆದರೆ, 6, 7 ಹಾಗೂ 8ನೇ ತರಗತಿವರೆಗೆ ಶಿಕ್ಷಣೇತರ ಶುಲ್ಕವಾಗಿ 38 ರು. ಹಾಗೂ ಅಭಿವೃದ್ಧಿ ಶುಲ್ಕವಾಗಿ 500 ರು.ಗಳನ್ನು ಪಡೆಯಬಹುದು. 9 ಹಾಗೂ 10 ನೇ ತರಗತಿಯಲ್ಲಿ ಶಿಕ್ಷಣ ಶುಲ್ಕವಾಗಿ 10 ರು. ಹಾಗೂ ವಾರ್ಷಿಕ ಶಿಕ್ಷಣೇತರ ಶುಲ್ಕವಾಗಿ 185 ರು. ಸಂಗ್ರಹಿಸಬಹುದು. [ಆರ್ ಟಿಇ ಹೋರಾಟದಲ್ಲಿ ವಿದ್ಯಾರ್ಥಿಗಳಿಗೆ ಜಯ]
ಶಿಕ್ಷಣ ಹಕ್ಕು ಕಾಯ್ದೆ ಉಲ್ಲಂಘಿಸಿ ಶಿಕ್ಷಣ ಸಂಸ್ಥೆಗಳು ದೇಣಿಗೆ ಅಥವಾ ತಲೆಗಂದಾಯ ಶುಲ್ಕದ ರೂಪದಲ್ಲಿ ಹಣ ಸಂಗ್ರಹಿಸಿದರೆ ಈ ಮೊತ್ತದ ಹತ್ತು ಪಟ್ಟು ದಂಡ ಹಾಕಲಾಗುವುದು.












Click it and Unblock the Notifications