ಬೋರ್ಡ್ ಪರೀಕ್ಷೆ ಗೊಂದಲ: ಶಿಕ್ಷಣ ಇಲಾಖೆ ಸ್ಪಷ್ಟನೆಗಳು
ಬೆಂಗಳೂರು, ಮಾರ್ಚ್ 08: ಕರ್ನಾಟಕ ಹೈಕೋರ್ಟ್ ಆದೇಶದ ಬಳಿಕ ರಾಜ್ಯಮಟ್ಟದ ಬೋರ್ಡ್ (ಪಬ್ಲಿಕ್) ಪರೀಕ್ಷೆ ಕುರಿತು ಹಲವು ಗೊಂದಲಗಳು ಎದ್ದಿವೆ. ಆದರೆ ಮಾರ್ಚ್ 11 ರಿಂದ 18ರ ತನಕ ನಿಗದಿಯಾಗಿದ್ದ 2024-25ನೇ ಸಾಲಿನ ಬೋರ್ಡ್ ಪರೀಕ್ಷೆಗಳು ನಿಗದಿಯಂತೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.
ಗುರುವಾರ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ ಆದೇಶದ ಬಳಿಕ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 5, 8, 9ನೇ ತರಗತಿ ಹಾಗೂ ಪ್ರಥಮ ಪಿಯುಸಿಗೆ (11ನೇ ತರಗತಿ) ಬೋರ್ಡ್ ಪರೀಕ್ಷೆ ನಿಗದಿಯಂತೆ ನಡೆಯಲಿದೆ.

ಶಿಕ್ಷಣ ಇಲಾಖೆ ಸ್ಪಷ್ಟನೆ: ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಬೋರ್ಡ್ ಪರೀಕ್ಷೆಗಳ ಕುರಿತು ಸ್ಪಷ್ಟನೆ ನೀಡಿದೆ. ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ನಡೆಸುವ ಸಂಬಂಧ ಘನ ಉಚ್ಚ ನ್ಯಾಯಾಲಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಸರ್ಕಾರದ ದಿನಾಂಕ 6/10/2023 ಮತ್ತು 9/10/2023ರ ಅಧಿಸೂಚನೆಗಳನ್ನು ಏಕ ಸದಸ್ಯ ಪೀಠದಲ್ಲಿ ರದ್ದು (Quash) ಮಾಡಲಾಗಿರುತ್ತದೆ.
ಸದರಿ ತೀರ್ಪಿನ ವಿರುದ್ಧ ಸರ್ಕಾರವು ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಘನ ಉಚ್ಛ ನ್ಯಾಯಾಲಯದ ದ್ವಿಸದಸ್ಯ ಪೀಠವು ಪ್ರಕರಣವನ್ನು ಆಲಿಸಿ ಸದರಿ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಂಕನ ಕಾರ್ಯವನ್ನು ಮುಂದುವರೆಸಲು ಮಧ್ಯಂತರ ತೀರ್ಪು ನೀಡಿದ್ದು, ಅದರಂತೆ ಈಗಾಗಲೇ ನಿಗಧಿಯಾಗಿರುವ ವೇಳಾಪಟ್ಟಿಯಂತೆ ಮೌಲ್ಯಾಂಕನ ಕಾರ್ಯವು ಯಥಾವತ್ತಾಗಿ ಮುಂದುವರೆಯುತ್ತದೆ ಎಂದು ತಿಳಿಸಲಾಗಿದೆ.
ಮೇಲ್ಮನವಿ ಅರ್ಜಿಯಲ್ಲಿ ಕರ್ನಾಟಕ ಸರ್ಕಾರ 5, 8 ಮತ್ತು 9ನೇ ತರಗತಿಯ 20 ಲಕ್ಷ ವಿದ್ಯಾರ್ಥಿಗಳು ಸೋಮವಾರ (ಮಾರ್ಚ್ 11) ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. 11ನೇ ತರಗತಿ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆ ಬರೆದಿದ್ದಾರೆ ಎಂದು ಹೈಕೋರ್ಟ್‌ಗೆ ತಿಳಿಸಿತ್ತು.
ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದೆ. ಈ ಪೈಕಿ ಒಬ್ಬೇ ಒಬ್ಬ ವಿದ್ಯಾರ್ಥಿ ಅಥವಾ ಪೋಷಕರು ಹೈಕೋರ್ಟ್ ಮೆಟ್ಟಿಲೇರಿಲ್ಲ. ತನ್ನ ಹಿತಾಸಕ್ತಿ ಇಂದ ರುಪ್ಸಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಏಕ ಸದಸ್ಯ ಪೀಠದ ಆದೇಶದಿಂದ ಮಕ್ಕಳಿಗೆ ಪರೀಕ್ಷೆ ವಿಚಾರದಲ್ಲಿ ಅನಿಶ್ಚಿತತೆ ಎದುರಾಗಿದೆ ಎಂದು ವಿವರಿಸಿತ್ತು.
ಹೈಕೋರ್ಟ್ ಆದೇಶವೇನು?: ಕರ್ನಾಟಕ ಸರ್ಕಾರ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 5, 8, 9 ಹಾಗೂ 11ನೇ ತರಗತಿಗೆ ರಾಜ್ಯಮಟ್ಟದ ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ಹೊರಡಿಸಿದ್ದ ಸುತ್ತೋಲೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿತ್ತು.
ಇದರಿಂದಾಗಿ ಮಾರ್ಚ್ 11ರಿಂದ ಆರಂಭಗೊಳ್ಳಲಿರುವ ಬೋರ್ಡ್ ಪರೀಕ್ಷೆ ರದ್ದಾಗಿತ್ತು. ಸರ್ಕಾರದ ಸುತ್ತೋಲೆಯನ್ನು ಪ್ರಶ್ನಿಸಿ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ ಹಾಗೂ ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ ಸಲ್ಲಿಸಿದ್ದ ಪ್ರತ್ಯೇಕ ತಕರಾರು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ 2024ರ ಫೆ.6ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ರವಿ ವಿ. ಹೊಸಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾರ್ಚ್ 6ರಂದು ನೀಡಿತ್ತು.
ಕರ್ನಾಟಕ ಸರ್ಕಾರ ಏಕದಸದಸ್ಯ ಪೀಠದ ಆದೇಶವನ್ನು ಪ್ರಶ್ನೆ ಮಾಡಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಕೆ ಮಾಡಿತ್ತು. ಗುರುವಾರ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ನ್ಯಾಯಮೂರ್ತಿ ಕೆ. ಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ಪೀಠವು ವಾದ-ಪ್ರತಿವಾದ ಆಲಿಸಿತು. ಬಳಿಕ ಏಕಸದಸ್ಯ ನ್ಯಾಯಪೀಠದ ತೀರ್ಪಿಗೆ ತಡೆಯಾಜ್ಞೆ ನೀಡಿ ಮಧ್ಯಂತರ ತೀರ್ಪು ಪ್ರಕಟಿಸಿತು. ಆ ಮೂಲಕ ಬೋರ್ಡ್ ಪರೀಕ್ಷೆಗೆ ಹಸಿರು ನಿಶಾನೆ ತೋರಿಸಿತು.












Click it and Unblock the Notifications