ಡಿ. ಕೆ. ಶಿವಕುಮಾರ್ ಮತ್ತೆ 4 ದಿನ ಇಡಿ ವಶಕ್ಕೆ?
ಬೆಂಗಳೂರು, ಸೆಪ್ಟೆಂಬರ್ 10 : ಮಾಜಿ ಸಚಿವ ಡಿ. ಕೆ. ಶಿವಕುಮಾರ್‌ರನ್ನು ಮತ್ತೆ ಇಡಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಸೆಪ್ಟೆಂಬರ್ 13ರಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.
ಗುರುವಾರ ನವದೆಹಲಿಯ ಇಡಿ ವಿಶೇಷ ನ್ಯಾಯಾಲಯ ಡಿ. ಕೆ. ಶಿವಕುಮಾರ್‌ರನ್ನು ಸೆ.13ರ ತನಕ ವಶಕ್ಕೆ ನೀಡಿತ್ತು. ಆದರೆ, ಇಡಿ ಇನ್ನೂ ನಾಲ್ಕುದಿನ ಪುನಃ ವಶಕ್ಕೆ ಕೇಳಲಿದೆ. ಇದಕ್ಕಾಗಿ ನ್ಯಾಯಾಲಯದ ಮುಂದೆ ಬೇಡಿಕೆ ಇಡಲಿದೆ.

ಒಟ್ಟು 14 ದಿನಗಳ ಕಾಲ ವಶಕ್ಕೆ ನೀಡುವಂತೆ ಇಡಿ ಮನವಿ ಮಾಡಿತ್ತು. ಆದರೆ, 10 ದಿನಗಳ ಕಾಲ ವಶಕ್ಕೆ ನೀಡಲಾಗಿತ್ತು. ಈಗ ಇನ್ನೂ ನಾಲ್ಕು ದಿನ ವಶಕ್ಕೆ ಪಡೆದು ವಿಚಾರಣೆ ನಡೆಸಲು ಇಡಿ ಚಿಂತನೆ ನಡೆಸಿದೆ. ನ್ಯಾಯಾಲಯ ಒಪ್ಪಿಗೆ ಕೊಡಲಿದೆಯೇ? ಕಾದು ನೋಡಬೇಕು.
ಜಾಮೀನು ಪಡೆಯಲು ಪ್ರಯತ್ನ : ಸೆ.13ರಂದು ಡಿ. ಕೆ. ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಜಾಮೀನು ಪಡೆಯಲು ಪ್ರಯತ್ನ ನಡೆಸಲಿದ್ದಾರೆ. ಒಂದು ವೇಳೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ಡಿ. ಕೆ. ಶಿವಕುಮಾರ್ ತಿಹಾರ್ ಜೈಲು ಸೇರಬೇಕಾಗುತ್ತದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ಬಂಧನವಾಗಿದೆ. ಪ್ರಸ್ತುತ ಅವರು ಇಡಿ ವಶದಲ್ಲಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ಜೈಲಿಗೆ ಹೋಗಬೇಕಾಗುತ್ತದೆ. ಆದ್ದರಿಂದ, ಜಾಮೀನಿಗಾಗಿ ಮನವಿ ಮಾಡಲಿದ್ದಾರೆ.
ಒಂದು ವೇಳೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ದೆಹಲಿ ಹೈಕೋರ್ಟ್ ಮುಂದೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು. ಇಡಿ ಸಮನ್ಸ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಅರ್ಜಿ ಹಾಕಲಾಗಿದ್ದು, ಸೆ.11ರಂದು ವಿಚಾರಣೆ ನಡೆಯಲಿದೆ.












Click it and Unblock the Notifications