ಡಿಕೆಶಿ ಪತ್ನಿ, ತಾಯಿಗೆ ಜಾರಿ ನಿರ್ದೇಶನಾಲಯದಿಂದ ಹೊಸ ಸಮನ್ಸ್
ನವದೆಹಲಿ, ಅಕ್ಟೋಬರ್ 21 : ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಪತ್ನಿ ಮತ್ತು ತಾಯಿಗೆ ಹೊಸ ಸಮನ್ಸ್ ನೀಡಲಾಗುತ್ತದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಇಡಿ ಸಮನ್ಸ್ ನೀಡಿರುವುದನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ಸೋಮವಾರ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ನೇತೃತ್ವದ ಪೀಠ ಮುಂದುವರೆಸಿತು. ಇಡಿ ಪರವಾಗಿ ಹಾಜರಿದ್ದ ವಕೀಲರು ಡಿ. ಕೆ. ಶಿವಕುಮಾರ್ ಪತ್ನಿ ಉಷಾ, ತಾಯಿ ಗೌರಮ್ಮಗೆ ಹೊಸ ಸಮನ್ಸ್ ನೀಡಲಾಗುತ್ತದೆ ಎಂದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಡಿ. ಕೆ. ಶಿವಕುಮಾರ್ ಬಂಧಿಸಿದೆ. ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದು, ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಇದೇ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ಪತ್ನಿ ಉಷಾ, ತಾಯಿ ಗೌರಮ್ಮ ವಿಚಾರಣೆ ಇಡಿ ಸಮನ್ಸ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅಕ್ಟೋಬರ್ 15ರಂದು ಹಾಜರಾಗುವಂತೆ ಗೌರಮ್ಮ, ಅಕ್ಟೋಬರ್ 17ರಂದು ಹಾಜರಾಗುವಂತೆ ಉಷಾರಿಗೆ ಸಮನ್ಸ್ ನೀಡಲಾಗಿತ್ತು. 85 ವರ್ಷದ ಗೌರಮ್ಮ ಅನಾರೋಗ್ಯದ ನೆಪವೊಡ್ಡಿ ವಿಚಾರಣೆಗೆ ಗೈರಾಗಿದ್ದರು. ದೆಹಲಿ ಹೈಕೋರ್ಟ್ ಅಕ್ಟೋಬರ್ 21ರ ತನಕ ವಿಚಾರಣೆ ನಡೆಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿತ್ತು.
ಗೌರಮ್ಮ ಪರವಾಗಿ ವಾದ ಮಂಡಿಸಿದ ದಯಾನ್ ಕೃಷ್ಣನ್ ಗೌರಮ್ಮಗೆ 85 ವರ್ಷ. ಸಿಆರ್‌ಪಿಸಿ ಅನ್ವಯ 15 ವರ್ಷಕ್ಕಿಂತ ಕಮ್ಮಿ ಇರುವವರಿಗೆ ಮತ್ತು 65 ವರ್ಷ ಮೇಲ್ಪಟ್ಟವರಿಗೆ ವಿಚಾರಣೆಗೆ ಠಾಣೆಗೆ ಬರುವಂತೆ ಸಮನ್ಸ್ ನೀಡುವಂತಿಲ್ಲ ಎಂದರು.
ಜಾರಿ ನಿರ್ದೇಶನಾಲಯ ಮತ್ತು ಡಿ. ಕೆ. ಶಿವಕುಮಾರ್ ಪತ್ನಿ, ತಾಯಿಯ ಅರ್ಜಿಗಳ ಪ್ರತ್ಯೇಕ ವಾದ ಮಂಡನೆಗೆ ಅವಕಾಶ ನೀಡಿ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿತು.












Click it and Unblock the Notifications