ಡಿವೈಎಸ್‌ಪಿಗಳ ಆತ್ಮಹತ್ಯೆ ಪ್ರಕರಣ, ವರದಿ ಕೇಳಿದ ಎಐಸಿಸಿ
ಬೆಂಗಳೂರು, ಜುಲೈ 11 : ಇಬ್ಬರು ಡಿವೈಎಸ್‌ಪಿಗಳ ಆತ್ಮಹತ್ಯೆ ಪ್ರಕರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಪ್ರಕರಣಗಳಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗುತ್ತಿರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ವರದಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಸೂಚನೆ ನೀಡಿದೆ.
ಮಂಗಳೂರು ಐಜಿ ಕಚೇರಿ ಡಿವೈಎಸ್‌ಪಿ ಎಂ.ಕೆ.ಗಣಪತಿ ಮತ್ತು ಚಿಕ್ಕಮಗಳೂರು ವಿಭಾಗದ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಇದರಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ. [ಸಚಿವ ಜಾರ್ಜ್ ವಿರುದ್ಧ ಗಣಪತಿ ಪತ್ನಿ, ಪುತ್ರರಿಂದ ದೂರು]

ಅದರಲ್ಲೂ ಎಂ.ಕೆ.ಗಣಪತಿ ಅವರು ಆತ್ಮಹತ್ಯೆಗೆ ಮುನ್ನ 'ನನಗೆ ಏನಾದರೂ ಆದರೆ ಅದಕ್ಕೆ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರೇ ಕಾರಣ' ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. [ಜಾರ್ಜ್ ವಿರುದ್ಧ FIR ದಾಖಲಿಸಬೇಕೆ?, ಓದುಗರ ಅಭಿಪ್ರಾಯ]
ಗಣಪತಿ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಹಿಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ವಿವಿಧ ಜಿಲ್ಲೆಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಆದ್ದರಿಂದ, ಎಐಸಿಸಿ ಎರಡೂ ಪ್ರಕರಣದ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದೆ. [ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]
ಕೆಪಿಸಿಸಿ ಅಧ್ಯಕ್ಷ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ವರದಿ ನೀಡುವಂತೆ ಎಐಸಿಸಿ ಸೂಚನೆ ನೀಡಿದೆ. ಮೊತ್ತೊಂದು ಕಡೆ ಜಾರ್ಜ್ ರಾಜೀನಾಮೆ ನೀಡುವ ತನಕ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಲು ಬಿಜೆಪಿ ನಿರ್ಧರಿಸಿದೆ. [DySP ಕಲ್ಲಪ್ಪ ಆತ್ಮಹತ್ಯೆ]
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಠಾಣಾ ವ್ಯಾಪ್ತಿಯಲ್ಲಿರುವ ಮಾವನ ಮನೆಯಲ್ಲಿ ಕಲ್ಲಪ್ಪ ಹಂಡಿಭಾಗ್ ಅವರು ಜುಲೈ 5ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಜುಲೈ 7ರಂದು ಎಂ.ಕೆ.ಗಣಪತಿ ಅವರು ಮಡಿಕೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.












Click it and Unblock the Notifications