DV Sadananda Gowda: ಕಾಂಗ್ರೆಸ್ ನತ್ತ ಡಿ ವಿ ಸದಾನಂದಗೌಡ? ನಾಲ್ಕು ಕ್ಷೇತ್ರಗಳ ಆಫರ್ ಕೊಟ್ಟ ಕೈ ನಾಯಕರು?
ಬೆಂಗಳೂರು, ಮಾರ್ಚ್ 19: ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗಿದ್ದು, ಬಿಜೆಪಿಯಲ್ಲಿನ ಟಿಕೆಟ್ ಹಂಚಿಕೆಯ ಭಿನ್ನಮತದಿಂದಾಗಿ ಹಲವು ಬಿಜೆಪಿ ನಾಯಕರು ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ. ಆರಂಭದಿಂದಲೂ ಜೆಡಿಎಸ್ ಜೊತೆಗಿನ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದ ಸದಾನಂದಗೌಡರಿಗೆ ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ.
ಬಿಜೆಪಿ ಹೈಕಮಾಂಡ್ ಈ ಬಾರಿ ಹಲವು ಹಾಲಿ ಸಂಸದರಿಗೆ ಟಿಕೆಟ್ ಕೊಡದೆ ಶಾಕ್ ನೀಡಿದೆ. ಡಿವಿ ಸದಾನಂದಗೌಡ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಆದರೆ, ಈ ಬಾರಿ ಅವರಿಗೆ ಟಿಕೆಟ್ ನಿರಾಕರಿಸಿರುವ ಬಿಜೆಪಿ ಹೈಕಮಾಂಡ್ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರದಿಂದ ಟಿಕೆಟ್ ನೀಡಿದೆ. ಇದರಿಂದ ಅಸಮಾಧಾನಗೊಂಡಿರುವ ಡಿವಿಎಸ್ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ.

ಈಗಾಗಲೇ ಟಿಕೆಟ್ ಕೈ ತಪ್ಪಿದ ಹಾಲಿ ಬಿಜೆಪಿ ಸಂಸದರನ್ನ ಕಾಂಗ್ರೆಸ್ ನಾಯಕರು ಸಂಪರ್ಕಿಸಿದ್ದು, ಬಿಜೆಪಿ ನಾಯಕ ಡಿವಿ ಸದಾನಂದಗೌಡ ಅವರಿಗೆ ಕಾಂಗ್ರೆಸ್ ನಾಲ್ಕು ಕ್ಷೇತ್ರಗಳನ್ನು ಆಫರ್ ಮಾಡಿದೆ ಎನ್ನಲಾಗಿದೆ. ಅದರಲ್ಲಿ ಬೆಂಗಳೂರು ಉತ್ತರ, ಮೈಸೂರು - ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ - ಚಿಕ್ಕಮಗಳೂರು ಕ್ಷೇತ್ರಗಳು ನೀಡಿದೆ ಎಂದು ಹೇಳಲಾಗಿದೆ. ಆದರೆ, ಹಾಲಿ ಸಂಸದರಾಗಿರುವ ಡಿವಿ ಸದಾನಂದಗೌಡರ ಪತ್ನಿ ಕೊಡಗಿನವರಾಗಿರುವುದರಿಂದ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಿಂದ ಸದಾನಂದಗೌಡರನ್ನು ಕಣಕ್ಕಿಳಿಸುವ ತಯಾರಿಯನ್ನ ಕಾಂಗ್ರೆಸ್ ನಡೆಸಿದೆ ಎನ್ನಲಾಗಿದೆ.
ಮೈಸೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ನಾಯಕರಿಗೆ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಹೀಗಾಗಿ ಕಾಂಗ್ರೆಸ್ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದು, ಸಮರ್ಥ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮತ್ತಿತರ ನಾಯಕರು ಡಿವಿ ಸದಾನಂದಗೌಡ ಅವರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ ವಿ ಸದಾನಂದಗೌಡರ ಹೇಳಿಕೆ ಕುತೂಹಲ ಮೂಡಿಸಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿರುದ್ಧ ಡಿವಿ ಸದಾನಂದಗೌಡ ಅವರನ್ನ ಕಣಕ್ಕಿಳಿಸುವ ಚಿಂತನೆಯನ್ನ ಕಾಂಗ್ರೆಸ್ ಹಾಕಿಕೊಂಡಿದೆ. ಈ ಕುರಿತು ಕಾಂಗ್ರೆಸ್ ನಾಯಕರು ಡಿವಿ ಸದಾನಂದಗೌಡ ಜೊತೆ ಮಾತುಕತೆ ನಡೆಸುತ್ತಿದ್ದು, ಇಂದು ( ಮಂಗಳವಾರ) ಸುದ್ದಿಗೋಷ್ಠಿ ಕರೆದಿರುವ ಡಿವಿ ಸದಾನಂದಗೌಡರು ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಘೋಷಣೆ ಮಾಡುವ ನಿರೀಕ್ಷೆ ಇದೆ.
ಇತ್ತ ಸ್ವಾರ್ಥಕ್ಕಾಗಿ ಟಿಕೆಟ್ ತಪ್ಪಿಸಿದರೆ ಯೋಚನೆ ಮಾಡಬೇಕಾಗುತ್ತದೆ ಎಂದು ಸದಾನಂದಗೌಡ್ರು ಹೇಳಿದ್ದು, ಈ ಮೂಲಕ ಬಿಜೆಪಿ ತೊರೆಯುವ ಬಗ್ಗೆ ಪರೋಕ್ಷ ಮಾತುಗಳನ್ನಾಡಿದ್ದಾರೆ. ಕುಟುಂಬದ ಜೊತೆಗೆ ಚರ್ಚೆ ನಡೆಸಿ ತೀರ್ಮಾನವನ್ನ ತೆಗೆದುಕೊಳ್ಳುವುದಾಗಿ ಸದಾನಂದಗೌಡ್ರು ಹೇಳಿದ್ದು, ಸದಾನಂದಗೌಡರ ನಡೆ ತೀವ್ರ ಕುತೂಹಲವನ್ನ ಕೆರಳಿಸಿದೆ.












Click it and Unblock the Notifications