2 ಕಾರಣಕ್ಕೆ ಜಾತಿಗಣತಿ ವರದಿ ಸದ್ಯಕ್ಕೆ ಡೌಟ್, ಏನದು
caste census report: ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಜಾತಿಗಣತಿ ವರದಿ ಸದ್ಯಕ್ಕೆ ಮಂಡನೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ರಾಜ್ಯದಲ್ಲಿ ಇದೀಗ ಉಪ ಚುನಾವಣೆಯ ಕಾವು ಜೋರಾಗಿದೆ. ರಾಜ್ಯದ ಮೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು, ಜಾತಿಗಣತಿ ವರದಿಗೆ ಬ್ರೇಕ್ ಹಾಕಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ನ ಪ್ರಭಾವಿ ನಾಯಕರೇ ಜಾತಿ ಗಣತಿ ವರದಿಯ ಬಗ್ಗೆ ಅಪಸ್ವರವೆತ್ತಿದ್ದಾರೆ.
ದೇಶದಲ್ಲಿ ಮೊಟ್ಟ ಮೊದಲ ಬಾರಿ ಜಾತಿಗಣತಿ ನಡೆಸಿದ ರಾಜ್ಯ ನಮ್ಮದು. ಇದನ್ನು ಜಾರಿ ಮಾಡಿಯೇ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು. ಆದರೆ, ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರೇ ಈ ಜಾತಿ ಗಣತಿ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದರಲ್ಲಿ ಕೆಲವೊಂದು ದೋಷಗಳಿವೆ ಎಂದು ದೂರಿದ್ದರು.

ಈ ನಡುವೆ ಜಾತಿಗಣತಿ ವರದಿಯನ್ನು ಸಚಿವ ಸಂಪುಟ ಸಭೆಯ ಮುಂದೆ ಮಂಡನೆ ಮಾಡಿ, ಅನುಮೋದನೆ ಪಡೆದುಕೊಳ್ಳುವ ಲೆಕ್ಕಾಚಾರಾವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿತ್ತು. ಆದರೆ, ಇದು ಸದ್ಯಕ್ಕೆ ಈಡೇರುವ ಲಕ್ಷಣ ಕಾಣಿಸುತ್ತಿಲ್ಲ. ಇದಕ್ಕೆ ಮುಖ್ಯವಾಗಿ ಎರಡು ವಿಷಯಗಳು ಕಾರಣವಾಗಿವೆ. ಮೊದಲನೆಯದಾಗಿ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಅಲ್ಲದೇ, ಪ್ರಮುಖ ಸಮುದಾಯದಿಂದ ಜಾತಿಗಣತಿ ವರದಿ ಅಂಗೀಕಾರಕ್ಕೆ ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ, ಸರ್ಕಾರವೂ ಸಹ ಎಚ್ಚರಿಕೆಯ ಹೆಜ್ಜೆಗಳನ್ನು ಹಿಡುತ್ತಿದೆ.
ಚುನಾವಣಾ ನೀತಿ ಸಂಹಿತೆ ಜಾರಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಾದ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗವು ನೀತಿ ಸಂಹಿತೆ ಜಾರಿ ಮಾಡಿದೆ. ಈ ಮೂರು ವಿಧಾನಸಭಾ ಕ್ಷೇತ್ರದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ, ಈಗ ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಈ ಕ್ಷೇತ್ರಗಳ ಮೇಲೂ ಪ್ರಭಾವ ಬೀರುತ್ತದೆ. ಅಲ್ಲದೇ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವ ಸಂದರ್ಭದಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಜಾಹೀರಾತು ನೀಡುವಂತಿಲ್ಲ. ಪ್ರಚಾರ ಮಾಡುವುದು ಹಾಗೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಸಹ ಚುನಾವಣೆ ನೀತಿ ಸಂಹಿತೆ ಎಂದು ಪರಿಗಣಿಸಲಾಗುತ್ತದೆ.
ಚುನಾವಣೆ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಹಿಂದಡಿ ಇರಿಸಿದೆ.
ಹೀಗಾಗಿ, ಜಾತಿಗಣತಿ ವರದಿ ಸದ್ಯಕ್ಕೆ ಮಂಡನೆಯಾಗುವ ಲಕ್ಷಗಳು ಕಾಣಿಸುತ್ತಿಲ್ಲ.
ಪ್ರಮುಖ ಸಮುದಾಯಗಳ ವಿರೋಧ: ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದಕ್ಕಿಂತ ಮುಂಚೆಯೂ ಜಾತಿಗಣತಿ ವರದಿಯನ್ನು ಸರ್ಕಾರ ಸಚಿವ ಸಂಪುಟ ಸಭೆಯ ಮುಂದೆ ಇರಿಸಿ, ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಅವಕಾಶ ಇತ್ತು. ಆದರೆ, ಮುಡಾ ಹಗರಣದಲ್ಲಿ ರಾಜ್ಯ ಸರ್ಕಾರ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈ ನಡುವೆ ಹಳೇ ಹುಬ್ಬಳ್ಳಿ ಕೇಸ್ ಹಿಂಪಡೆದಿದ್ದು ಸೇರಿದಂತೆ ಹಲವು ವಿಷಯಗಳ ಚರ್ಚೆ ಜೋರಾಗಿದ್ದವು. ಇದು ತಣ್ಣಗಾಗುವುದರ ಒಳಗೆ ರಾಜ್ಯದಲ್ಲಿ ಮಳೆಯ ಆರ್ಭಟ ಶುರುವಾಯಿತು.
ಈ ನಡುವೆ ಕೆಲವು ಸಮುದಾಯಗಳು ಜಾತಿಗಣತಿ ವರದಿಗೆ ತಮ್ಮ ವಿರೋಧವನ್ನು ದಾಖಲಿಸಿವೆ. ಆ ಸಮುದಾಯಗಳಲ್ಲಿ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದವರು ಪ್ರಮುಖವಾಗಿದ್ದಾರೆ. ಸರ್ಕಾರ ಈ ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಾತಿಗಣತಿ ವರದಿ ಮಂಡನೆ ಮಾಡುವುದಕ್ಕೆ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.












Click it and Unblock the Notifications