ಕುಡಿಯುವ ನೀರಿಗಾಗಿ ಮಹಾರಾಷ್ಟ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ
ಬೆಂಗಳೂರು, ಮೇ 31; ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ನದಿಗೆ ನೀರು ಹರಿಸಬೇಕು ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಬೇಸಿಗೆಗೆ ಜನರು ಬಸವಳಿದಿದ್ದು, ಕುಡಿಯುವ ನೀರಿನ ಕೊರತೆ ಉಂಟಾಗಿದೆ.
ಬುಧವಾರ ಸಿದ್ದರಾಮಯ್ಯ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಪತ್ರ ಬರೆದಿದ್ದಾರೆ. ಕೊಯ್ನಾ ಮತ್ತು ಉಜ್ಜಿನಿ ಡ್ಯಾಂನಿಂದ ಕುಡಿಯುವ ನೀರಿಗಾಗಿ ನದಿಗೆ ನೀರು ಬಿಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಉತ್ತರ ಕರ್ನಾಟಕ ಭಾಗದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳು ಮಾರ್ಚ್ 2023ರಿಂದಲೇ ಕುಡಿಯುವ ನೀರಿನ ಕೊರತೆ ಎದುರಿಸುತ್ತಿವೆ. ಮಾನವೀಯತೆ ದೃಷ್ಟಿಯಿಂದ ನೀರು ಹರಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಪತ್ರದ ಸಾರಾಂಶ; ಕೊಯ್ನಾ ಜಲಾಶಯದಿಂದ ಕೃಷ್ಣ ನದಿಗೆ ಮತ್ತು ಉಜ್ಜಿನಿ ಜಲಾಶಯದಿಂದ ಭೀಮಾ ನದಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಹರಿಸಬೇಕು ಎಂದು ಸಿದ್ದರಾಮಯ್ಯ ಮಹಾರಾಷ್ಟ್ರದ ಸಿಎಂ ಮತ್ತು ಡಿಸಿಎಂಗೆ ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಬೇಸಿಗೆಯ ಆರಂಭದಲ್ಲಿ ಕರ್ನಾಟಕ ಸರ್ಕಾರ ಕೊಯ್ನಾ ಜಲಾಶಯದಿಂದ ಕೃಷ್ಣ ನದಿಗೆ 3 ಟಿಎಂಸಿ ಅಡಿ ಮತ್ತು ಉಜ್ಜಿನಿ ಜಲಾಶಯದಿಂದ ಭೀಮಾ ನದಿಗೆ 3 ಟಿಎಂಸಿ ಅಡಿ ನೀರು ಹರಿಸಬೇಕು ಎಂದು ಮನವಿ ಸಲ್ಲಿಕೆ ಮಾಡಿತ್ತು.

ಈ ಮನವಿಯನ್ನು ಪುರಸ್ಕರಿಸಿ ಜನ ಮತ್ತು ಜಾನುವಾರುಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಹಾರಾಷ್ಟ್ರ ಸರ್ಕಾರ ಕೃಷ್ಣ ನದಿಗೆ 1 ಟಿಎಂಸಿ ಅಡಿ ನೀರು ಹರಿಸಿತ್ತು. ಮೇ 2023ರ ಮೊದಲ ವಾರದಲ್ಲಿ ನೀರು ಹರಿಸಿದ್ದಕ್ಕೆ ಸಿದ್ದರಾಮಯ್ಯ ಪತ್ರದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಈ ಭಾರೀಯ ಬೇಸಿಗೆ ಭೀಕರವಾಗಿದೆ. ಜನ, ಜಾನುವಾರುಗಳಿಗೆ ನೀರಿನ ಅಗತ್ಯವಿದೆ. ನೈಋತ್ಯ ಮುಂಗಾರು ಮಳೆ ಇನ್ನೂ ಈ ಭಾಗದಲ್ಲಿ ಆರಂಭವಾಗಿಲ್ಲ ಎಂದು ಪತ್ರದಲ್ಲಿ ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಕೊಯ್ನಾ ಜಲಾಶಯದಿಂದ ಕೃಷ್ಣ ನದಿಗೆ 2 ಟಿಎಂಸಿ ಅಡಿ ಮತ್ತು ಉಜ್ಜಿನಿ ಜಲಾಶಯದಿಂದ 3 ಟಿಎಂಸಿ ಅಡಿ ನೀರನ್ನು ಭೀಮಾ ನದಿಗೆ ಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ವಿವಿಧ ಜಿಲ್ಲೆಗಳಲ್ಲಿ ಅಬ್ಬರಿಸುತ್ತಿದೆ. ಆದರೆ ನದಿಗಳಲ್ಲಿ ನೀರು ಹರಿಯುವಷ್ಟು ಮಳೆಯಾಗಿಲ್ಲ. ಮತ್ತೊಂದು ಕಡೆ ಬಿಸಿಲಿನ ಝಳವೂ ಅಧಿಕವಾಗಿದ್ದು, ಸುರಿದ ಮಳೆ ಯಾವುದಕ್ಕೂ ಸಾಕಾಗುತ್ತಿಲ್ಲ. ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಈ ಪತ್ರವನ್ನು ನೆರೆ ರಾಜ್ಯಕ್ಕೆ ಬರೆದಿದ್ದಾರೆ.
ಅಧಿಕಾರಿಗಳಿಗೆ ಸೂಚನೆ; ರಾಯಚೂರು ಜಿಲ್ಲೆಯ ರೇಖಲಮರಡಿ ಬಳಿಯ ಗೊರೆಬಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡವರಿಗೆ ಸೂಕ್ತ ಚಿಕಿತ್ಸೆ ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಗ್ರಾಮಸ್ಥರಿಗೆ ಶುದ್ಧ ನೀರು ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಘಟನೆ ಸಂಬಂಧ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶ ನೀಡಿದ್ದರು.
ಕಲುಷಿತ ನೀರು ಕುಡಿದು ಜನರು ಅಸ್ವಸ್ಥಗೊಂಡ ಗ್ರಾಮಕ್ಕೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಬೇಕು. ನೀರಿನ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಿ ತಕ್ಷಣ ವರದಿ ತರಿಸಿಕೊಳ್ಳಬೇಕು. ವರದಿ ಆಧಾರದಲ್ಲಿ ಗ್ರಾಮಸ್ಥರ ಕೂಲಂಕುಷ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ವಿಷಪೂರಿತ ನೀರಿನ ಮೂಲಗಳನ್ನು ಬಂದ್ ಮಾಡಬೇಕು ಎಂದು ಅವರು ಸೂಚಿಸಿದ್ದರು.












Click it and Unblock the Notifications