Dr G Parameshwar: ನಾನು ಈ ಹಿಂದೆ ಡಿಸಿಎಂ ಆಗಿದ್ದೆ, ನನಗೂ ಡಿಸಿಎಂ ಸ್ಥಾನ ಕೊಡಲೇಬೇಕು:
ಜಿ. ಪರಮೇಶ್ವರ್: 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದ ಸರ್ಕಾರ ರಚನೆಗೆ ಸಿದ್ಧವಾಗಿದೆ. ಸಿಎಂ ಸ್ಥಾನಕ್ಕಾಗಿ ಕಳೆದ ಐದು ದಿನಗಳಿಂದ ನಡೆದ ಜಟಾಪಟಿಯ ನಂತರ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದೆ.
ಶನಿವಾರ, ಮೇ 20ರಂದು ಕರ್ನಾಟಕ ಸಿಎಂ ಆಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಿಎಂ ಸ್ಥಾನಕ್ಕಾಗಿ ನಡೆದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ತೀವ್ರ ಪೈಪೋಟಿಯಲ್ಲಿ ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯಗೆ ಮಣೆ ಹಾಕಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಗುರುವಾರ ಬೆಳಗ್ಗೆ ದೆಹಲಿಯಲ್ಲಿ ಸಿಎಂ ಮತ್ತು ಡಿಸಿಎಂ ಸ್ಥಾನಕ್ಕೆ ಹೆಸರು ಘೋಷಿಸಿದ ಬೆನ್ನಲ್ಲೇ, ಇದೀಗ ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಿ. ಪರಮೇಶ್ವರ್ ಅವರು ಕ್ಯಾತೆ ತೆಗೆದಿದ್ದಾರೆ.
"ನಾನು ಈ ಹಿಂದೆ ಡಿಸಿಎಂ ಆಗಿದ್ದವನು, ಹಾಗಾಗಿ ಈಗ ನನಗೂ ಡಿಸಿಎಂ ಸ್ಥಾನ ಕೊಡಲೇಬೇಕು. ಎಲ್ಲ ಸಮುದಾಯಗಳನ್ನು ಪರಿಗಣಿಸಬೇಕು. ಒಬ್ಬರೇ ಅಧಿಕಾರದಲ್ಲಿರಬೇಕು ಎಂದರೆ ಹೇಗೆ? ಎಲ್ಲರ ನಾಯಕತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ," ಎಂದು ಡಾ. ಜಿ. ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸಿಎಂ ಆಯ್ಕೆ ಕಾಂಗ್ರೆಸ್ ವರಿಷ್ಠರಿಗೆ ಕಗ್ಗಂಟಾಗಿ ಪರಿಣಮಿಸಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕಿತ್ತಾಟದ ನಡುವೆಯೇ ಮಾಜಿ ಡಿಸಿಎಂ ಕೂಡ ಆಗಿರುವ ಡಾ. ಜಿ. ಪರಮೇಶ್ವರ್ ಅವರು ತಾನೂ ಸಿಎಂ ರೇಸ್‌ನಲ್ಲಿ ಇರುವುದಾಗಿ ಹೇಳಿದ್ದರು.
ಮುಖ್ಯಮಂತ್ರಿ ಆಗಲು ಸಿದ್ಧ, ನಾನೂ 50 ಶಾಸಕರನ್ನು ಕರೆದೊಯ್ಯಬಹುದು ಎಂದು ಹೇಳಿದ್ದ ಪರಮೇಶ್ವರ್, ""ನಾನು ಮುಖ್ಯಮಂತ್ರಿ ಆಗಲು ಸಿದ್ಧನಿದ್ದೇನೆ. ನಾನೂ 50 ಶಾಸಕರನ್ನು ಕರೆದೊಯ್ಯಬಹುದು. ಆದರೆ, ಎಂದಿಗೂ ಲಾಬಿ ಮಾಡುವುದಿಲ್ಲ ಎಂದು ಜಿ. ಪರಮೇಶ್ವರ್ ಹೇಳಿದ್ದರು. ಈ ಮೂಲಕ, ತಮ್ಮನ್ನು ಮುಖ್ಯಮಂತ್ರಿ ಮಾಡಿದರೆ ಸರ್ಕಾರ ಮುನ್ನಡೆಸಲು ಸಿದ್ಧ,'' ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದರು.
""ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ತೆಗೆದುಕೊಂಡು ಸರ್ಕಾರ ಮುನ್ನಡೆಸಲು ಹೇಳಿದರೆ, ನಾನು ಆ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧನಿದ್ದೇನೆ. ಅವಕಾಶವನ್ನು ನಿರಾಕರಿಸುವುದಿಲ್ಲ. ನಾನು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಎಂಬುದು ಹೈಕಮಾಂಡ್‌ಗೂ ತಿಳಿದಿದೆ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಉಪ ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಲಾಬಿ ಮಾಡುವ ಬದಲು ಸುಮ್ಮನಿದ್ದೇನೆ, ಹೀಗೆಂದ ಮಾತ್ರಕ್ಕೆ ನಾನು ಅನರ್ಹನಲ್ಲ,'' ಎಂದು ಮಾತನಾಡಿದ್ದಾರೆ.
ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ""ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ಒಬ್ಬರೇ ಡಿಸಿಎಂ ಆಗಿರಲಿದ್ದಾರೆ,'' ಎಂದು ತಿಳಿಸಿದ್ದಾರೆ.
ಈ ಮೂಲಕ ಡಿಸಿಎಂ ಆಸೆಯಲ್ಲಿದ್ದ ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರಿಗೆ ನಿರಾಸೆಯಾಗಿದೆ. ಇನ್ನು ಸಚಿವ ಸ್ಥಾನಕ್ಕಾಗಿ ಯಾವ ರೀತಿಯ ಲಾಬಿ ನಡೆಯಬಹುದು ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications