ಜಿಟಿಟಿಸಿ ಸ್ಥಾಪಿಸಿದ 20 ಕೋಟಿಯ 'ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ'ಕ್ಕೆ ಅಶ್ವಥ್ ನಾರಾಯಣ ಚಾಲನೆ
ಹುಬ್ಬಳ್ಳಿ, ಡಿಸೆಂಬರ್ 27: ಇಲ್ಲಿನ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ (ಜಿಟಿಟಿಸಿ) ವತಿಯಿಂದ 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಉದ್ಘಾಟಿಸಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವ್ಯಾಪ್ತಿಯಲ್ಲಿನ ಕುಂದು ಕೊರತೆ ಆಲಿಸಲು ಉಚಿತ ಸಹಾಯವಾಣಿಗೂ (ನಂ: 155267) ಸಚಿವರು ಇದೇ ವೇಳೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅಶ್ವಥ್ ನಾರಾಯಣ ಅವರು, ಬಹುಕೌಶಲ್ಯ ಅಭಿವೃದ್ಧಿ ಸಂಬಂಧಿಸಿದಂತೆ ಅಗತ್ಯವಿರುವವರಿಗೆ ಉದ್ಯಮಶೀಲತೆಗೆ ಸಂಬಂಧಿಸಿದ ಎಲ್ಲ ಮಾರ್ಗದರ್ಶನ ಮಾಡಲಾಗುವುದು. ರಾಜ್ಯದ ವಿವಿಧೆಡೆಯಿಂದ ಬರುವ ಕರೆಗಳನ್ನು ಇಲ್ಲಿ ನಿರ್ವಹಿಸಲಾಗುವುದು ಎಂದು ಅವರು ಹೇಳಿದರು.
ನೂತನವಾಗಿ ಸ್ಥಾಪನೆಯಾದ ಈ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಒಟ್ಟು 60 ಅಲ್ಪಾವಧಿ ಮತ್ತು ದೀರ್ಘಾವಧಿ ಕೋರ್ಸುಗಳಿವೆ. ಇದರಿಂದ ಸ್ಥಳೀಯ ಯುವಜನರು ಉದ್ಯೋಗ ಗಿಟ್ಟಿಸಿಕೊಳ್ಳಲು ನೆರವಾಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉದ್ಯೋಗ ಸೃಜನೆಯಾಗುತ್ತವೆ. ಮೊದಲ ಮೂರು ಕೈಗಾರಿಕಾ ಕ್ರಾಂತಿಗಳ ಲಾಭದಿಂದ ನಾವು ವಂಚಿತವಾರಾಗಿದ್ದೇವೆ. ಅದರಂತೆ ಈ ಭಾರಿ ಆಗದ ರೀತಿಯಲ್ಲಿ ಸರ್ಕಾರ ಎಚ್ಚರಿಕೆ ವಹಿಸಿದ್ದು, ಅಭಿವೃದ್ಧಿ ಮೂಲಕ ಕೈಗಾರಿಕಾ ವಲಯದಲ್ಲಿ ಕ್ರಾಂತಿ ತರಲಾಗಿದೆ ಎಂದು ತಿಳಿಸಿದರು.

ತಾಂತ್ರಿಕೇತರ ಕೋರ್ಸ್‌ಗಳಿಂದ ತರಬೇತಿ
ಸದ್ಯಕ್ಕೆ ಸೆಮಿಕಂಡಕ್ಟರ್ ಮತ್ತು ಚಿಪ್ ತಯಾರಿಕೆಯಲ್ಲಿ ತೈವಾನ್ ದೇಶ ಮುಂಚೂಣಿಯಲ್ಲಿದೆ. ಈಗ ರಾಜ್ಯದಲ್ಲಿ ಇವೆರಡೂ ಕ್ಷೇತ್ರಗಳತ್ತ ಆದ್ಯ ಗಮನ ಹರಿಸಿದೆ. ಇನ್ನು ಕೆಲವೇ ವರ್ಷಗಳಲ್ಲಿ ನಾವು ಇದರಲ್ಲಿ ಅಗ್ರಸ್ಥಾನವನ್ನು ಅಲಂಕರಿಸಲಿದೆ. ಇಡೀ ದೇಶದಲ್ಲಿ ರಾಜ್ಯದಲ್ಲಿ ಮಾತ್ರ ತಾಂತ್ರಿಕೇತರ ಕೋರ್ಸುಗಳ ವಿದ್ಯಾರ್ಥಿಗಳಿಗೂ ಕೌಶಲ್ಯಾಭಿವೃದ್ಧಿ ತರಬೇತಿ ಒದಗಿಸಲಾಗುತ್ತಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯಲ್ಲೇ ಇದನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಯದಂತೆ ಆತ್ಮನಿರ್ಭರ ಭಾರತದ ನಿರ್ಮಾಣ ಇಂದಿನ ಗುರಿಯಾಗಿದೆ. ಇದಕ್ಕೆ ಗುಣಮಟ್ಟದ ಶಿಕ್ಷಣ ಮತ್ತು ಆಧುನಿಕ ಕೌಶಲ್ಯಾಭಿವೃದ್ಧಿ ಅತ್ಯಗತ್ಯವಾಗಿವೆ ಎಂದು ಸಚಿವರು ಶಿಕ್ಷಣ ಮತ್ತು ಕೌಶಲ್ಯಗಳ ಮಹತ್ವವನ್ನು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ (ಜಿಟಿಟಿಸಿ) ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.












Click it and Unblock the Notifications