RADAR: ಧಾರವಾಡ, ಮಂಗಳೂರು ಸೇರಿ ರಾಜ್ಯದ 5 ಕಡೆ ಡಾಪ್ಲರ್ ರಾಡಾರ್ ಸ್ಥಾಪನೆ: ಹವಾಮಾನ ಮಾಹಿತಿ ಮತ್ತಷ್ಟು ನಿಖರ
ಬೆಂಗಳೂರು, ಜನವರಿ 07: ಕರ್ನಾಟಕದ ವಿವಿಧೆಡೆ ಆಗಾಗ ನೆರೆ, ಪ್ರವಾಹ, ಭಾರೀ ಮಳೆ, ನೈಸರ್ಗಿಕ ವಿಕೋಪಗಳಂತಹ ಸಮಸ್ಯೆಗಳು ಆಗಾಗ ಘಟಿಸುತ್ತಲೇ ಇರುತ್ತವೆ. ಇವುಗಳ ಕುರಿತು ಆರಂಭದಲ್ಲೇ ನಿಖರ ಮಾಹಿತಿ, ಮುನ್ಸೂಚನೆ ಪತ್ತೆಗೆ ಸಹಾಯವಾಗುವ 'ಡಾಪ್ಲರ್ ವೆದರ್ ಡಾಪ್ಲರ್' (X-band Doppler RADAR) ಅನ್ನು ಕರ್ನಾಟಕದ ಐದು ಕಡೆಗಳಲ್ಲಿ ತಲಾ ಒಂದರಂತೆ ಸ್ಥಾಪಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ (IMD) ಒಟ್ಟು 150 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹವಾಮಾನ ವೈಪರಿತ್ಯಗಳ ಮತ್ತಷ್ಟು ನೈಜ ಮಾಹಿತಿ ಕಂಡು ಹಿಡಿಯಲು, ಸಂಭವನೀಯ ಅಪಾಯ ತಪ್ಪಿಸಲು ಐದು ರಾಡಾರ್ ಸ್ಥಾಪನೆಗೆ ಅನುಮತಿಸಲಾಗಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರಾ ಅವರು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಧಾರವಾಡ, ಬೆಂಗಳೂರು, ಮಂಗಳೂರು, ಚಿತ್ರದುರ್ಗ, ಬಳ್ಳಾರಿಯಲ್ಲಿ ರಾಡಾರ್ ಸ್ಥಾಪನೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕಾರವಾರದಲ್ಲೂ ಡಾಪ್ಲರ್ ರಾಡಾರ್ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈ ಹವಾಮಾನ ಎಕ್ಸ್ ಬ್ಯಾಂಡ್ ಡಾಪ್ಲರ್ ರಾಡಾರ್ ಕರ್ನಾಟಕಕ್ಕೆ ತುರ್ತು ಅಗತ್ಯವಿದೆ ಎಂದು ವಿವಿಧ ಸಚಿವರು ಕೇಂದ್ರಕ್ಕೆ ಮನವಿ ಮಾಡಿದ್ದರು. ಒಂದು ರಾಡಾರ್ 150 ರಿಂದ 175 ಕಿಮೀಗಳಿಗೂ ಹೆಚ್ಚು ದೂರದ ಪ್ರದೇಶಗಳವರೆಗೆ ಹವಾಮಾನದಲ್ಲಾಗುವ ಬದಲಾವಣೆಗಳನ್ನು ಪತ್ತೆ ಮಾಡುತ್ತದೆ. ಇದು ಮುಂಚಿತವಾಗಿ ಮುನ್ಸೂಚನೆ ನೀಡಲು ಹವಾಮಾನ ಇಲಾಖೆಗೆ ಅನುಕೂಲ ಕಲ್ಪಿಸುತ್ತದೆ.
ಇನ್ನೂ ಉತ್ತರ ಕರ್ನಾಟಕದ ಧಾರವಾಡದಲ್ಲಿ ಹೊಸ ರಾಡಾರ್ ಸ್ಥಾಪನೆ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ರೈತರ ಹಿತದೃಷ್ಟಿಯಿಂದ ನಾನು 2021ರಲ್ಲಿ ಉತ್ತರ ಕರ್ನಾಟಕದ ಭಾಗಕ್ಕೆ X-band Doppler RADAR (ಎಕ್ಸ್-ಬ್ಯಾಂಡ್ ಡಾಪ್ಲರ್ ರಾಡಾರ್)ನ ತುರ್ತು ಅಗತ್ಯವಿದೆ ಎಂದು ತಂತ್ರಜ್ಞಾನ ಮತ್ತು ಭೂ ವಿಜ್ಞಾನಗಳ ರಾಜ್ಯ ಸಚಿವರಾದ ಡಾ ಜಿತೇಂದ್ರ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದೆ.

ರಾಜ್ಯದ ಮನವಿಗೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಇದೀಗ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (UAS)ನಲ್ಲಿ RADAR (ರಾಡಾರ್) ಸ್ಥಾಪನೆಗೆ ಗೊಳ್ಳುತ್ತಿದೆ. ಶೀಘ್ರದಲ್ಲೇ ಸ್ಥಾಪನೆ ಪೂರ್ಣಗೊಳ್ಳಲಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ರಾಡಾರ್ ಕಾರ್ಯ, ಪ್ರಯೋಜನೆ ವಿವರಿಸಿದ ಕೇಂದ್ರ ಸಚಿವ
ಈಗಾಗಲೇ ನನ್ನ ಕೋರಿಕೆಯ ಮೇರೆಗೆ ಭಾರತ ಹವಾಮಾನ ಇಲಾಖೆಯ ಕೇಂದ್ರ ಹಾಗೂ ಕೇಂದ್ರ ಸಚಿವರುಗಳ ಸಹಕಾರದಲ್ಲಿ ಸ್ಥಾಪಿಸಲಾಗುತ್ತಿದೆ. ಈ ರಾಡಾರ್ 150 ರಿಂದ 175 ಕಿಮೀಗಳಿಗೂ ಹೆಚ್ಚು ಪ್ರದೇಶದ ನಿಖರವಾದ ಹವಾಮಾನ ಬದಲಾವಣೆ ಮತ್ತು ಹವಾಮಾನ ವೈಪರಿತ್ಯದ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ನೀಡುತ್ತದೆ.
ಮಳೆಯ ಮುನ್ಸೂಚನೆ, ಒಣಹವೆಯ ಮಾಹಿತಿ, ತಾಪಮಾನದ ಏರಿಳಿತ ಸೇರಿದಂತೆ ಹವಾಮಾನದ ಏರುಪೇರುಗಳ ನಿಖರ ಮಾಹಿತಿ ನೀಡಲಿದೆ. ಇದು ರೈತರಿಗೆ ಬೆಳೆಹಾನಿ, ಬೆಳೆ ನಷ್ಟದಿಂದ ಪಾರುಮಾಡುವುದರ ಜೊತೆಗೆ ಕೃಷಿ ಚಟುವಟಿಕೆಗಳ ಸಿದ್ಧತೆಗೆ ಸಹಾಯ ಮಾಡುತ್ತದೆ ಎಂದು ಅವರು ರಾಡಾರ್ ಉಪಯೋಗ ಬಗ್ಗೆ ವಿವರಿಸಿದರು.
ಈ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಧಾರವಾಡ ಪ್ರದೇಶದಲ್ಲಿ ನುರಿತ ಯುವ ವೃತ್ತಿಪರರಿಗೆ ಉದ್ಯೋಗದ ಅವಕಾಶಗಳನ್ನು ಒದಗಿಸುತ್ತದೆ. ಈ ಮಹತ್ವದ ಯೋಜನೆಯನ್ನು ನಮ್ಮ ಪ್ರದೇಶಕ್ಕೆ ಸಿಗುವಂತೆ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಡಾ ಜಿತೇಂದ್ರ ಸಿಂಗ್ ಅವರಿಗೆ ಜೋಶಿಯವರು ಧನ್ಯವಾದ ತಿಳಿಸಿದ್ದಾರೆ.












Click it and Unblock the Notifications