'ಎಸಿ ಕೊಠಡಿಗಳಿಂದ ಹೊರಬಂದು ಹಳ್ಳಿಗಳಿಗೆ ಹೋಗಿ'

Posted By:
Subscribe to Oneindia Kannada

ಬೆಂಗಳೂರು, ಜೂನ್ 27 : 'ಹವಾನಿಯಂತ್ರಣ ಕೊಠಡಿಗಳಿಂದ ಹೊರ ಬನ್ನಿ. ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬಡವರ ಕಣ್ಣೀರು ಒರೆಸಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗಳ ಅಧಿಕಾರಿಗಳಿಗೆ ಸಲಹೆ ನೀಡಿದರು.

ಸೋಮವಾರ ರಾಜ್ಯದ ಎಲ್ಲಾ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳ ಎರಡು ದಿನಗಳ ಸಮ್ಮೇಳನದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ಜಿಲ್ಲಾಧಿಕಾರಿಗಳ ಹುದ್ದೆ ಅತ್ಯಂತ ಪ್ರಾಮುಖ್ಯತೆ ಹೊಂದಿರುವ ಹುದ್ದೆಯಾಗಿದೆ. ಜನಸಾಮಾನ್ಯರ ಕುಂದು-ಕೊರೆತೆಗಳಿಗೆ ಸ್ಪಂದಿಸುವುದು ಮಾತ್ರವಲ್ಲ, ಉತ್ತರದಾಯಿತ್ವವೂ ಜಿಲ್ಲಾಧಿಕಾರಿಗಳದ್ದೇ' ಎಂದರು.

siddaramaiah

'ತಹಶೀಲ್ದಾರ್ ಕಚೇರಿಗಳಿಗೆ, ಶಾಲೆಗಳಿಗೆ, ವಸತಿ ನಿಲಯಗಳಿಗೆ ಹಾಗೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಕಚೇರಿಗಳು ಹಾಗೂ ಅಧೀನ ಅಧಿಕಾರಿಗಳು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ? ಎಂಬುದನ್ನು ಏಕೆ ಪರಿಶೀಲಿಸುತ್ತಿಲ್ಲ' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. [ತುರ್ತು ಸಭೆ, ಬಿಬಿಎಂಪಿ ಅಧಿಕಾರಿಗಳ ಕಿವಿ ಹಿಂಡಿದ ಸಿಎಂ!]

ಸರ್ಕಾರಕ್ಕೆ ಭೂಮಿ ಇಲ್ಲ : 'ಸರ್ಕಾರ ಅಂಗನವಾಡಿ, ಆಸ್ಪತ್ರೆ, ಶಾಲೆ ಹಾಗೂ ವಸತಿ ನಿಲಯಗಳಿಗೆ ಭೂಮಿ ನೀಡುವಂತೆ ಸೂಚಿಸಿದಾಗ ತಮ್ಮಿಂದ ನೀರಸ ಪ್ರತಿಕ್ರಿಯೆ ಬರುತ್ತದೆ. ಜಿಲ್ಲೆಗಳಲ್ಲಿ ಸರ್ಕಾರಿ ಭೂಮಿ ಎಷ್ಟಿದೆ? ಗೋಮಾಳದ ಭೂಮಿ ಎಷ್ಟಿದೆ? ಎಂಬ ಮಾಹಿತಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇರಬೇಕು. ಸರ್ಕಾರಿ ಜಮೀನು ಅತಿಕ್ರಮವಾಗಿದ್ದರೆ, ಅದನ್ನು ತೆರವುಗೊಳಿಸಿ ಮುಂದೆ ಅತಿಕ್ರಮಣ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. [ಐಎಎಸ್, ಕೆಎಎಸ್ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸಬೇಕು]

ಕುಡಿಯುವ ನೀರಿನ ಸಮಸ್ಯೆ ಇಲ್ಲವೆ? : ಕುಡಿಯುವ ನೀರು ಪೂರೈಕೆಗಾಗಿ ಸರ್ಕಾರ ನಗರಾಭಿವೃದ್ಧಿ ಇಲಾಖೆಗೆ 141 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿದ್ದರೂ, ಅದು ಸರಿಯಾಗಿ ವಿನಿಯೋಗವಾಗಿಲ್ಲ. ಮೈಸೂರು, ಹಾಸನ, ದಾವಣಗೆರೆ, ಚಿತ್ರದುರ್ಗ, ಬೀದರ್, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳೇ ಇಲ್ಲವೇ ? ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. [ಬರ ಪರಿಹಾರ : ಸರ್ಕಾರದ ಕಿವಿ ಹಿಂಡಲು ಬಿಜೆಪಿ ಮನವಿ]

ನಿಮ್ಮ ಲೋಪ ನಮಗೆ ಶಾಪ : ನಿಮ್ಮ ಕರ್ತವ್ಯ ಲೋಪಕ್ಕೆ ಜನ ನಮಗೆ ಶಾಪ ಹಾಕುತ್ತಾರೆ. 5 ವರ್ಷಗಳಿಗೊಮ್ಮೆ ತಮ್ಮ ಕೋಪದ ತಾಪವನ್ನು ಹೊರ ಹಾಕುತ್ತಾರೆ. ತಾವು ಮಾತ್ರ ನೇಮಕವಾದ್ದರಿಂದ ನಿವೃತ್ತಿಯವರೆಗೆ ನೆಮ್ಮದಿಯಿಂದ ಇರುತ್ತೀರಿ. ಆದರೆ, ಜನರ ಶಾಪ ತಮಗೂ ತಟ್ಟುತ್ತದೆ ಎಂಬುದನ್ನು ಮಾತ್ರ ಮರೆಯಬೇಡಿ ಎಂದರು.

ಜನಸಂಪರ್ಕ ಸಭೆ ಕಡ್ಡಾಯ : ಜಿಲ್ಲೆಗಳಲ್ಲಿ ತಿಂಗಳಿಗೊಮ್ಮೆ ಕಡ್ಡಾಯವಾಗಿ ಜನಸಂಪರ್ಕ ಸಭೆ ನಡೆಯಬೇಕು. ಆ ಸಭೆಯಲ್ಲಿ ಜಿಲ್ಲಾ ಉಸ್ತವಾರಿ ಸಚಿವರೂ, ಜಿಲ್ಲಾ ಉಸ್ತವಾರಿ ಕಾರ್ಯದರ್ಶಿಗಳೂ, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೂ ಒಳಗೊಂಡಂತೆ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳೂ ಪಾಲ್ಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Don’t sit in air conditioned (AC) cabins, Go to the village and solve peoples problems Chief Minister Siddaramaiah directed bureaucrats on Monday. Siddaramaiah addressed meting of Regional Commissioners, Deputy Commissioners and Chief Executive Officers at Vidhana Soudha.
Please Wait while comments are loading...