ರಾಜಕೀಯ ನಮ್ಮಪ್ಪನ ಆಸ್ತಿನಾ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದರಾಮಯ್ಯ: ಡಿ.ಕೆ. ಸುರೇಶ್ ಹೀಗೆ ಹೇಳಿದ್ಯಾಕೆ?
ಬೆಂಗಳೂರು, ಡಿಸೆಂಬರ್03: ರಾಜಕೀಯ ಶಾಶ್ವತ ಅಲ್ಲ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ, ರಾಜಕೀಯ ನಮ್ಮಪ್ಪನ ಆಸ್ತಿನಾ, ಏನಾಗುತ್ತೋ ಆಗ್ಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಕೆಲವರು ಇದನ್ನು ಸಿದ್ದರಾಮಯ್ಯ ಅವರ ವೈರಾಗ್ಯದ ಮಾತು ಎಂದು ವಿಶ್ಲೇಷಿಸಿದರೆ, ಮತ್ತೆ ಕೆಲವರು ಅಧಿಕಾರ ಹಂಚಿಕೆ ಕುಸ್ತಿ ಎಂದು ಹೇಳಿದ್ದಾರೆ.
ರಾಜಕೀಯ ಶಾಶ್ವತವಲ್ಲ, ತಲೆ ಕೆಡಿಸಿಕೊಳ್ಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿಗೆ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜೊತೆಗೆ ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷರಾದ ಡಿ ಕೆ ಸುರೇಶ್ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರೊಂದಿಗೋ ಮಾತನಾಡುವಾಗ ಆಡಿರುವ ಮಾತುಗಳಿಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ.ಆ ಬಗ್ಗೆ ಹೆಚ್ಚಿನ ವಿಶ್ಲೇಷಣೆಯೂ ಅನಗತ್ಯ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ತಿಳಿಸಿದರು.

ಇನ್ನೂ ರಾಜ್ಯಕ್ಕೆ ಕೆ.ಸಿ. ವೇಣುಗೋಪಾಲ್ ಅವರು ಆಗಮಿಸಿರುವ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಡಿ ಕೆ ಸುರೇಶ್ ಅವರು ಉತ್ತರಿಸಿ, ಮಂಗಳೂರಿನಲ್ಲಿ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಅವರು ಆಗಮಿಸಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಇರುವ ಕಾರಣ ಅಲ್ಲಿಗೆ ತೆರಳಲಿದ್ದಾರೆ ಎಂದು ತಿಳಿಸಿದರು. ಮಂಗಳೂರಿನಲ್ಲಿ ವೇಣುಗೋಪಾಲ್ ಅವರಿಗೆ ಡಿ.ಕೆ. ಶಿವಕುಮಾರ್ ಅಭಿಮಾನಿಗಳು ಡಿ.ಕೆ., ಡಿ.ಕೆ. ಎಂದು ಕೂಗಿರುತ್ತಾರೆ. ಆದರೆ ಅವರು ಯಾರಿಗೂ ಮುತ್ತಿಗೆ ಹಾಕಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ಹೇಳಿದ್ದೇನು?
ರಾಜ್ಯ ರಾಜಕಾರಣದಲ್ಲಿ ಕುರ್ಚಿ ವಿಚಾರವಾಗಿ ಭಾರೀ ಚರ್ಚೆಯಾಗುತ್ತಿದ್ದು, ಹೈಕಮಾಂಡ್ ಸೂಚನೆ ಮೇರೆಗೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸುವ ಮೂಲಕ ನಾವು ಒಗ್ಗಟ್ಟಾಗಿದ್ದೇವೆ ಎಂದು ಒಗ್ಗಟ್ಟು ಪ್ರದರ್ಶಿಸಿ ಒಮ್ಮತದ ಮಾತುಗಳನ್ನಾಡಿದ್ದ ಸಿದ್ದರಾಮಯ್ಯ, ಮಧ್ಯಾಹ್ನ ವೈರಾಗ್ಯದ ಮಾತುಗಳನ್ನು ಆಡಿದ್ದಾರೆ. ವಿಧಾನಸೌಧದಲ್ಲಿ ಸಭೆ ಮುಗಿಸಿ ಹೊರಬರುತ್ತಿದ್ದ ವೇಳೆ ವಿಧಾನಸೌಧದ ಕೆಂಗಲ್ ಗೇಟ್ ಬಳಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತುತ ರಾಜಕೀಯ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ರಾಜಕೀಯ ಶಾಶ್ವತ ಅಲ್ಲ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ, ರಾಜಕೀಯ ನಮ್ಮಪ್ಪನ ಆಸ್ತಿನಾ, ಏನಾಗುತ್ತೋ ಆಗ್ಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನೂ ಏಕಾಏಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಅನಿರೀಕ್ಷಿತ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಕೆಲವರು ಇದನ್ನು ಸಿದ್ದರಾಮಯ್ಯ ಅವರ ವೈರಾಗ್ಯದ ಮಾತು ಎಂದು ವಿಶ್ಲೇಷಿಸಿದರೆ, ಮತ್ತೆ ಕೆಲವರು ಅಧಿಕಾರ ಹಂಚಿಕೆಯ ವಿಚಾರದ ಪ್ರಸ್ತಾಪ ಎಂದು ಹೇಳಲಾಗಿದೆ.












Click it and Unblock the Notifications