DK Shivakumar: 'ಡಿಸೆಂಬರ್ ಒಳಗೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ'
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಜೋರಾಗಿದೆ. ಅಧಿಕಾರ ಹಂಚಿಕೆ ವಿಚಾರವಾಗಿ ಹೊತ್ತಿಕೊಂಡಿದ್ದ ಕಿಚ್ಚನ್ನು ಹೈಕಮಾಂಡ್ ಆರಿಸಿತ್ತು. ಆದರೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನಡುವೆ ಕುರ್ಚಿ ಕಿತ್ತಾಟ ಹಿಂಬದಿಯಲ್ಲಿ ನಡೆಯುತ್ತಲೇ ಇದೆ. ಅನೇಕರು ಇದೇ ವರ್ಷ ರಾಜ್ಯದಲ್ಲಿ ಸಿಎಂ ಬದಲಾಗ್ತಾರೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಇದೀಗ ಡಿಕೆ ಶಿವಕುಮಾರ್ ಅವರು ಡಿಸೆಂಬರ್ ಒಳಗೆ ಮುಖ್ಯಮಂತ್ರಿ ಆಗ್ತಾರೆ ಎಂಬ ಮತ್ತೊಂದು ಭವಿಷ್ಯವಾಣಿ ಸಖತ್ ಸದ್ದು ಮಾಡುತ್ತಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಈ ಹೇಳಿಕೆ ನೀಡಿರುವುದು ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸಿದೆ. ನಾನು ಬೇಕಾದರೆ ರಕ್ತದಲ್ಲಿ ಬರೆದು ಕೊಡುತ್ತೇನೆ. ಡಿಸೆಂಬರ್ ಒಳಗಾಗಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ. ಡಿಸೆಂಬರ್ ಒಳಗೇ ಅವರು ಸಿಎಂ ಆಗುವುದು ಪಕ್ಕಾ ಎಂದು ಹೇಳಿದ್ದಾರೆ.

ಡಿಕೆ ಶಿವಕುಮಾರ್ ಸಾಹೇಬರು ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಕಳೆದ ಚುನಾವಣೆಯಲ್ಲಿ 80 ಶಾಸಕರ ಗೆಲುವಿನ ಹಿಂದೆ ಅವರ ಪಾತ್ರವಿದೆ. ಅಲ್ಲದೇ ಲೋಕಸಭೆ ಚುನಾವಣೆಯಲ್ಲೂ ಈ ಬಾರಿ 9 ಸ್ಥಾನ ಗೆಲ್ಲಲು ಅವರ ಶ್ರಮ ಇದೆ. ಹಾಗಾಗಿ ಅವರು ಸಿಎಂ ಆಗೇ ಆಗ್ತಾರೆ. ಅವರು ಈ ವಿಚಾರದಲ್ಲಿ ಮುಂದೆ ಏನು ನಿರ್ಧಾರ ತೆಗೆದುಕೊಂಡರೂ ನಾವು ಬದ್ಧರಾಗಿರುತ್ತೇವೆ. ಈ ಡಿಸೆಂಬರ್‌ನಿಂದಲೇ ಮುಂದಿನ ಐದು ವರ್ಷವೂ ಡಿಕೆ ಶಿವಕುಮಾರ್ ಅವರೇ ಸಿಎಂ ಆಗ್ತಾರೆ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಡಿಕೆ ಶಿವಕುಮಾರ್ ಅವರ ವಿರುದ್ಧ ಮಾತನಾಡಿದ್ದ ಸಚಿವ ಕೆ.ಎನ್.ರಾಜಣ್ಣ ವಿರುದ್ಧವೂ ಶಾಸಕ ಶಿವಗಂಗಾ ಬಸವರಾಜ್ ದೂರಿದ್ದಾರೆ. ಕೆಎನ್ ರಾಜಣ್ಣ ಅವರ ಹೇಳಿಕೆಯಿಂದಾಗಿ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ತುಂಬಾ ಮುಜುಗರವಾಗುತ್ತಿದೆ. ಹೈಕಮಾಂಡ್ ನಾಯಕರು ಇದನ್ನು ಗಮನಿಸಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲಿ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ, ಹಾಗಾಗಿ ರಾಜಣ್ಣ ಅವರ ಮೇಲೆ ಕ್ರಮ ಕೈಗೊಂಡರೆ ಎಲ್ಲ ಸರಿ ಹೋಗುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಖರ್ಗೆ ವಾರ್ನಿಂಗ್‌ಗೂ ಬೆಲೆ ಇಲ್ಲ: ರಾಜ್ಯ ಕಾಂಗ್ರೆಸ್ ನಾಯಕರು ಸಿಎಂ ಬದಲಾವಣೆ ವಿಚಾರವಾಗಿ ಮನಬಂದಂತೆ ಹೇಳಿಕೆ ನೀಡುತ್ತಿರುವ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಎಚ್ಚರಿಕೆ ಕೊಟ್ಟಿದ್ದರು. ಈ ರೀತಿ ಹೇಳಿಕೆ ನೀಡದೆ ಬಾಯಿ ಮುಚ್ಚಿಕೊಂಡಿರಬೇಕು ಎಂದು ಹೇಳಿದ್ದರು. ಆದರೂ ನಾಯಕರು ತಮ್ಮ ಚಾಳಿ ಮುಂದುವರಿಸಿದ್ದಾರೆ.

ಈ ವಿಚಾರವಾಗಿ ಇತ್ತೀಚೆಗಷ್ಟೇ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈಗ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಅದೆಲ್ಲ ಇಲ್ಲ, ಯಾವಾಗ ಸಿಎಂ ಬದಲಾವಣೆ ಮಾಡಬೇಕೆಂದು ನಮಗೆ ಗೊತ್ತು. ಸಮಯ ಬಂದಾಗ ಸಿಎಂ ಬದಲಾವಣೆ ಮಾಡ್ತೀವಿ. ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ ಎಳೆದಿದ್ದರು. ರಾಜ್ಯ ಕಾಂಗ್ರೆಸ್ ನಾಯಕರೆಲ್ಲರೂ ಬಾಯಿ ಮುಚ್ಚಿಕೊಂಡಿರ್ಬೇಕು. ಪಕ್ಷ ಕೊಟ್ಟಿರುವ ಕೆಲಸವನ್ನು ಮೊದಲು ಮಾಡಿ, ಯಾವಾಗ ಏನು ಮಾಡಬೇಕು ಅನ್ನೋದು ಹೈಕಮಾಂಡ್ಗೆ ಗೊತ್ತಿದೆ. ಕೆಲವರು ಹೇಳಿದಂತೆ ಹೈಕಮಾಂಡ್ ನಡೆಯಲ್ಲ ಎಂದು ಹೇಳಿದ್ದರು.












Click it and Unblock the Notifications