ಉಪ ಚುನಾವಣೆ ಮುಕ್ತಾಯ; ಗೆಲುವಿಗಾಗಿ ಡಿಕೆಶಿ ವಿಶೇಷ ಪೂಜೆ
ಬೆಂಗಳೂರು, ನವೆಂಬರ್ 04: ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆ ಪೂರ್ಣಗೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತದಾನ ಪೂರ್ಣಗೊಂಡ ಬಳಿಕ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ.
ಡಿ. ಕೆ. ಶಿವಕುಮಾರ್ ಮಂಗಳವಾರ ಸಂಜೆ ಬೆಂಗಳೂರಿನ ಬನಶಂಕರಿಯಲ್ಲಿರುವ ಬನಶಂಕರಿ ದೇವಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಉಪ ಚುನಾವಣೆ ಮತದಾನ ಪ್ರಕ್ರಿಯೆ ಎಲ್ಲಾ ಮುಗಿದ ಬಳಿಕ ದೇವರ ಮೊರೆ ಹೋದರು.
ಮತದಾನ ಪೂರ್ಣಗೊಳ್ಳುತ್ತಿದ್ದಂತೆ ಡಿ. ಕೆ. ಶಿವಕುಮಾರ್ ಫೇಸ್ ಬುಕ್ ಪೋಸ್ಟ್ ಹಾಕಿದ್ದರು. "ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತದಾನದ ತಮ್ಮ ಹಕ್ಕು ಚಲಾಯಿಸಿದ ಎಲ್ಲಾ ಮತದಾರರಿಗೂ ಹೃತ್ಪೂರ್ವಕ ಧನ್ಯವಾದಗಳು" ಎಂದು ಹೇಳಿದ್ದರು.

"ಅದೇ ರೀತಿ ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಹಗಲಿರುಳು ಶ್ರಮಿಸಿದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರಿಗೂ ಕೋಟಿ, ಕೋಟಿ ನಮನಗಳು" ಎಂದು ತಿಳಿಸಿದ್ದರು.
ಆರ್. ಆರ್. ನಗರ ಮತ್ತು ಶಿರಾ ಉಪ ಚುನಾವಣೆ ಘೋಷಣೆಯಾದ ಬಳಿಕ ಡಿ. ಕೆ. ಶಿವಕುಮಾರ್ ಬಿಡುವಿಲ್ಲದೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಅವರು ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದೆ.
ಮಂಗಳವಾರ ಎರಡೂ ಕ್ಷೇತ್ರಗಳ ಉಪ ಚುನಾವಣೆಗೆ ಮತದಾನ ನಡೆದಿತ್ತು. ಶಿರಾದಲ್ಲಿ 84.54 ಮತ್ತು ಆರ್. ಆರ್. ನಗರದಲ್ಲಿ 45.24ರಷ್ಟು ಮತದಾನವಾಗಿತ್ತು. ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ.
ಮೂರು ರಾಜಕೀಯ ಪಕ್ಷಗಳು ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದವು. ಅಭ್ಯರ್ಥಿಗಳ ಭವಿಷ್ಯ ಈಗ ಮತಯಂತ್ರದಲ್ಲಿ ಭದ್ರವಾಗಿದೆ. ಆರ್. ಆರ್. ನಗರದಲ್ಲಿ ಮತದಾನದ ಪ್ರಮಾಣ ಕಡಿಮೆ ಆಗಿದ್ದು, ರಾಜಕೀಯ ಪಕ್ಷಗಳ ಚಿಂತೆಗೆ ಕಾರಣವಾಗಿದೆ.












Click it and Unblock the Notifications