ಮೇಕೆದಾಟು ಯೋಜನೆ; ತಮಿಳುನಾಡು ಸರ್ಕಾರಕ್ಕೆ ಡಿಕೆಶಿ ಮನವಿ
ಬೆಂಗಳೂರು, ಜೂನ್ 01: ಕಾವೇರಿ ನದಿ ಪಾತ್ರದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮೇಕೆದಾಟುವಿನಿಂದ ಬೆಂಗಳೂರು ತನಕ ಕಾಂಗ್ರೆಸ್ ಪಾದಯಾತ್ರೆ ಮಾಡಿತ್ತು. ಈಗ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ಮೇಕೆದಾಟು ಪಾದಯಾತ್ರೆ ನೇತೃತ್ವ ವಹಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಈಗ ಕರ್ನಾಟಕದ ಉಪ ಮುಖ್ಯಮಂತ್ರಿ. ಜಲಸಂಪನ್ಮೂಲ ಖಾತೆ ಸಚಿವರು ಸಹ ಅವರೇ. ಹಾಗಾದರೆ ಮೇಕೆದಾಟು ಯೋಜನೆ ಜಾರಿಯಾಗಲಿದೆಯೇ?. ತಮಿಳುನಾಡು ಇದಕ್ಕೆ ಒಪ್ಪಿಗೆ ನೀಡಲಿದೆಯೇ?.

ಗುರುವಾರ ಡಿ. ಕೆ. ಶಿವಕುಮಾರ್ ಸರಣಿ ಟ್ವೀಟ್ ಮಾಡಿದ್ದಾರೆ. 'ನಾನು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಅಕ್ಕಪಕ್ಕದ ರಾಜ್ಯದವರು ಅಣ್ಣ ತಮ್ಮಂದಿರಂತೆ ಬದುಕೋಣ. ನಿಮ್ಮಲ್ಲಿ ಹೃದಯ ಶ್ರೀಮಂತಿಕೆ ಇದೆ, ನಮ್ಮಲ್ಲೂ ಹೃದಯ ಶ್ರೀಮಂತಿಕೆ ಇದೆ. ಒಬ್ಬರಿಗೊಬ್ಬರು ಸಹಕರಿಸುತ್ತಾ ಜೊತೆಯಾಗಿ ಸಾಗೋಣ' ಎಂದು ಕರೆ ನೀಡಿದ್ದಾರೆ.
'ಮೇಕೆದಾಟು ಯೋಜನೆಗೆ ಹಿಂದಿನ ಸರ್ಕಾರ ಒಂದು ಸಾವಿರ ಕೋಟಿ ರೂ. ಘೋಷಿಸಿದೆ ಆದರೆ ಖರ್ಚು ಮಾಡಿಲ್ಲ. ಯೋಜನೆಯನ್ನು ಸಾಕಾರಗೊಳಿಸಲು ಆ ಹಣ ಬಳಕೆಯಾಗಲಿದೆ. ತಮಿಳುನಾಡಿನ ನಮ್ಮ ಸಹೋದರರ ಮೇಲೆ ಕೋಪವಾಗಲೀ, ದ್ವೇಷವಾಗಲೀ ಇಲ್ಲ. ಅವರೂ ನಮ್ಮ ಅಣ್ಣತಮ್ಮಂದಿರಂತೆ' ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, 'ಕರ್ನಾಟದಲ್ಲಿ ನೆಲೆಸಿರುವ ತಮಿಳಿಗರು ಹಾಗೂ ತಮಿಳುನಾಡಿನಲ್ಲಿ ನೆಲೆಸಿರುವ ಕನ್ನಡಿಗರು ಕಾವೇರಿ ನೀರು ಕುಡಿಯುತ್ತಿದ್ದಾರೆ. ಕೋರ್ಟು, ಕಚೇರಿ ಅಲೆದದ್ದು ಸಾಕು. ಮೇಕೆದಾಟು ಯೋಜನೆಯಿಂದ ಎರಡೂ ರಾಜ್ಯಗಳಿಗೂ ಅನುಕೂಲವಾಗಲಿದೆ. ಕಾವೇರಿ ಪಾತ್ರದಲ್ಲಿರುವ ರೈತರಿಗೆ ನೀರಾವರಿ ಹಾಗೂ ಶ್ರೀಸಾಮಾನ್ಯರಿಗೆ ಕುಡಿಯುವ ನೀರು ಎರಡೂ ಲಭಿಸಲಿದೆ' ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸಭೆಯಲ್ಲಿ ಹೇಳಿದ್ದೇನು?; ಡಿ. ಕೆ. ಶಿವಕುಮಾರ್ ಮೇ 30ರಂದು ವಿಕಾಸಸೌಧದಲ್ಲಿ ಜಲ ಸಂಪನ್ಮೂಲ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ್ದರು. ಈ ಸಭೆಯಲ್ಲಿ ಮೇಕೆದಾಟು ಯೋಜನೆ ಕುರಿತು ವಿಷಯ ಪ್ರಸ್ತಾಪಿಸಿದ್ದರು.
ಮೇಕೆದಾಟು, ಮಹದಾಯಿ ಯೋಜನೆಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಕ್ಕೆ ತರಬೇಕು. ಮೇಕೆದಾಟು ಯೋಜನೆಗೆ ಮೀಸಲಿಟ್ಟ 1000 ಕೋಟಿ ರೂಪಾಯಿ ಅನುದಾನವನ್ನು ಭೂಸ್ವಾಧೀನದಂತಹ ಪೂರ್ವ ಸಿದ್ಧತೆ ಕೆಲಸಗಳಿಗೆ ಮೀಸಲಿಡಬಹುದಿತ್ತು. ಮಾಡಿಲ್ಲ ಏಕೆ, ಹಾಗಾದರೆ ಹಣ ಇಟ್ಟಿದ್ದಾದರೂ ಏಕೆ? ಎಂದು ಅವರು ಅಧಿಕಾರಿಗಳನ್ನು ಪ್ರಶ್ನಿಸಿದ್ದರು.
ತಮಿಳುನಾಡು ಪ್ರತಿಕ್ರಿಯೆ; ಮೇಕೆದಾಟು ಯೋಜನೆ ವಿಚಾರದಲ್ಲಿ ಡಿ. ಕೆ. ಶಿವಕುಮಾರ್ ನಿಲುವಿಗೆ ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರ ಪ್ರತಿಕ್ರಿಯೆ ನೀಡಿತ್ತು. "ಯೋಜನೆ ವಿಚಾರದಲ್ಲಿ ಅಕ್ರಮಣಕಾರಿಯಾಗಿ ವರ್ತಿಸಬೇಡಿ" ಎಂದು ರಾಜ್ಯದ ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಡಿ. ಕೆ. ಶಿವಕುಮಾರ್‌ಗೆ ಸಲಹೆ ನೀಡಿದ್ದರು.
"ಮೇಕೆದಾಟು ಯೋಜನೆಯನ್ನು ತಮಿಳುನಾಡು ಸರ್ಕಾರ ಮತ್ತು ಜನರು ವಿರೋಧಿಸುತ್ತಾರೆ" ಎಂದು ದೊರೈ ಮುರುಗನ್ ಮತ್ತೊಮ್ಮೆ ಹೇಳಿದ್ದರು.
"ಅಧಿಕಾರಕ್ಕೆ ಬಂದು ಕೆಲವೇ ದಿನಗೂ ಆಗಿವೆ. ಡಿ. ಕೆ. ಶಿವಕುಮಾರ್ ಅಕ್ರಮಣಕಾರಿಯಾಗಿ ವರ್ತಿಸುತ್ತಿರುವುದು ಆಶ್ಚರ್ಯ ಹುಟ್ಟಿಸಿದೆ. ಮೇಕೆದಾಟು ಯೋಜನೆ ಕುರಿತು ಅಧಿಕಾರಿಗಳು ಅವರಿಗೆ ಸರಿಯಾದ ಮಾಹಿತಿ ನೀಡಿಲ್ಲ" ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದರು.
"ಮೇಕೆದಾಟು ಯೋಜನೆ ಬಗ್ಗೆ ನಾನು ಡಿ. ಕೆ. ಶಿವಕುಮಾರ್ ಭೇಟಿಯಾಗಿ ವಿವರಣೆ ನೀಡುತ್ತೇನೆ. ಅಲ್ಲಿಯ ತನಕ ಅವರು ತಾಳ್ಮೆಯಿಂದ ಇರುತ್ತಾರೆ ಎಂದು ಭಾವಿಸುತ್ತೇನೆ" ಎಂದು ದೊರೈ ಮುರುಗನ್ ಹೇಳಿದ್ದರು.
ಮೊದಲಿನಿಂದಲೂ ತಮಿಳುನಾಡು ಸರ್ಕಾರ ಮೇಕೆದಾಟು ಕುಡಿಯುವ ನೀರಿನ ಯೋಜನೆ ವಿರೋಧಿಸುತ್ತಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದೆ. ಯೋಜನೆ ಜಾರಿಯಾದರೆ ರಾಜ್ಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಲಿದೆ ಎಂಬುದು ರಾಜ್ಯದ ವಾದವಾಗಿದೆ.











Click it and Unblock the Notifications