ಸಹಾಯಕ್ಕೆ ಸಿದ್ಧ: ಉಕ್ರೇನ್‌ನಿಂದ ಮರಳಿರುವ ವಿದ್ಯಾರ್ಥಿಗಳಿಗೆ ಸಂದೇಶ ಕಳುಹಿಸಲು ಹೇಳಿದ ಡಿ.ಕೆ.ಶಿವಕುಮಾರ್
ಬೆಂಗಳೂರು, ಡಿಸೆಂಬರ್ 27: ರಷ್ಯಾ-ಉಕ್ರೇನ್ ಯುದ್ಧವು ಮುಂದುವರಿದಿದ್ದು, ಉಕ್ರೇನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಸಂಕಷ್ಟ ಕೊನೆಗೊಂಡಿಲ್ಲ.
ತಾಯ್ನಾಡಿನಲ್ಲಿ ಶಿಕ್ಷಣ ಮುಂದುವರಿಸಲು ಸರ್ಕಾರ ನೆರವಾಗದೇ ಇರುವುದಕ್ಕೆ ವಿದ್ಯಾರ್ಥಿಗಳು ನೋವು ಹಂಚಿಕೊಂಡಿದ್ದಾರೆ. ಈ ಕುರಿತು 'ಪ್ರಜಾವಾಣಿ' ವರದಿ ಮಾಡಿದೆ.
ಈ ವರದಿಯನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿದ್ಯಾರ್ಥಿಗಳ ಬೆನ್ನಿಗೆ ಖಂಡಿತ ನಾವು ನಿಲ್ಲುತ್ತೇವೆ ಎಂದು ಭರವಸೆ ನೀಡಿದ್ದಾರೆ.

'ರಷ್ಯಾ-ಉಕ್ರೇನ್ ನಡುವಿನ ಯುದ್ಧದ ಸಂದರ್ಭದಲ್ಲಿ ರಾಜ್ಯಕ್ಕೆ ಮರಳಿದ್ದ ಸಂತ್ರಸ್ತ ವೈದ್ಯಕೀಯ ವಿದ್ಯಾರ್ಥಿಗಳು ತಾಯ್ನಾಡಿನಲ್ಲಿ ಶಿಕ್ಷಣ ಮುಂದುವರಿಸಲು ಸರ್ಕಾರ ನೆರವಾಗದೇ ಇರುವುದು ದುಃಖಕರ ವಿಚಾರ. ಅತಂತ್ರಗೊಂಡಿರುವ ರಾಜ್ಯದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಕಾಪಾಡಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ' ಎಂದು ಶಿವಕುಮಾರ್ ತಿಳಿಸಿದ್ದಾರೆ.
ರಷ್ಯಾ-ಉಕ್ರೇನ್ ನಡುವಿನ ಯುದ್ಧದ ಸಂದರ್ಭದಲ್ಲಿ ರಾಜ್ಯಕ್ಕೆ ಮರಳಿದ್ದ ಸಂತ್ರಸ್ತ ವೈದ್ಯಕೀಯ ವಿದ್ಯಾರ್ಥಿಗಳು ತಾಯ್ನಾಡಿನಲ್ಲಿ ಶಿಕ್ಷಣ ಮುಂದುವರಿಸಲು ಸರ್ಕಾರ ನೆರವಾಗದೇ ಇರುವುದು ದುಃಖಕರ ವಿಚಾರ. ಅತಂತ್ರಗೊಂಡಿರುವ ರಾಜ್ಯದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಕಾಪಾಡಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ.
— DK Shivakumar (@DKShivakumar) December 27, 2022
1/2 pic.twitter.com/gcHQUIaBGT
'ಯುದ್ಧ ಸಂತ್ರಸ್ತ ವಿದ್ಯಾರ್ಥಿಗಳು ರಾಜ್ಯದಲ್ಲೇ ಶಿಕ್ಷಣ ಮುಂದುವರಿಸಲು ಪರಿಹಾರವೇನು? ನನ್ನಿಂದ ಹಾಗೂ ಪಕ್ಷದಿಂದ ಏನೇ ಸಹಾಯ ಕೇಳಿದರೂ ಮಾಡಲು ಖಂಡಿತ ಸಿದ್ಧ. ವಿದ್ಯಾರ್ಥಿಗಳು ಈ ಕೂಡಲೇ ನನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ನೇರ ಸಂದೇಶ (DM) ಕಳಿಸುವ ಮೂಲಕ ಸಂಪರ್ಕಿಸಬಹುದು. ವಿದ್ಯಾರ್ಥಿಗಳ ಬೆನ್ನಿಗೆ ಖಂಡಿತ ನಾವು ನಿಲ್ಲುತ್ತೇವೆ' ಎಂದು ಭರವಸೆ ನೀಡಿದ್ದಾರೆ.
ಯುದ್ಧ ಸಂತ್ರಸ್ತ ವಿದ್ಯಾರ್ಥಿಗಳು ರಾಜ್ಯದಲ್ಲೇ ಶಿಕ್ಷಣ ಮುಂದುವರಿಸಲು ಪರಿಹಾರವೇನು? ನನ್ನಿಂದ ಹಾಗೂ ಪಕ್ಷದಿಂದ ಏನೇ ಸಹಾಯ ಕೇಳಿದರೂ ಮಾಡಲು ಖಂಡಿತ ಸಿದ್ಧ. ವಿದ್ಯಾರ್ಥಿಗಳು ಈಕೂಡಲೇ ನನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ನೇರ ಸಂದೇಶ (DM) ಕಳಿಸುವ ಮೂಲಕ ಸಂಪರ್ಕಿಸಬಹುದು. ವಿದ್ಯಾರ್ಥಿಗಳ ಬೆನ್ನಿಗೆ ಖಂಡಿತ ನಾವು ನಿಲ್ಲುತ್ತೇವೆ.
— DK Shivakumar (@DKShivakumar) December 27, 2022
2/2
ಅತಂತ್ರದಲ್ಲಿ ವಿದ್ಯಾರ್ಥಿಗಳ ಭವಿಷ್ಯ
ಉಕ್ರೇನ್‌ನಲ್ಲಿ ವೈದ್ಯಕೀಯ ವ್ಯಾಸಂಗಕ್ಕಾಗಿ ತೆರಳಿದ್ದ ಸುಮಾರು 700 ವಿದ್ಯಾರ್ಥಿಗಳು ರಾಜ್ಯಕ್ಕೆ ವಾಪಸ್ಸಾಗಿದ್ದರು. ಯುದ್ಧ ಕೊನೆಗೊಳ್ಳದ ಕಾರಣ, ಭಾರತದಲ್ಲೇ ಉಳಿದಿದ್ದಾರೆ. ಉಕ್ರೇನ್‌ನಿಂದ ವಾಪಸ್ಸಾಗುವ ವೇಳೆ, ಭಾರತದಲ್ಲೇ ವೈದ್ಯಕೀಯ ವ್ಯಾಸಂಗಕ್ಕೆ ಅವಕಾಶ ಕಲ್ಪಿಸುವುದಾಗಿ ವಿದ್ಯಾರ್ಥಿಗಳಿಗೆ ಸರ್ಕಾರ ಭರವಸೆ ನೀಡಿತ್ತು. ಆದರೆ, ಸರ್ಕಾರದಿಂದ ಯಾವುದೇ ನೆರವು ಸಿಗದ ಕಾರಣ, ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಅವರು ಮತ್ತೆ ವಿದೇಶಗಳತ್ತ ಮುಖ ಮಾಡಿದ್ದು, ಪೋಷಕರಿಗೆ ಆರ್ಥಿಕ ಹೊರೆ ಹೆಚ್ಚಾಗಲಿದೆ. ಈ ದೇಶದಲ್ಲಿ ವೈದ್ಯಕೀಯ ವ್ಯಾಸಂಗದ ವೆಚ್ಚ ಹೆಚ್ಚಿದೆ ಎಂಬ ಕಾರಣಕ್ಕೆ ಸಾವಿರಾರು ವಿದ್ಯಾರ್ಥಿಗಳು ಉಕ್ರೇನ್‌ಗೆ ವ್ಯಾಸಂಗ ಮಾಡಲು ತೆರಳಿದ್ದರು.
ರಷ್ಯಾ ಉಕ್ರೇನ್ ಯುದ್ಧ ಕೊನೆಗೊಳ್ಳುವ ಲಕ್ಷಣಗಳಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ತಮ್ಮ ನಿರ್ಧಾರವನ್ನು ಸಡಿಲಿಸುವ ಸೂಚನೆಗಳು ಕಂಡುಬರುತ್ತಿಲ್ಲ. ಈ ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ, ಉಕ್ರೇನ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಗಂಡಾಂತರ ಬಂದೊದಗಲಿದೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅಂತಂತ್ರ ಪರಿಸ್ಥಿತಿಯಲ್ಲಿರುವ ವಿದ್ಯಾರ್ಥಿಗಳ ಸಹಾಯಕ್ಕೆ ಬರಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.












Click it and Unblock the Notifications