DK Shivakumar: ದಿಢೀರ್ ಹೈಕಮಾಂಡ್ ನಾಯಕರ ಭೇಟಿಗೆ ಮುಂದಾದ ಡಿ.ಕೆ.ಶಿವಕುಮಾರ್
ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನೆಲೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಇದೇ ಫೆಬ್ರವರಿ 25ರಂದು ಮಂಗಳವಾರ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡಲಿದ್ದು, ಈ ವೇಳೆ ಪಕ್ಷದ ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸ್ವಪಕ್ಷ ನಾಯಕರಿಂದ ಭಾರಿ ಒತ್ತಾಯ ಕೇಳಿಬರುತ್ತಿದೆ. ಕೆಲವರು ಡಿ.ಕೆ.ಶಿವಕುಮಾರ್ ಅವರ ವಿರುದ್ಧ ನೇರವಾಗಿ ಹಾಗೂ ಪರೋಕ್ಷವಾಗಿಯೂ ಅಸಮಾಧಾನ ಹೊರಹಾಕುತ್ತಿದ್ದಾರೆ. ಮತ್ತೊಂದೆಡೆ ಪಕ್ಷದ ನಾಯಕರ ಹೇಳಿಕೆಗಳಿಂದಲೂ ಡ್ಯಾಮೇಜ್ ಆಗುತ್ತಿದ್ದು, ಸಿಎಂ ಬದಲಾವಣೆ ವಿಚಾರವಾಗಿಯೂ ಭಾರಿ ಚರ್ಚೆ ನಡೆಯುತ್ತಿವೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆ ಅವರು ದಿಢೀರನೆ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿರುವುದು ಕುತೂಹಲ ಮೂಡಿಸಿದೆ.

ಫೆಬ್ರವರಿ 25ರಂದು ದೆಹಲಿಗೆ ತೆರಳಲಿರುವ ಡಿಕೆಶಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲಿದ್ದಾರೆ. ರಾಜ್ಯ ಕಾಂಗ್ರೆಸ್‌ನ ಬೆಳವಣಿಗೆಗಳ ಬಗ್ಗೆಯೂ ಅವರು ನಾಯಕರಿಗೆ ತಿಳಿಸಲಿದ್ದಾರೆ. ಅಲ್ಲದೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಕುರಿತು ಹೈಕಮಾಂಡ್ ನಾಯಕರೊಂದಿಗೆ ಗೌಪ್ಯ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ವಿಚಾರ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಭುಗಿಲೆದ್ದಿರುವ ಹಿನ್ನೆಲೆ ಈ ಬಗ್ಗೆಯೂ ಅವರು ಹಿರಿಯ ನಾಯಕರೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿ ದಲಿತ ನಾಯಕರು ಕೂಡ ಬಂಡಾಯದ ಸುಳಿವು ನೀಡುತ್ತಿದ್ದು, ಇದಕ್ಕೆ ಮೂಗುದಾರ ಹಾಕುವ ಬಗ್ಗೆಯೂ ಅವರು ನಾಯಕರೊಂದಿಗೆ ಚರ್ಚಿಸುವ ಸಾಧ್ಯತೆಗಳಿವೆ.
ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್ ಸೇರಿದಂತೆ ಇತ್ತೀಚೆಗೆ ದಲಿತ ನಾಯಕರು ಕೂಡ ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದಾರೆ. ಇವರೆಲ್ಲ ಮುಂದೆ ಸಿಎಂ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಇವರ ವಿರುದ್ಧ ರಣತಂತ್ರ ರೂಪಿಸಲಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಸ್ಥಳೀಯ ಚುನಾವಣೆಗಳು ನಡೆಯಲಿದ್ದು, ಇದಕ್ಕೂ ಸಜ್ಜಾಗುವ ಬಗ್ಗೆ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವುದಾದರೆ, ಆ ಸ್ಥಾನ ಯಾರಿಗೆ ಕೊಡಬೇಕು? ಎಂಬ ಬಗ್ಗೆಯೂ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ನಾಯಕರಿಗೆ ಅಭಿಪ್ರಾಯ ತಿಳಿಸಿದ್ದಾರೆ. ತಮ್ಮ ಸಹೋದರ ಡಿ.ಕೆ.ಸುರೇಶ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆಯೂ ಹೈಕಮಾಂಡ್‌ಗೆ ಮನವಿ ಮಾಡಲಿದ್ದಾರೆ. ಒಟ್ಟಾರೆ ಡಿಕೆಶಿ ಅವರ ದಿಢೀರ್ ಭೇಟಿ ವಿಚಾರ ಸಂಚಲನ ಸೃಷ್ಟಿಸಿದೆ.
ದೆಹಲಿ ಭೇಟಿ ವೇಳೆ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಾಂಗ್ರೆಸ್ ಭವನದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೂ ನಾಯಕರನ್ನು ಆಹ್ವಾನಿಸಲಿದ್ದು, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರನ್ನ ಭೇಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಚರ್ಚಿಸಲಿದ್ದಾರೆ. ಮೇಕೆದಾಟು, ಭದ್ರಾ ಮೇಲ್ದಂಡೆ, ಕಳಸಾ ಬಂಡೂರಿ ಯೋಜನೆಗಳ ಕುರಿತು ವಿಶೇಷ ಚರ್ಚೆ ನಡೆಸಿಬರಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಸದ್ಯ ಖಾಸಗಿ ಕಾರ್ಯಕ್ರಮದ ನಿಮಿತ್ತ ಡಿಕೆ ಶಿವಕುಮಾರ್ ಅವರು ಕುಟುಂಬದೊಂದಿಗೆ ದುಬೈಗೆ ತೆರಳಿದ್ದು, ಸೋಮವಾರ ಬೆಂಗಳೂರಿಗೆ ಮರಳಲಿದ್ದಾರೆ.












Click it and Unblock the Notifications