ಸಿದ್ದರಾಮಯ್ಯ ದಿಲ್ಲಿಗೆ ಬಂದಿಳಿಯುವ ಮುನ್ನ ಡಿ.ಕೆ.ಶಿವಕುಮಾರ್ ದೆಹಲಿಗೆ: ಖರ್ಗೆ ಜೊತೆಗೆ 45 ನಿಮಿಷ ಕಾಲ ಚರ್ಚೆಯಾಗಿದ್ದೇನು?
ಬೆಂಗಳೂರು, ಮೇ25: ಕಾಂಗ್ರೆಸ್ ಸರ್ಕಾರ ರಚನೆಯ ಬಳಿಕ ಕೈ ಪಾಳಯದಲ್ಲಿ ಸಂಪುಟ ವಿಸ್ತರಣೆಯ ಸರ್ಕಸ್ ಒಂದು ಕಡೆಯಾದ್ರೆ, ಇತ್ತ ಪ್ರಬಲ ಖಾತೆಗಳ ಮೇಲೆ ಹಿರಿಯ ಕಾಂಗ್ರೆಸ್ ನಾಯಕರು ಕಣ್ಣೀಟ್ಟಿದ್ದು, ಹೈಕಮಾಂಡ್ ನಾಯಕರಿಗೆ ದೊಡ್ಡ ತಲೆನೋವಾಗಿದೆ.
ಹೌದು, ಮುಖ್ಯಮಂತ್ರಿ ಸ್ಥಾನಕ್ಕೆ ನಡೆದ ಹಗ್ಗಾಜಗ್ಗಾಟದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮ್ಮ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನವನ್ನ ಕೊಡಿಸುವ ಸಲುವಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಎಂಟು ಸಚಿವರನ್ನು ಹೊಂದಿರುವ ಸಂಪುಟಕ್ಕೆ ಇನ್ನೂ 20 ಶಾಸಕರನ್ನು ಸೇರ್ಪಡೆ ಮಾಡಿಕೊಳ್ಳಲು ನಾಯಕರು ಪಕ್ಷದ ಹೈಕಮಾಂಡ್ ಒಪ್ಪಿಗೆ ಪಡೆಯುವ ಸಾಧ್ಯತೆಯಿದೆ.

ಇನ್ನೂ ಒಂದೆರಡು ದಿನಗಳಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಪೋರ್ಟ್‌ಫೋಲಿಯೋ ಹಂಚಿಕೆ ಕೂಡ ಶೀಘ್ರದಲ್ಲೇ ಆಗಬಹುದು. ಬುಧವಾರ ನಡೆದ ವಿಧಾನಸಭೆ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಂತರ ಸಿದ್ದರಾಮಯ್ಯ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇತ್ತ ಬುಧವಾರ ಸಿದ್ದರಾಮಯ್ಯ ಅವರಿಗಿಂತ ಮುಂಚಿತವಾಗಿಯೇ ಶಿವಕುಮಾರ್ ದೆಹಲಿ ತಲುಪಿದ್ದಾರೆ. ಸಿದ್ದರಾಮಯ್ಯ ಅವರು ನವದೆಹಲಿಗೆ ಬಂದಿಳಿಯುವ ಮುನ್ನ ಡಿ ಕೆ ಶಿವಕುಮಾರ್ ಅವರ ಸಹೋದರ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಈಗಾಗಲೇ ಜಲಸಂಪನ್ಮೂಲ ಖಾತೆಗಾಗಿಯೇ ಡಿ ಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಎಂ ಬಿ ಪಾಟೀಲ್ ಪಟ್ಟು ಹಿಡಿದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಹಲವು ನೀರಾವರಿ ಯೋಜನೆಗಳು ಬಾಕಿ ಉಳಿದಿವೆ, ಹೀಗಾಗಿ ನನಗೆ ಜಲಸಂಪನ್ಮೂಲ ಖಾತೆ ಬೇಕು ಎಂದು ಸಿದ್ದರಾಮಯ್ಯ ಅವರ ಬಳಿ ಎಂ ಬಿ ಪಾಟೀಲ್ ಮನವಿ ಮಾಡುವ ಮೂಲಕ ಒತ್ತಡ ಹಾಕಿದ್ದಾರೆ. ಇತ್ತ ಮೇಕೆದಾಟು ಪಾದಯಾತ್ರೆ ನಡೆಸಿರುವ ಡಿ ಕೆ ಶಿವಕುಮಾರ್ ಸಹ ಮೇಕೆದಾಟು ಯೋಜನೆ ಜಾರಿಗೊಳಿಸಲು ಜಲಸಂಪನ್ಮೂಲ ಖಾತೆಯ ಮೇಲೆ ಕಣ್ಣೀಟ್ಟಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ದೆಹಲಿಗೆ ಬರುವ ಮುನ್ನವೇ ಜಲಸಂಪನ್ಮೂಲ ಖಾತೆಯ ವಿಚಾರವಾಗಿ ಮಲ್ಲಿಕಾರ್ಜುನ್ ಖರ್ಗೆ ಜೊತೆಗೆ ಡಿ ಕೆ ಶಿವಕುಮಾರ್ ಮಾತುಕಡೆ ನಡೆಸಿದ್ದಾರೆ. ಅಲ್ಲದೇ ಇನ್ನೊಂದು ಪ್ರಬಲ ಖಾತೆಯ ಬಗ್ಗೆಯೂ ಡಿಕೆಶಿ ಒತ್ತಡ ಹಾಕಿದ್ದಾರೆ.

ಇನ್ನೂ ಕಂದಾಯ ಖಾತೆಗಾಗಿ ಕೇಂದ್ರದ ಮಾಜಿ ಸಚಿವ ಹಾಗೂ ದೇವನಹಳ್ಳಿ ಶಾಸಕ ಕೆ.ಎಚ್.ಮುನಿಯಪ್ಪ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆದರೆ ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳ ಬಂಡವಾಳವನ್ನು ತೆಗೆದುಕೊಳ್ಳಲು ಪರಮೇಶ್ವರ ಅವರನ್ನು ಕೇಳಬಹುದು ಎಂದು ಮೂಲಗಳು ತಿಳಿಸಿವೆ.
ಇತ್ತ ಚಾಮರಾಜಪೇಟೆ ಶಾಸಕ ಮತ್ತು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರು ವಸತಿ ಖಾತೆಯನ್ನು ನಿರೀಕ್ಷಿಸುತ್ತಿದ್ದಾರೆ ಏಕೆಂದರೆ ಅವರು ಅಗತ್ಯವಿರುವ ಜನರಿಗೆ ಸಹಾಯ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಇನ್ನೂ ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಈ ಖಾತೆಯ ಭರವಸೆ ನೀಡಿದ್ದು, ಐದು ವರ್ಷಗಳಲ್ಲಿ ಬಡವರಿಗೆ ಸುಮಾರು 15,000 ಮನೆಗಳನ್ನು ನಿರ್ಮಿಸಲು ಸರ್ಕಾರ ಯೋಜಿಸುತ್ತಿದೆ ಎನ್ನಲಾಗಿದೆ.












Click it and Unblock the Notifications