ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವ ವಿಚಾರ, ಕೇಂದ್ರ ಸರ್ಕಾರಕ್ಕೆ ಡಿಸಿಎಂ ಮಹತ್ವದ ಮನವಿ | DK Shivakumar
ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವ ಮೂಲಕ ಕರ್ನಾಟಕದ ರೈತರಿಗೆ ಅನುಕೂಲ ಮಾಡಿಕೊಡಲು ಕರ್ನಾಟಕ ಸರ್ಕಾರ ಪ್ರಯತ್ನ ಮಾಡುತ್ತಲೇ ಇದೆ. ಆದರೆ ಇದಕ್ಕೆ ಪದೇ ಪದೇ ನೆರೆಯ ಆಂಧ್ರಪ್ರದೇಶ ದೊಡ್ಡ ಕಿರಿಕ್ ಮಾಡುತ್ತಾ ಬಂದಿದ್ದು, ಈಗಲೂ ಅದೇ ರೀತಿಯಾಗಿ ತೊಂದರೆ ಕೊಡಲು ನೋಡುತ್ತಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಪ್ರಕರಣ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಇರುವಾಗ, ಭೂಸ್ವಾಧೀನ ಪ್ರಕ್ರಿಯೆಗೆ ಕ್ರಮವನ್ನ ಕೈಗೊಳ್ಳಬಾರದು ಎಂದು ಆಂಧ್ರಪ್ರದೇಶ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿರುವುದು ಸರಿಯಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.
ಈಗಾಗಲೇ ಹೊರಡಿಸಿರುವ ಆದೇಶದಂತೆ ಕೇಂದ್ರ ಸರ್ಕಾರ ನಡೆದುಕೊಳ್ಳಬೇಕು, ಅಣೆಕಟ್ಟು ಮಟ್ಟವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಏರಿಕೆ ಮಾಡುವ ವಿಚಾರದಲ್ಲಿ ಹೊರಡಿಸಬೇಕಾದ ಅಧಿಸೂಚನೆ ತಡೆಹಿಡಿಯಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಡಿಸಿಎಂ. ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಈ ವಿಚಾರದಲ್ಲಿ ಇತರ ರಾಜ್ಯಗಳ ಹಸ್ತಕ್ಷೇಪ ಅನಾವಶ್ಯಕ ಎಂದು ಆಂಧ್ರಪ್ರದೇಶ ಸರ್ಕಾರದ ನಡೆ ವಿರುದ್ಧ ಡಿಸಿಎಂ ಗುಡುಗಿದ್ದಾರೆ.

ಆಂಧ್ರ ಸರ್ಕಾರದ ನಡೆಗೆ ಡಿಸಿಎಂ ಬೇಸರ
ಅಂದಹಾಗೆ 16.09.2025ರ ಕ್ಯಾಬಿನೆಟ್ ಸಭೆ ಮೂಲಕ 1.33 ಲಕ್ಷ ಎಕರೆ ಭೂಮಿ ಒಂದೇ ಬಾರಿ ಸ್ವಾಧೀನ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. 70 ಸಾವಿರ ಕೋಟಿ ಹಣ ಒಟ್ಟಾರೆ ಮೂರು ಹಂತಗಳಲ್ಲಿ ನಿಗದಿ ಮಾಡಿಕೊಳ್ಳಲು ಹೊರಟಿದ್ದೆವು. ಎಕರೆಗೆ 35 ರಿಂದ 40 ಲಕ್ಷ ರೂಪಾಯಿ ಪರಿಹಾರ ನಿಗದಿ ಮಾಡಿದ್ದೆವು. ಆದರೆ ಈಗ ಭೂಸ್ವಾಧೀನ ಪ್ರಕ್ರಿಯೆಯನ್ನ ಆಂಧ್ರಪ್ರದೇಶ ಸರ್ಕಾರ ಪ್ರಶ್ನಿಸಿದೆ ಎಂದು, ಜಲಸಂಪನ್ಮೂಲ ಖಾತೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೇಸರ ಹೊರಹಾಕಿದ್ದಾರೆ. ಅಲ್ಲದೆ ನೇರವಾಗಿ ಈ ವಿಚಾರದಲ್ಲಿ ಆಂಧ್ರ ಸರ್ಕಾರಕ್ಕೆ ಖಡಕ್ ಸಂದೇಶವನ್ನು ಕರ್ನಾಟಕ ಸರ್ಕಾರ ರವಾನೆ ಮಾಡಿದಂತೆ ಆಗಿದೆ.
ದೆಹಲಿಗೆ ಸರ್ವಪಕ್ಷ ನಿಯೋಗ ಹೋಗುತ್ತಾ?
ಹಿಂದಿನ ನಿರ್ಣಯದ ಪ್ರಕಾರ ರಾಜ್ಯಕ್ಕೆ ಹೆಚ್ಚುವರಿ ನೀರು ಬಳಕೆಯ ಹಕ್ಕು ನೀಡಲಾಗಿದ್ದು, ತುಂಗಭದ್ರಾ ನೀರಿನ ಹಂಚಿಕೆ ವಿಚಾರದಲ್ಲೂ ನಮ್ಮ ಪಾಲಿನ ನೀರು ನಷ್ಟವಾಗುತ್ತಿದೆ. ಅದನ್ನು ಸರಿ ಮಾಡಲು ಈಗ ಪರ್ಯಾಯ ವ್ಯವಸ್ಥೆ ಅನ್ವೇಷಿಸಲಾಗುತ್ತಿದೆ ಎಂದಿದ್ದಾರೆ. ಅಲ್ಲದೆ ಲೋಕಸಭೆಯ ಅಧಿವೇಶನ ಆರಂಭ ಆದ ನಂತರ ರಾಜ್ಯದ ಸಂಸದರು ಪ್ರಧಾನಮಂತ್ರಿಗಳು ಸೇರಿದಂತೆ, ಜಲಶಕ್ತಿ ಸಚಿವರ ಗಮನಕ್ಕೆ ವಿಷಯ ತರುವಂತೆ ಮನವಿ ಮಾಡುವುದಾಗಿ ತಿಳಿಸಿದರು. ಇನ್ನೂ ಅಗತ್ಯವಿದ್ದರೆ ದೆಹಲಿಗೆ ತೆರಳಿ ಕೇಂದ್ರ ಸಚಿವರ ಭೇಟಿ ಆಗುವ ನಿರ್ಧಾರ ಕೂಡ ಪ್ರಕಟಿಸಿದ್ದಾರೆ. ಹಾಗೇ ಯೋಜನೆಗಾಗಿ ಈಗಾಗಲೇ ದೊಡ್ಡ ಮೊತ್ತ ಖರ್ಚು ಮಾಡಲಾಗಿದೆ. ನ್ಯಾಯಾಲಯದಿಂದ ಯಾವುದೇ ತಡೆ ಇಲ್ಲದಿದ್ದರೂ ಪ್ರಗತಿಗೆ ಅಡಚಣೆ ಉಂಟಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು. ರಾಜ್ಯದ ಹಿತದೃಷ್ಟಿಯಿಂದ ಸರ್ವಪಕ್ಷ ನಿಯೋಗವನ್ನ ಕರೆದುಕೊಂಡು ಹೋಗುವ ಸಿದ್ಧತೆಯಲ್ಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications