DK Shivakumar: ಅಜಿತ್ ಪವಾರ್ ಸಾವು; ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು: ಡಿ.ಕೆ. ಶಿವಕುಮಾರ್
ಬೆಂಗಳೂರು: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವು ಆಘಾತಕಾರಿ. ಅವರ ಸಾವಿನ ಸುದ್ದಿ ಕೇಳಿ ನನಗೂ ಗಾಬರಿಯಾಯಿತು. ರಾಜಕಾರಣಿಗಳಾದ ನಾವುಗಳು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಆಚೀಚೆ ಪ್ರಯಾಣ ಮಾಡುವಾಗ ಹುಷಾರಾಗಿ ಇರಬೇಕು. ಹೀಗೆ ಅನೇಕ ನಾಯಕರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಮಾತನಾಡಿ, ಅತ್ಯಂತ ಪ್ರಗತಿಪರ ಆಲೋಚನೆ ಹೊಂದಿದ್ದಂತಹ ನಾಯಕ ಅಜಿತ್ ಪವಾರ್ ಅವರು. ಎಲ್ಲಾ ಕೆಲಸಗಳಿಗೂ ಸಹಕಾರ ಕೊಡುತ್ತಿದ್ದಾರೆ ಎಂದು ಮೊನ್ನೆಯಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿಯವರು ಹೇಳಿದ್ದರು. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬ ವರ್ಗ ಹಾಗೂ ಬೆಂಬಲಿಗರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ. ಅವರ ಕುಟುಂಬಸ್ಥರು ಬೆಂಗಳೂರಿನಲ್ಲೂ ನೆಂಟಸ್ಥಿಕೆ ಬೆಳೆಸಿದ್ದಾರೆ. ಮಂಗಳವಾರ ಅವರ ಸಂಬಂಧಿಕರನ್ನು ಭೇಟಿಮಾಡಿದ್ದೇ ಎಂದರು.

ಅಜಿತ್ ಪವಾರ್ ಅವರು ಹಿರಿಯ ನಾಯಕರು. ರಾಜಕೀಯ ಭವಿಷ್ಯಕ್ಕಾಗಿ ಪಕ್ಷ ಬಿಟ್ಟು ಮರಳಿ ಬಂದರು. ಇದರ ಬಗ್ಗೆ ನಾನು ಮಾತನಾಡುವುದಿಲ್ಲ. ಪ್ರಸ್ತುತ ಮಹಾರಾಷ್ಟ್ರ ಡಿಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದರು.ಇತ್ತೀಚೆಗೆ ಹೆಚ್ಚು ವಿಮಾನ ಅಪಘಾತಗಳು ಆಗುತ್ತಿರುವ ಬಗ್ಗೆ ಹಾಗೂ ತಾಂತ್ರಿಕ ದೋಷ ಎಂದು ಹೇಳುತ್ತಿರುವ ಬಗ್ಗೆ ವಿಸ್ತೃತ ವರದಿ ಬಂದ ನಂತರ ಮಾತನಾಡುತ್ತೇನೆ. ತಾಂತ್ರಿಕ ದೋಷದ ಬಗ್ಗೆ ನನಗೆ ಏನು ಗೊತ್ತು. ಮುಂಬೈನ ಗೆಳೆಯರು ಸೇರಿದಂತೆ ಹಲವರು ವಿಷಯ ತಿಳಿಸಿದ್ದಾರೆ ಎಂದರು.
ತಿಮ್ಮಾಪುರ ರಾಜಿನಾಮೆಗೆ ಒತ್ತಾಯ; ವಿಪಕ್ಷಗಳ ಉತ್ಪ್ರೇಕ್ಷೆ
ಆರ್.ಬಿ.ತಿಮ್ಮಾಪುರ ಅವರ ರಾಜಿನಾಮೆಗೆ ವಿಪಕ್ಷಗಳು ಒತ್ತಾಯಿಸುತ್ತಿರುವ ಬಗ್ಗೆ ಕೇಳಿದಾಗ, "ನನ್ನ ಪ್ರಕಾರ ಆರ್.ಬಿ. ತಿಮ್ಮಾಪುರ ಅವರಿಗೂ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎನಿಸುತ್ತದೆ. ವಿಪಕ್ಷಗಳು ಬೇಕಂತಲೇ ಉತ್ಪ್ರೇಕ್ಷೆ ಮಾಡುತ್ತಿವೆ. ಇದರ ಬಗ್ಗೆ ಮುಖ್ಯಮಂತ್ರಿಯವರ ಬಳಿ ವಿವರವಾಗಿ ಮಾತನಾಡಿ ಆನಂತರ ತಿಳಿಸುತ್ತೇನೆ. ರಾಜಕೀಯ ಷಡ್ಯಂತ್ರ ನಡೆಯುತ್ತಿದೆ ಎಂದರು.
ಅಜಿತ್ ಪವಾರ್ ಅವರ ದುರ್ಮರಣ ಆಘಾತಕಾರಿ: ವಿಜಯೇಂದ್ರ
ಬೆಂಗಳೂರು: ಮಹಾರಾಷ್ಟ್ರದ ಹಿರಿಯ ರಾಜಕಾರಣಿ, ಅಲ್ಲಿನ ಉಪ ಮುಖ್ಯಮಂತ್ರಿಗಳಾದ ಅಜಿತ್ ಪವಾರ್ ಅವರು ವಿಮಾನ ದುರಂತದಲ್ಲಿ ದುರ್ಮರಣ ಹೊಂದಿರುವುದು ಬಹಳ ಆಘಾತಕಾರಿ ಸುದ್ದಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
8 ಬಾರಿ ಶಾಸಕರಾಗಿ, ಆ ರಾಜ್ಯದ ಉಪ ಮುಖ್ಯಮಂತ್ರಿಗಳಾಗಿದ್ದು, ಬೇರೆ ಬೇರೆ ಇಲಾಖೆಗಳನ್ನೂ ನಿರ್ವಹಿಸಿದ್ದ ಒಬ್ಬ ಹಿರಿಯ ರಾಜಕಾರಣಿ ವಿಮಾನ ದುರಂತದಲ್ಲಿ ಇನ್ನಿಲ್ಲವಾದುದು ಬಹಳ ನೋವು ತರುವ ಸಂಗತಿ ಎಂದು ತಿಳಿಸಿದರು. ಆ ನೋವನ್ನು ತಡೆಯುವ ಶಕ್ತಿಯನ್ನು ಭಗವಂತನು ಅವರ ಬೆಂಬಲಿಗರಿಗೆ ನೀಡಲಿ, ಅವರ ಕುಟುಂಬ ಸದಸ್ಯರಿಗೂ ನೋವು ತಡೆಯುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಅವರು ಪ್ರಾರ್ಥಿಸಿದರು.












Click it and Unblock the Notifications