ಕಟ್ಟಡಗಳಿಗೆ ಓಸಿ ಮತ್ತು ಸಿಸಿ ವಿನಾಯಿತಿ ಕುರಿತು ಅಪ್‌ಡೇಟ್ ಡಿ ಕೆ ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 11: ಕಟ್ಟಡಗಳಿಗೆ ಓಸಿ ಮತ್ತು ಸಿಸಿ ವಿನಾಯಿತಿ ವಿಚಾರವಾಗಿ ಚರ್ಚೆಯಾಗಿದೆ. ಸಧ್ಯಕ್ಕೆ 30x40 ವರೆಗಿನ ವಿಸ್ತೀರ್ಣದ ಕಟ್ಟಡಗಳಿಗೆ ವಿನಾಯಿತಿ ನೀಡಿದ್ದೇವೆ. ಉಳಿದಂತೆ ಕಾನೂನು ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದು, ಅವರ ಸಲಹೆ ಮೇರೆಗೆ ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿಗೆ ಹೊಸ ರೂಪ ನೀಡಲು ನಮ್ಮ ಸರ್ಕಾರ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಶಾಸಕರು ಹಾಗೂ ಜನರ ಅಭಿಪ್ರಾಯ ಸಂಗ್ರಹಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆಯನ್ನು ರೂಪಿಸಿ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಅನುಮೋದನೆ ಪಡೆಯಿತು. ಏಪ್ರಿಲ್ 23ರಂದು ರಾಜ್ಯಪಾಲರು ಜಿಬಿಎ ಕಾಯ್ದೆಗೆ ಒಪ್ಪಿಗೆ ನೀಡಿದ್ದು, ಸರ್ಕಾರ ಹಾಗೂ ಬೆಂಗಳೂರಿನ ನಾಗರೀಕರ ಪರವಾಗಿ ಘನವೆತ್ತ ರಾಜ್ಯಪಾಲರಿಗೆ ಧನ್ಯವಾದ ತಿಳಿಸುತ್ತೇನೆ. ಮೇ 15ರಂದು ಸರ್ಕಾರ ಜಿಬಿಎ ಕಾಯ್ದೆ ಜಾರಿಗೆ ತಂದು, ಜು.25ರಂದು ಜಿಬಿಎ ಅಡಿಯಲ್ಲಿ ಬೆಂಗಳೂರಿನಲ್ಲಿ ಐದು ಪಾಲಿಕೆ ರಚಿಸಲು ಅಧಿಸೂಚನೆ ಹೊರಡಿಸಲಾಯಿತು ಎಂದು ಹೇಳಿದರು.

ಸೆ.2ರಂದು ಈ ಪಾಲಿಕೆಗಳ ರಚನೆ ಆದೇಶ ಹೊರಡಿಸಲಾಗಿದ್ದು, ನಂತರ ಐದು ಪಾಲಿಕೆಗಳಿಗೆ ಆಯುಕ್ತರನ್ನು ನೇಮಿಸಲಾಗಿದೆ. ಬೆಂಗಳೂರು ಕೇಂದ್ರ ಪಾಲಿಕೆಯಲ್ಲಿ 50, ಬೆಂಗಳೂರು ದಕ್ಷಿಣಕ್ಕೆ 72, ಬೆಂಗಳೂರು ಪೂರ್ವಕ್ಕೆ 63, ಬೆಂಗಳೂರು ಪಶ್ಚಿಮದಲ್ಲಿ 111, ಬೆಂಗಳೂರು ಉತ್ತರದಲ್ಲಿ 72 ವಾರ್ಡ್ ಸೇರಿ ಒಟ್ಟು 368 ವಾರ್ಡ್ ಗಳನ್ನು ರಚಿಸಲಾಗಿದೆ. ಈ ಹಿಂದೆ 198 ವಾರ್ಡ್ ಇದ್ದವು, ಈಗ 368 ವಾರ್ಡ್ ಆಗಿವೆ. ಈ ವಾರ್ಡ್ ವಿಂಗಡಣೆ ಬಗ್ಗೆ ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
74ನೇ ತಿದ್ದುಪಡಿ ಉಲ್ಲಂಘನೆ ಆಗದಂತೆ ನಾವು ಈ ಪಾಲಿಕೆಗಳನ್ನು ರಚಿಸಿದ್ದೇವೆ. ಬೆಂಗಳೂರಿನಲ್ಲಿ ಉತ್ತಮ ಆಡಳಿತ ನೀಡಿ, ಸರ್ಕಾರವನ್ನು ಜನರ ಬಳಿಗೆ ತೆಗೆದು ಕೊಂಡುಹೋಗಬೇಕು. ಬೆಂಗಳೂರು ರಾಜ್ಯದ ಹೃದಯ ಭಾಗ. ಇಲ್ಲಿ 1.40 ಕೋಟಿ ಜನಸಂಖ್ಯೆ ಇದೆ. ಸಂಚಾರ ದಟ್ಟಣೆ ಸೇರಿದಂತೆ ಅನೇಕ ಸಮಸ್ಯೆ ಬಗೆಹರಿಸಲು ಈ ಜಿಬಿಎ ರಚಿಸಲಾಗಿದೆ ಮಾಡಲಾಗಿದೆ. ಸರ್ಕಾರದ ಸಹಕಾರ ಇಲ್ಲದೆ ಯಾವುದೇ ಪಾಲಿಕೆ ಯಶಸ್ವಿಯಾಗಿ ಆಡಳಿತ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ತೀರ್ಮಾನ ಮಾಡಿದ್ದೇವೆ. ಆಮೂಲಕ ಬೆಂಗಳೂರು ಹೊಸ ಇತಿಹಾಸ ಪುಟಕ್ಕೆ ಸೇರಿದೆ ಎಂದರು.
ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಪಕ್ಷ ಗೆದ್ದರು ಸರ್ಕಾರದ ಶ್ರೀರಕ್ಷೆ ಸದಾ ಪಾಲಿಕೆ ಮೇಲೆ ಇರಬೇಕು. ಎಲ್ಲಾ ಸಂದರ್ಭಗಳಲ್ಲಿ ಅನುದಾನದ ನೆರವು ಇರಬೇಕು ಎಂದು ಮುಖ್ಯಮಂತ್ರಿಗಳನ್ನು ಜಿಬಿಎ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಜಿಬಿಎ ಸಮಿತಿಯಲ್ಲಿ ಬಿಡಿಎ, ಬಿಎಂಆರ್ ಡಿಎ, ಬೆಸ್ಕಾಂ, ಬಿಡಬ್ಯೂಎಸ್ ಎಸ್ ಬಿ ಸೇರಿದಂತೆ ಇನ್ನು ಅನೇಕ ಸಂಸ್ಥೆಗಳ ಕಮಿಷನರ್, ಪೊಲೀಸ್ ಆಯುಕ್ತರು, ಸಂಚಾರಿ ಪೊಲೀಸ್ ಕಮಿಷನರ್, ಎಲ್ಲಾ ಅಧಿಕಾರಿಗಳು ಸದಸ್ಯರಾಗಿ ಇರುತ್ತಾರೆ. ಬೆಂಗಳೂರಿನ ಜನಪ್ರತಿನಿಧಿಗಳು ಹಾಗೂ ಬೆಂಗಳೂರಿನಲ್ಲಿ ಮತದಾನದ ಹಕ್ಕು ಹೊಂದಿರುವ ಎಲ್ಲಾ ಜನಪ್ರತಿನಿಧಿಗಳ ಜೊತೆಗೆ ಬೆಂಗಳೂರಿನಲ್ಲಿ ವಾಸಿಸುವ ಲೋಕಸಭಾ ಸದಸ್ಯರು, ಮುಖ್ಯ ಕಾರ್ಯದರ್ಶಿ ಹಾಗೂ ಎಸಿಎಸ್ ಅಧಿಕಾರಿಗಳನ್ನು ಈ ಸಮಿತಿಯಲ್ಲಿ ಸೇರಿಸುವ ಬಗ್ಗೆ ಇಂದು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಹೊಸ ದಿಕ್ಕು ನೀಡಲು, ಈ ಸಭೆಯಲ್ಲಿ ಜಿಬಿಎ ಸಮಿತಿ ಸದಸ್ಯರು ತಮ್ಮ ಅಭಿಪ್ರಾಯ ತಿಳಿಸಬಹುದು. ಇಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ನಿಮ್ಮ ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಸಿದ್ಧವಿದೆ. ನಾವು ಎಲ್ಲಾ ಆಸ್ತಿ ಡಿಜಿಟಲೀಕರಣ ಮಾಡಲಾಗುತ್ತಿದ್ದು, ಸುಮಾರು 2 ಸಾವಿರ ಕೋಟಿ ಆದಾಯ ಹೆಚ್ಚಳದ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಈ ವರ್ಷ 6200 ಕೋಟಿ ಆದಾಯ ಬಂದಿದ್ದು, ದೆಹಲಿಯಲ್ಲಿ ಕೇವಲ 2 ಸಾವಿರ ಕೋಟಿ ಮಾತ್ರ ಆದಾಯವಿದೆ ಎಂದು ಹೇಳಿದರು.












Click it and Unblock the Notifications