ಇಡಿ ಚಾರ್ಜ್‌ಶೀಟ್: ಕಾನೂನು ಹೋರಾಟ ಮಾಡುತ್ತೇನೆ ಎಂದ ಡಿಕೆ ಶಿವಕುಮಾರ್
ಬೆಂಗಳೂರು, ಮೇ. 26: ಐಟಿ ಅಧಿಕಾರಿಗಳು ಏನು ಮಾಡಿದ್ದಾರೋ ಇಡಿ ಅಧಿಕಾರಿಗಳು ಅದನ್ನೇ ದೋಷಾರೋಪ ಪಟ್ಟಿ ಎಂದು ಸಲ್ಲಿಸಿದ್ದಾರೆ. ಕೋರ್ಟ್ ನಿಂದ ದೋಷರೋಪ ಪಟ್ಟಿ ಪಡೆದ ಬಳಿಕ ಕಾನೂನು ಹೋರಾಟ ನಡೆಸುತ್ತೇನೆ. ಈ ರೀತಿಯ ರಾಜಕೀಯ ಅಸ್ತ್ರಗಳಿಗೆ ನಾನು ಹೆದರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
2019 ರಲ್ಲಿ ಇಡಿ ಅಧಿಕಾರಿಗಳು ದಾಖಲಿಸಿದ್ದ ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ 2017 ರಲ್ಲಿ ಅಹಮದ್ ಪಟೇಲ್ ಅವರ ಪರ ಕೆಲಸ ಮಾಡಿದಾಗ ನನ್ನ ಮೇಲೆ ಐಟಿ ದಳಿ ನಡೆಯಿತು. ಅಲ್ಲಿಂದ ಶುರುವಾದ ಐಟಿ,ಇಡಿ ದಾಳಿ ಇನ್ನೂ ಮುಂದುವರೆದಿವೆ. ಇಡಿ ಅಧಿಕಾರಿಗಳು ಸಲ್ಲಿಸಿರುವ ದೋಷಾರೋಪ ಪಟ್ಟಿ ಪ್ರತಿ ನಮಗೆ ಸಿಕ್ಕಿಲ್ಲ. ಅದನ್ನು ಪಡೆದ ಬಳಿಕ ಕಾನೂನು ಹೋರಾಟ ಮಾಡುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನನ್ನ ರಾಜಕೀಯವಾಗಿ ಮುಗಿಸಲು ತನಿಖಾ ಸಂಸ್ಥೆಗಳನ್ನು ಅಸ್ತ್ರಗಳನ್ನಾಗಿ ಬಳಸಲಾಗುತ್ತಿದೆ. ಐಟಿ ಅಧಿಕಾರಿಗಳು ಏನು ತನಿಖೆ ಮಾಡಿದ್ದಾರೋ ಅದನ್ನೇ ಇಡಿ ಅಧಿಕಾರಿಗಳು ತೋರಿಸಿದ್ದಾರೆ. ಈಗಾಗಲೇ ಐಟಿ ದಾಳಿಯನ್ನು ಎದುರಿಸಿದ್ದೇನೆ. ಹೊಸದಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಅರು ತಿಂಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುತ್ತಾರೆ. ಆದರೆ ನನ್ನ ಪ್ರಕರಣದಲ್ಲಿ ಬಹಳ ಸುದೀರ್ಘವಾಗಿ ತನಿಖೆ ನಡೆಸಿ ಎರಡು ವರ್ಷಗಳ ನಂತರ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾನು ಏನೂ ತಪ್ಪು ಮಾಡಿಲ್ಲ ಎಂಬುದು ಇಡೀ ರಾಜ್ಯಕ್ಕೆ ಮತ್ತು ದೇಶಕ್ಕೆ ಗೊತ್ತಿದೆ. ರಾಜಕೀಯವಾಗಿ ಎಲ್ಲಾ ಅಸ್ತ್ರಗಳನ್ನು ಬಳಸುತ್ತಿದ್ದಾರೆ. ಬಿಜೆಪಿ ವಿರುದ್ಧ ನಿಲ್ಲುವರಿಗೆ ಈ ರೀತಿ ಮಾಡುತ್ತಿದ್ದಾರೆ. ನಾನು ಕಾನೂನು ಪರಿಪಾಲನೆ ಮಾಡುವ ವ್ಯಕ್ತಿ. ಎಲ್ಲಾ ಎದುರಿಸಲು ಸಿದ್ಧನಿದ್ದೇನೆ. ಕಾನೂನು, ಸತ್ಯದಲ್ಲಿ ನನಗೆ ನಂಬಿಕೆಯಿದೆ ಎಂದು ಡಿಕೆಶಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಡಿಕೆ ಮನೆಯಲ್ಲಿ ಚಂಡಿಕಾ ಹೋಮ:
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ಚಂಡಿಕಾ ಹೋಮ ಮಾಡಲಾಗಿದೆ. ಡಿಕೆಶಿ ಅವರ ಸದಾಶಿವನಗರ ಮನೆಯಲ್ಲಿ ಹೋಮ ಹವನ ನಡೆಯುತ್ತಿತ್ತು. ಹೋಮದ ಸಂಭ್ರಮದಲ್ಲಿದ್ದ ಡಿಕೆ ಕುಟುಂಬಕ್ಕೆ ಇಡಿ ಶಾಕ್ ನೀಡಲಾಗಿದೆ.












Click it and Unblock the Notifications