ಸಿ.ಟಿ ರವಿಗೆ ಜೀವ ಬೆದರಿಕೆ: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 21: ನನ್ನಿಂದ ಸಿ ಟಿ ರವಿಗೆ ಜೀವ ಬೆದರಿಕೆ ಇದೆ ಎಂದು ಬಿಜೆಪಿ ಆರೋಪ ಮಾಡಿದೆ. ನಾನು ಆ ಜಾಗದಲ್ಲೇ ಇರಲಿಲ್ಲ. ಪರಿಷತ್ ನಲ್ಲಿ 10 ಪ್ರಶ್ನೆಗೆ ಉತ್ತರ ನೀಡಿ, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಾನು ವಿಧಾನಸಭೆ ಕಲಾಪಕ್ಕೆ ಹೋದೆ. ನಂತರ ಈ ಘಟನೆ ನಡೆದಿದೆ. ನಂತರ ನಾನು ಮತ್ತೆ ಪರಿಷತ್ತಿಗೆ ಹೋದೆ. ಜೀವ ಬೆದರಿಕೆ ಒಡ್ಡಿದ್ದರೆ ತನಿಖೆ ಮಾಡಲಿ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಈ ಕುರಿತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಎಲ್ಲಾ ವಿಡಿಯೋ ದಾಖಲೆ ಇದೆಯಲ್ಲ. ಜೀವ ಬೆದರಿಕೆ ಹಾಕಿದ್ದರೆ ಕ್ರಮ ಕೈಗೊಳ್ಳಲಿ. ನಾನು ಏನು ದೊಡ್ಡವನಲ್ಲ. ನಾನು ತಪ್ಪು ಮಾಡಿದ್ದರೆ ಕಾನೂನು ಶಿಕ್ಷೆ ನೀಡಲಿದೆ ಎಂದು ಹೇಳಿದರು.

ನಾನು ಫಸ್ಟ್ರೇಷನ್ ಎಂದು ಹೇಳಿದ್ದೇನೆ ಹೊರತು ಬೇರೆ ಪದ ಬಳಸಿಲ್ಲ ಎಂಬ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ಮಾಧ್ಯಮಗಳಲ್ಲೂ ಪ್ರಸಾರವಾಗಿದೆ. ಆತ ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟ್ ಎಂದು ಕರೆದಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಇದು ಪ್ರಕಟವಾಗಿವೆ. ಅವರು ಒಂದು ಸುಳ್ಳು ಮುಚ್ಚಿಹಾಕಲು ನೂರು ಸುಳ್ಳು ಹೇಳಬೇಕಾಗಿದೆ ಎಂದು ತಿಳಿಸಿದರು.
ವಿಡಿಯೋ ದಾಖಲೆಗಳು ಇಲ್ಲ ಎಂಬ ಸಭಾಪತಿ ಬಸವರಾಜ ಹೊರಟ್ಟಿ ಯವರ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಉತ್ತರಿಸಿದ್ದು, ಹಾಗಾದರೆ ಮಾಧ್ಯಮಗಳು ತೋರುತ್ತಿರುವುದು ಸುಳ್ಳಾ? ಎಂದು ಮರು ಪ್ರಶ್ನೆ ಹಾಕಿದರು.
ಬಿಜೆಪಿ ನಾಯಕ ಸಿ.ಟಿ ರವಿ ಅವರ ಹೇಳಿಕೆ ಇಡೀ ಹೆಣ್ಣು ಕುಲಕ್ಕೆ ಮಾಡಲಾದ ದೊಡ್ಡ ಅಪಮಾನವಾಗಿದೆ. ಈ ವ್ಯಕ್ತಿಯಿಂದ ಇಂತಹ ಪ್ರವೃತ್ತಿ ಇದೇ ಮೊದಲಲ್ಲ. ಸಿದ್ದರಾಮಯ್ಯ ಅವರು, ಜಯಮಾಲ, ಸೇರಿದಂತೆ ನಮ್ಮ ನಾಯಕರ ಬಗ್ಗೆ ಈ ಹಿಂದೆ ಅನೇಕ ಬಾರಿ ಹೀನವಾಗಿ ಮಾತನಾಡಿದ್ದಾರೆ. ಸಿ.ಟಿ. ರವಿ ಅವರ ಹೇಳಿಕೆ ಹಾಗೂ ನಡತೆ ಸರಿಯೋ ತಪ್ಪೋ ಎಂದು ಬಿಜೆಪಿಯ ಎಲ್ಲಾ ನಾಯಕರು ಹೇಳಲಿ. ಪೊಲೀಸರ ವಿಚಾರ ನಂತರ ಮಾತನಾಡೋಣ. ಅದನ್ನು ಬಿಟ್ಟು ಪೊಲೀಸರ ಮೇಲೆ ದೂರು ನೀಡುವುದಲ್ಲ. ಪೊಲೀಸರು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳೋಣ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
ಚಿಕ್ಕಮಗಳೂರು ಬಂದ್ ಕರೆ ನೀಡಿರುವ ಕುರಿತು ಮಾತನಾಡಿ, ಚಿಕ್ಕಮಗಳೂರು ಮಾತ್ರವಲ್ಲ, ದೇಶವನ್ನೇ ಬಂದ್ ಮಾಡಲಿ. ಆತ ಮಾಡಿರುವುದು ಘನಕಾರ್ಯವೇ? ಘನಕಾರ್ಯ ಮಾಡಿ ಧೀರಾದಿ ಧೀರನಂತೆ ಬಂದ್ ಮಾಡುತ್ತಾರಾ ಮಾಡಿಕೊಳ್ಳಲಿ ಎಂದು ಡಿ ಕೆ ಶಿವಕುಮಾರ್ ಅವರು ಹೇಳಿದರು.
ಮಹಿಳೆಯರಿಗೆ ಅಪಮಾನ, ಹೀನ ಮಾತುಗಳೇ ನಮ್ಮ ಸಂಸ್ಕೃತಿ ಎಂದು ಬಿಜೆಪಿ ಒಪ್ಪಿಕೊಳ್ಳಲಿ. ನಾವು ತಕರಾರು ಮಾಡುವುದಿಲ್ಲ. ಸಿ.ಟಿ. ರವಿ ಕೇವಲ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಮಾತ್ರ ಮಾತನಾಡಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆಯೂ ಹೀನ ಮಾತು ಆಡಿದ್ದಾರೆ. ಸದನದಲ್ಲಿ ನಿತ್ಯ ಸುಮಂಗಲಿ ಎಂದು ಪದ ಬಳಕೆ ಮಾಡಿದ್ದಾರೆ. ರವಿ ಅವರ ಮಾತುಗಳು ಸರಿಯೋ ತಪ್ಪೋ ಎಂದು ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿಳಿಸಿದರು.












Click it and Unblock the Notifications