ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್‌ಗೆ?; ಕಾದು ನೋಡಿ ಎಂದ ಡಿಕೆಶಿ
ಬೆಂಗಳೂರು, ಮಾರ್ಚ್ 15; ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಸೊರಬದ ಮಾಜಿ ಶಾಸಕ, ಗೀತಾ ಅವರ ಸಹೋದರ ಮಧು ಬಂಗಾರಪ್ಪ ಈಗಾಗಲೇ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ.
Recommended Video
ಸೋಮವಾರ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ನಟ ಶಿವರಾಜ್ ಕುಮಾರ್ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದರು. ಈ ಭೇಟಿ ಬಳಿಕ ಡಿ. ಕೆ. ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
"ಶಿವರಾಜ್ ಕುಮಾರ್ ಅವರು ನಮ್ಮ ಆತ್ಮೀಯರು. ಅವರ ಕುಟುಂಬ ಇಡೀ ದೇಶ ಹಾಗೂ ರಾಜ್ಯದ ಆಸ್ತಿ. ಆ ಕುಟುಂಬದ ಮೇಲೆ ನಮಗೆ ಅಪಾರ ಗೌರವವಿದೆ. ನಮಗೂ ಅವರ ಜತೆ ವೈಯಕ್ತಿಕ ಸಂಬಂಧಗಳಿವೆ" ಎಂದು ಹೇಳಿದರು.
"ಗೀತಾ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಹೆಚ್ಚು ಹೇಳುವುದಿಲ್ಲ, ಕಾದು ನೋಡಿ" ಎಂದು ಡಿ. ಕೆ. ಶಿವಕುಮಾರ್ ತಿಳಿಸಿದರು. ಗೀತಾ ಶಿವರಾಜ್ ಕುಮಾರ್ 2014ರ ಲೋಕಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು. ರಾಜಕೀಯವಾಗಿ ಮಧು ಬಂಗಾರಪ್ಪ ಜೊತೆ ಇರುವ ಅವರು ಕಾಂಗ್ರೆಸ್ ಸೇರಲಿದ್ದಾರೆಯೇ? ಎಂಬ ಸುದ್ದಿ ಹಬ್ಬಿದೆ.

ನಾನು ಆ ಬಗ್ಗೆ ಹೆಚ್ಚು ಹೇಳುವುದಿಲ್ಲ
"ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರುವ ಬಗ್ಗೆ ನಾನು ಆ ಬಗ್ಗೆ ಹೆಚ್ಚು ಹೇಳುವುದಿಲ್ಲ. ಮಧು ಬಂಗಾರಪ್ಪ ಅವರಿಗೆ ಆ ಬಗ್ಗೆ ಮಾತನಾಡುವ ಹಕ್ಕಿದೆ. ಅವರು ಮಾತನಾಡಿದ್ದಾರೆ. ಸಂದರ್ಭ ಬಂದಾಗ ಗೀತಾ ಶಿವರಾಜ್ ಕುಮಾರ್ ಅವರೇ ಮಾತನಾಡುತ್ತಾರೆ" ಎಂದು ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಮಧು ಬಂಗಾರಪ್ಪ ಭೇಟಿ
ಶುಕ್ರವಾರ ಮಧು ಬಂಗಾರಪ್ಪ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ್ದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, "ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರಿದ್ದಾರೆ ಅಂದುಕೊಳ್ಳಿ" ಎಂದು ಹೇಳಿದ್ದರು. ಈ ಮೂಲಕ ಶೀಘ್ರವೇ ಅವರು ಪಕ್ಷ ಸೇರ್ಪಡೆಯಾಗುವ ಕುರಿತು ಸುಳಿವು ಕೊಟ್ಟಿದ್ದರು.

ಈ ಬಗ್ಗೆ ಮಾತುಕತೆ ನಡೆಸುತ್ತೇನೆ
ಮಧು ಬಂಗಾರಪ್ಪ ಭೇಟಿ ಬಳಿಕ ಮಾತನಾಡಿದ್ದ ಡಿ. ಕೆ. ಶಿವಕುಮಾರ್, "ಕಷ್ಟ ಕಾಲದಲ್ಲಿ ಗೀತಾ ಶಿವರಾಜ್ ಕುಮಾರ್ ಪಕ್ಷ ಉಳಿಸಲು ಹೋರಾಟ ಮಾಡಿದವರು. ಅವರನ್ನು ನಾವು ಗೌರವಿಸುತ್ತೇವೆ. ಅವರ ಜೊತೆ ಮಾತುಕತೆ ನಡೆಸುತ್ತೇನೆ" ಎಂದು ಹೇಳಿಕೆ ನೀಡಿದ್ದರು.

ಶಿವರಾಜ್ ಕುಮಾರ್ ಭೇಟಿ
ಮಧು ಬಂಗಾರಪ್ಪ ಹೇಳಿಕೆ ಬಳಿಕ ಸೋಮವಾರ ಸದಾಶಿವನಗರದ ನಿವಾಸದಲ್ಲಿ ನಟ ಶಿವರಾಜ್ ಕುಮಾರ್ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರಲಿದ್ದಾರೆಯೇ? ಕಾದು ನೋಡಬೇಕಿದೆ.












Click it and Unblock the Notifications