ಬೊಮ್ಮಾಯಿ ಅವರನ್ನು ಸಿಎಂ ಸ್ಥಾನದಿಂದ ಇಳಿಸಿ, ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಲಿ: ಡಿಕೆಶಿ
ಯಡಿಯೂರಪ್ಪನವರ ಕಣ್ಣಲ್ಲಿ ನೀರು ಹಾಕಿಸಿ ಅಧಿಕಾರದಿಂದ ಕೆಳಗೆ ಇಳಿಸಿದ್ದು ಯಾಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಸಿದರು.
ಬೆಂಗಳೂರು,ಫೆಬ್ರವರಿ28: ರಾಜ್ಯ ಪ್ರಧಾನಿ ಮೋದಿ ಆಗಮಿಸಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಹಾಡಿ ಹೊಗಳಿದ ವಿಚಾರವಾಗಿ ಕಾಂಗ್ರೆಸ್ ಪಾಳಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.
ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಯಡಿಯೂರಪ್ಪ ಅವರಿಗೆ ತೋರಿದ ನಮ್ರತೆ ಇಷ್ಟು ದಿನ ಎಲ್ಲಿ ಹೋಗಿತ್ತು? ಅವರ ಕಣ್ಣಲ್ಲಿ ನೀರು ಹಾಕಿಸಿ ಅಧಿಕಾರದಿಂದ ಕೆಳಗೆ ಇಳಿಸಿದ್ದು ಯಾಕೆ ಎಂಬುದರ ಬಗ್ಗೆ ಪ್ರಧಾನಮಂತ್ರಿಗಳು ಸ್ಪಷ್ಟನೆ ನೀಡಲಿ ಎಂದು ಹೇಳಿದರು.

ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ಅವರಿಗೆ ಕೊಟ್ಟ ನೋವು, ವಿಧಾನಸೌಧದಿಂದ ರಾಜ್ಯಪಾಲರ ಮನೆವರೆಗೂ ಕಣ್ಣೀರು ಹಾಕಿಕೊಂಡು ಹೋಗಿ ರಾಜೀನಾಮೆ ನೀಡಿದ್ದರ ಬಗ್ಗೆ ಮೋದಿ ಅವರು ಮಾತನಾಡಬೇಕು. ಯಡಿಯೂರಪ್ಪ, ಅವರ ಕುಟುಂಬ ಸದಸ್ಯರು, ಆಪ್ತರ ಮೇಲೆ ಇಡಿ ದಾಳಿ ನೋಟೀಸ್ ನೀಡಿರುವ ಬಗ್ಗೆ, ಅವರನ್ನು ತನಿಖಾಧಿಕಾರಿಗಳು ಎಷ್ಟು ಬಾರಿ ಕರೆಸಿಕೊಂಡು ವಿಚಾರಣೆ ಮಾಡಿದ್ದಾರೆ ಎಂಬುದರ ಬಗ್ಗೆ ಮೋದಿ ಅವರು ವಿವರಣೆ ನೀಡಬೇಕು ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಚುನಾವಣೆ ನಡೆಸಿ 104 ಸೀಟು ಪಡೆದ ನಂತರ ಅಧಿಕಾರದಿಂದ ಯಾಕೆ ಇಳಿಸಿದರು? ಚುನಾವಣೆ ಮಾಡಲು ಅವರು ಬೇಕಾಗಿತ್ತು, ಆಪರೇಷನ್ ಕಮಲ ಮಾಡಲು ಅವರು ಬೇಕಾಗಿತ್ತು, ಆದರೆ ಅಧಿಕಾರವನ್ನು ಯಾಕೆ ಕಸಿದುಕೊಂಡರು? ಅವರನ್ನು ನಾಯಕತ್ವದಿಂದ ತೆಗೆದ ನಂತರ ಪಕ್ಷಕ್ಕೆ ಅಭದ್ರತೆ ಎಂದುರಾಗಿದೆ. ಅವರ ಅಭಿಮಾನಿಗಳು ಅವರ ಹುಟ್ಟುಹಬ್ಬ ಮಾಡಲು ಮುಂದಾದಾಗ ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಅವರ ಕಾಲದಲ್ಲಿ ಮಾಡಿದ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದಾರೆ ಸಂತೋಷ. ಆದರೆ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರಿಗೆ ತೋರಿದ ನಮ್ರತೆ ಇಷ್ಟು ದಿನ ಎಲ್ಲಿಗೆ ಹೋಗಿತ್ತು?
ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎಂದು ಅಧಿಕೃತವಾಗಿ ಘೋಷಿಸಿ, ಅವರಿಗೆ ಜವಾಬ್ದಾರಿ ನೀಡಲಿ. ಬೊಮ್ಮಾಯಿ ಅವರನ್ನು ಸಿಎಂ ಸ್ಥಾನದಿಂದ ಇಳಿಸಿ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಲಿ. ಆಗ ಅವರ ನಮ್ರತೆಯನ್ನು ಜನ ನಂಬುತ್ತಾರೆ. ಅದನ್ನು ಬಿಟ್ಟು ರಾಜಕಾರಣದಲ್ಲಿ ನಾಟಕೀಯ ಸಿಂಪತಿಯನ್ನು ಜನ ಒಪ್ಪುವುದಿಲ್ಲ.

ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ಮೋದಿ ಅವರ ಹೇಳಿಕೆ ಕುರಿತು ಮಾತನಾಡಿ, ಅವರು 40% ಕಮಿಷನ್ ದೂರು ನೀಡಿದ ಕೆಂಪಣ್ಣ ಅವರಿಗೆ ಯಾಕೆ ಉತ್ತರ ನೀಡುತ್ತಿಲ್ಲ? ಪಿಎಸ್ಐ ಹಗರಣ, ನೇಮಕಾತಿ ಅಕ್ರಮ ಯಾರಿಂದ ಆಗುತ್ತಿದೆ? ಸ್ಕಿಲ್ ಇಂಡಿಯಾ ಕಿಲ್ ಇಂಡಿಯಾ ಆಗಿದೆ. ಇದೆಲ್ಲದರ ಬಗ್ಗೆ ನಾವು ಮಾಹಿತಿ ಸಂಗ್ರಹಿಸುತ್ತಿದ್ದೇವೆ. ನಂತರ ಈ ವಿಚಾರವಾಗಿ ಮಾತನಾಡುತ್ತೇವೆ. ಈ ಹಗರಣಗಳ ಬಗ್ಗೆ ಮೋದಿ ಅವರಿಗೆ ಮಾಹಿತಿ ಇಲ್ಲವೇ? ಬಿಜೆಪಿ ಸರ್ಕಾರ ರಾಜ್ಯವನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಿದೆ ಎಂದು ಹೇಳಿದರು.












Click it and Unblock the Notifications