ಬಿಜೆಪಿ ನಾಯಕನಿಗಾಗಿ ದೇವರಲ್ಲಿ ಪ್ರಾರ್ಥಿಸಿದ ಡಿಕೆ ಶಿವಕುಮಾರ್, ಯಾಕೆ?
ಕೇರಳದ ಕಾಸರಗೋಡಿನ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಪಾಲ್ಗೊಂಡರು. ಬಳಿಕ ವೇದಿಕೆಯಲ್ಲಿ ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ವೇದಿಕೆ ಹಂಚಿಕೊಂಡರು. ಪಕ್ಷದ ವಿಚಾರವಾಗಿ ಕಚ್ಚಾಡುತ್ತಿದ್ದ ಬಿಜೆಪಿ ನಾಯಕನಿಗಾಗಿ ಡಿಕೆ ಶಿವಕುಮಾರ್ ಅವರು ದೇವರಲ್ಲಿ ಪ್ರಾರ್ಥಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿಯಲ್ಲಿ ಮೂರು ಬಾರಿ ಸಂಸದರಾಗಿದ್ದರು. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಕಳೆದ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಕಟೀಲ್ ಅವರ ಮುಂದಿನ ನಡೆ ಏನು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಅಚ್ಚರಿಯೆಂದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಟೀಲ್ ಅವರಿಗಾಗಿ ದೇವರಲ್ಲಿ ಪ್ರಾರ್ಥಿಸಿದ್ದು, ಇದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ವೇದಿಕೆಯಲ್ಲಿ ನನ್ನೊಂದಿಗೆ ಮಿತ್ರರಾದ, ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಇದ್ದಾರೆ. ರಾಜಕಾರಣದಲ್ಲಿ ಏನೂ ಶಾಶ್ವತ ಅಲ್ಲ, ಇಲ್ಲಿ ಹೀರೋ ಜೀರೋ ಆಗ್ತಾನೆ, ಜೀರೋ ಹೀರೋ ಆಗ್ತಾನೆ. ಹಾಗಾಗಿ ನಳಿನ್ ಕುಮಾರ್ ಕಟೀಲ್ ಅವರನ್ನು ಮಾಜಿ ಎಂದು ಭಾವಿಸುವುದು ಬೇಡ. ನಾವಿಬ್ಬರೂ ಈಗ ಒಂದೇ ವೇದಿಕೆಯಲ್ಲಿ ದೇವರನ್ನ ಪ್ರಾರ್ಥಿಸಿದ್ದೇವೆ. ಆ ಭಗವಂತ ನಿಮಗೆ ಎಲ್ಲ ವಿಘ್ನಗಳನ್ನು ದೂರ ಮಾಡಿ ಮತ್ತೆ ಈ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಗಲಿ ಎಂದು ನಾನು ಕೂಡ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸದರಾಗಿ ಕಟೀಲ್ ಮೂರು ಬಾರಿ ಗೆದ್ದುಬೀಗಿದ್ದರು. ತಮ್ಮ 18ನೇ ವಯಸ್ಸಿನಲ್ಲೇ ಆರ್‌ಎಸ್‌ಎಸ್ ಕಾರ್ಯಕರ್ತರಾಗಿ ದಕ್ಷಿಣ ಕನ್ನಡದಲ್ಲಿ ಸದಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಬಿಜೆಪಿಯ ಫೈರ್ ಬ್ರಾಂಡ್ ಎಂದೇ ಕರೆಸಿಕೊಂಡಿದ್ದರು.
2019ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಾಗ ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಬಿ.ಎಲ್.ಸಂತೋಷ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಕಟೀಲ್ 2023ರವರೆಗೂ ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಂದುವರಿದಿದ್ದರು. ಆದರೆ, ನಂತರದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡ ಕಾರಣ ತಮ್ಮ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ರಾಜೀನಾಮೆ ಕೊಟ್ಟಿದ್ದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ನಳಿನ್ ಕುಮಾರ್ ಕಟೀಲ್ ಅವರು ನಾಲ್ಕನೇ ಬಾರಿಯೂ ಟಿಕೆಟ್ ಪಡೆಯಲು ಯತ್ನಿಸಿದ್ದರು. ಆದರೆ, ಯಾವುದೇ ಕಾರಣಕ್ಕೂ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಬೇಡ ಎಂದು ತೀವ್ರ ವಿರೋಧ ವ್ಯಕ್ತವಾಗಿತ್ತು. ಬಿಜೆಪಿ ನಾಯಕರೇ ಕಟೀಲ್ ವಿರುದ್ಧ ರಣತಂತ್ರ ಹೆಣೆದಿದ್ದರು. ಈ ಹಿನ್ನೆಲೆ ನಳಿನ್ ಕುಮಾರ್ ಕಟೀಲ್ ಅವರ ಬದಲಿಗೆ ಬ್ರಿಜೇಶ್ ಚೌಟ ಅವರಿಗೆ ಎಂಪಿ ಟಿಕೆಟ್ ನೀಡಲಾಯಿತು. ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿದಿದ್ದ ಅವರು ಕೊನೆಗೆ ಲೋಕಸಭೆ ಟಿಕೆಟ್‌ನಿಂದ ವಂಚಿತರಾದರು.












Click it and Unblock the Notifications