ಸಿಎಂ ಆಗಿ ಡಿ.ಕೆ.ಶಿವಕುಮಾರ್‌ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್‌; ಅಧಿಕೃತ ದಿನಾಂಕ ಘೋಷಿಸಿದ ಕನಕಪುರದ ಬಂಡೆ

ಬೆಂಗಳೂರು: ರಾಜ್ಯ ರಾಜಕೀಯದ ನಾಯಕತ್ವ ಬದಲಾವಣೆಯ ಭಾರಿ ಕುತೂಹಲಕ್ಕೆ ಸದ್ಯ ತೆರೆ ಬಿದ್ದಿದ್ದು, ಕರ್ನಾಟಕದ ಮುಂದಿನ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಜವಾಬ್ದಾರಿ ವಹಿಸಿಕೊಳ್ಳಲು ಸಮಯ ನಿಗದಿ ಆಗಿದೆ. ಸಿದ್ದರಾಮಯ್ಯ ಅವರ ರಾಜೀನಾಮೆ ನಂತರ ಡಿ.ಕೆ.ಶಿವಕುಮಾರ್‌ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಯಾವಾಗ ಎನ್ನುವುದು ಗೊಂದಲದಲ್ಲಿತ್ತು. ಈಗ ಸ್ವತಃ ಅವರೇ ಈ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ. "

ಜೂನ್ 3ರಂದು ಮುಖ್ಯಮಂತ್ರಿಯಾಗಿ ನೂತನ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ರಾಜೀನಾಮೆಯ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ನಡೆಸಿದ ಸರಣಿ ಸಭೆಗಳ ಬಳಿಕ ಈ ತೀರ್ಮಾನ ಹೊರಬಿದ್ದಿದ್ದು, ರಾಜ್ಯದಲ್ಲಿ 'ಡಿಕೆಶಿ ಯುಗ' ಆರಂಭವಾಗಲು ದಿನಗಣನೆ ಶುರುವಾಗಿದೆ.

DK Shivakumar

ಸಿಎಂ ಪಟ್ಟಕ್ಕೇರಲಿರುವ 'ಟ್ರಬಲ್ ಶೂಟರ್'

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಒಲಿಯಲಿದೆಯೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿದ್ದವು. ಈಗ ಜೂನ್ 3 ರಂದು ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿರುವ ಮೂಲಕ ಹೈಕಮಾಂಡ್ ಡಿಕೆಶಿ ಅವರ ಹೆಗಲಿಗೆ ರಾಜ್ಯದ ಚುಕ್ಕಾಣಿ ನೀಡಲು ಸಂಪೂರ್ಣ ಹಸಿರು ನಿಶಾನೆ ಸಿಕ್ಕಿದೆ. ಸಿದ್ದರಾಮಯ್ಯ ಅವರ ಆಡಳಿತಾವಧಿಯ ನಂತರ ಪಕ್ಷವನ್ನು ಮುನ್ನಡೆಸಲು ಡಿಕೆಶಿ ಅವರ ಸಂಘಟನಾ ಶಕ್ತಿಯೇ ಸೂಕ್ತ ಎಂಬ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ.

ರಾಜಭವನದಲ್ಲಿ ಸರಳ ಕಾರ್ಯಕ್ರಮ

ಮೊದಲ ಬಾರಿಗೆ ಮುಖ್ಯಮಂತ್ರಿ ಗಾದಿಗೇರುತ್ತಿದ್ದರೂ ಸಹ ಡಿ.ಕೆ. ಶಿವಕುಮಾರ್ ಅವರು ಯಾವುದೇ ಆಡಂಬರವಿಲ್ಲದೆ ಅತ್ಯಂತ ಸರಳವಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೊದಲಿಗೆ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಭವ್ಯವಾಗಿ ಸಾರ್ವಜನಿಕ ಸಮಾರಂಭವನ್ನು ನಡೆಸಲು ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ನೀಡಿದ ವಿಶೇಷ ಸೂಚನೆಯ ಮೇರೆಗೆ ಈ ನಿರ್ಧಾರವನ್ನು ಬದಲಾಯಿಸಲಾಗಿದೆ. ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ರಾಜಭವನದ (ಲೋಕಭವನ) ಗ್ಲಾಸ್ ಹೌಸ್‌ನಲ್ಲಿ ಸರಳವಾಗಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಸರ್ಕಾರದ ಹಣ ಪೋಲು ಮಾಡದೆ, ಸರಳತೆಯ ಮೂಲಕವೇ ಆಡಳಿತ ಆರಂಭಿಸಲು ನೂತನ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಜಿ.ಸಿ. ಚಂದ್ರಶೇಖರ್ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರ ರಾಜೀನಾಮೆ ನನಗೂ ಭಾವುಕ ಕ್ಷಣ: ಸಚಿವ ಸತೀಶ್ ಜಾರಕಿಹೊಳಿ ಪೋಸ್ಟ್, ಅಹಿಂದ ಹೋರಾಟದ ದಿನಗಳ ಮೆಲುಕು
ಸಿದ್ದರಾಮಯ್ಯ ಅವರ ರಾಜೀನಾಮೆ ನನಗೂ ಭಾವುಕ ಕ್ಷಣ: ಸಚಿವ ಸತೀಶ್ ಜಾರಕಿಹೊಳಿ ಪೋಸ್ಟ್, ಅಹಿಂದ ಹೋರಾಟದ ದಿನಗಳ ಮೆಲುಕು

ಬದಲಾದ ಮುಹೂರ್ತ

ಡಿ.ಕೆ.ಶಿವಕುಮಾರ್ ಅವರ ಪ್ರಮಾಣವಚನಕ್ಕಾಗಿ ಮೊದಲು ಖ್ಯಾತ ಜ್ಯೋತಿಷಿಗಳಾದ ದ್ವಾರಕನಾಥ್ ಗುರೂಜಿ ಅವರು ಜೂನ್ 5, 6 ಮತ್ತು 7ರ ದಿನಾಂಕಗಳನ್ನು ಸೂಚಿಸಿದ್ದರು ಎನ್ನಲಾಗಿತ್ತು. ಆದರೆ ಹೈಕಮಾಂಡ್ ಸೂಚನೆ ಹಾಗೂ ಬದಲಾದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಜೂನ್ 3ರ ದಿನಾಂಕವನ್ನೇ ಅಂತಿಮಗೊಳಿಸಲಾಗಿದೆ. ಅದರಂತೆ ಜೂನ್ 3ರಂದು ಬುಧವಾರ ಸಂಜೆ 5:15ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜಕೀಯವಾಗಿ ಅತ್ಯಂತ ಬಲಿಷ್ಠ ಹಾಗೂ ಸ್ಥಿರ ಆಡಳಿತಕ್ಕೆ ಪೂರಕ ಎನ್ನಲಾಗುವ 'ವೃಶ್ಚಿಕ ಲಗ್ನ'ದಲ್ಲಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವುದರಿಂದ ಅವರ ಆಪ್ತರು ಹಾಗೂ ಬೆಂಬಲಿಗರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಹಸ್ರಾರು ಜನರ ಸಮ್ಮುಖದಲ್ಲಿ ಅತ್ಯಂತ ಅದ್ಧೂರಿಯಾಗಿ ಪ್ರಮಾಣವಚನ ಸಮಾರಂಭ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಆಡಂಬರಕ್ಕೆ ಬ್ರೇಕ್ ಹಾಕಿದೆ.

ಪ್ರಮಾಣವಚನ ಬೇರೆಡೆ ನಡೆದರೆ ಅಂದು ಬೆಂಗಳೂರಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದರೆ ನಗರದ ಪ್ರಮುಖ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ. ಮೊದಲಿನ ಯೋಜನೆಯಂತೆ ರಾಜ್ಯದ ಮೂಲೆ ಮೂಲೆಗಳಿಂದ ಪಕ್ಷದ ಕಾರ್ಯಕರ್ತರನ್ನು ಬೆಂಗಳೂರಿಗೆ ಕರೆತರಲು ಸಾವಿರಾರು ಬಸ್‌ಗಳ ವ್ಯವಸ್ಥೆ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದರು. ಆದರೆ ಈಗ ಸರಳ ಕಾರ್ಯಕ್ರಮಕ್ಕೆ ಹೈಕಮಾಂಡ್ ಒಲವು ತೋರಿರುವುದರಿಂದ ಈ ಎಲ್ಲ ಭಾರಿ ಸಿದ್ಧತೆಗಳನ್ನು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮ ರದ್ದಾಗಿರುವುದರಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕಾರ್ಯಕರ್ತರಿಗೆ ನಿರಾಶೆಯಾಗಬಾರದು ಎಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ಬಳಿಕ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಖುದ್ದಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರತಿಯೊಂದು ಜಿಲ್ಲಾ ಕೇಂದ್ರಕ್ಕೂ ಭೇಟಿ ನೀಡಿ, ಅಲ್ಲಿನ ಸ್ಥಳೀಯ ಕಾರ್ಯಕರ್ತರನ್ನು ಮುಖಾಮುಖಿ ಭೇಟಿಯಾಗಿ ಚುನಾವಣೆಯ ಯಶಸ್ಸಿಗೆ ಧನ್ಯವಾದಗಳನ್ನು ಅರ್ಪಿಸಲಿದ್ದಾರೆ ಎಂದು ಜಿ.ಸಿ.ಚಂದ್ರಶೇಖರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+