Cauvery Aarti: ಕಾವೇರಿ ಆರತಿ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ: ಡಿ.ಕೆ.ಶಿವಕುಮಾರ್
ಆ ಕಾವೇರಿ ತಾಯಿಗೆ ನಮಸ್ಕಾರ ಮಾಡಲು ಅನೇಕರು ಅಡಚಣೆ ಮಾಡುತ್ತಿದ್ದಾರೆ. ಆದರೆ ಯಾರಿಂದಲೂ ಕಾವೇರಿ ಆರತಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದ ಬೃಂದಾವನ ಉದ್ಯಾನದಲ್ಲಿ ಸತತ 5 ದಿನಗಳ ಕಾಲ ಕಾವೇರಿ ಆರತಿಯಲ್ಲಿ ಪಾಲ್ಗೊಂಡ 55 ಅರ್ಚಕರನ್ನು ಕುಮಾರಪಾರ್ಕ್ ಗಾಂಧಿ ಭವನ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಗೌರವಿಸಿ ಈ ಬಗ್ಗೆ ಮಾತನಾಡಿದ್ದಾರೆ.
ಕಾವೇರಿ ಆರತಿ ಮೂಲಕ ನಾವು ಇಡೀ ನಾಡಿಗೆ ಹೊಸ ಸಂಪ್ರದಾಯವನ್ನು ಕೊಟ್ಟಿದ್ದೇವೆ. ಜೀವನದಿ ಕಾವೇರಿ ತಾಯಿಗೆ ಪೂಜೆ ಮಾಡುವ ಭಾಗ್ಯ ನಮಗೆಲ್ಲರಿಗೂ ಸಿಕ್ಕಿತು. ಈ ಪರಂಪರೆಯನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕು. ಈ ಧಾರ್ಮಿಕ ಕಾರ್ಯಕ್ರಮವನ್ನು ಸಂಪ್ರದಾಯಬದ್ಧವಾಗಿ, ವೈಭವವಾಗಿ ಆಯೋಜಿಸಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಎರಡೂವರೆ ಕೋಟಿ ಜನರಿಗೆ, ತಮಿಳುನಾಡಿಗೆ, ಕೇರಳಗೆ, ಪಾಂಡಿಚೇರಿಗೆ ಕಾವೇರಿ ನೀರು ಹೋಗುತ್ತದೆ. ಕುಡಿಯುವ ನೀರು, ವ್ಯವಸಾಯ ಹಾಗೂ ಕಾರ್ಖಾನೆಗಳಿಗೆ ಅನುಕೂಲವಾಗುತ್ತಿದೆ. ಆ ತಾಯಿಯನ್ನು ನಮಸ್ಕಾರ ಮಾಡಲು ಅನೇಕರು ಅಡಚಣೆ ಮಾಡುತ್ತಿದ್ದಾರೆ. ಆದರೆ ಯಾರಿಂದಲೂ ಕಾವೇರಿ ಆರತಿ ನಿಲ್ಲಿಸಲು ಸಾಧ್ಯವಿಲ್ಲ. ನೀವೆಲ್ಲರೂ ಆಶೀರ್ವಾದ ಮಾಡಲು ಬಂದಿದ್ದೀರಿ. ಇದನ್ನು ನಾವು ಮುಂದುವರೆಸುತ್ತೇವೆ. ಪ್ರಯತ್ನ ವಿಫಲವಾದರೂ, ಪ್ರಾರ್ಥನೆ ವಿಫಲವಾಗಲ್ಲ ಎಂದಿದ್ದಾರೆ.
ಕೆಆರ್‌ಎಸ್‌ನಲ್ಲಿ ಸ್ಟೇಡಿಯಂ
ನಾವೆಲ್ಲರೂ ಸೇರಿಕೊಂಡು ಒಟ್ಟಿಗೆ ಪ್ರಾರ್ಥನೆ ಮಾಡೋಣ. ಕೆಆರ್‌ಎಸ್‌ನಲ್ಲಿ ವ್ಯವಸ್ಥಿತವಾಗಿ ಒಂದು ಸ್ಟೇಡಿಯಂ ಮಾಡೋಣ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಎಲ್ಲ ಅರ್ಚಕರಿಂದ ಪೂಜೆ ಮಾಡಲಾಗುತ್ತದೆ. ಇಲ್ಲಿಗೆ ಭಕ್ತರು ಬರಬೇಕು, ಜನರಿಗೆ ಉದ್ಯೋಗ ಸಿಗಬೇಕು. ಬೆಳಿಗ್ಗೆ ಕೂಡ ಜನರು ಕಾವೇರಿಗೆ ಬಂದು ಪೂಜೆ ಮಾಡಬೇಕು. ಕಾವೇರಿ ಆರತಿಯಿಂದ ನಮ್ಮ ರಾಜ್ಯದ ಎಲ್ಲ ವೈದಿಕರಿಗೂ ಅನುಕೂಲವಾಗಬೇಕು ಎಂದು ಆಶಿಸಿದ್ದಾರೆ.
ಪಾಂಡಿತ್ಯದಲ್ಲಿ ಕಾಶಿಗಿಂತ ಕಡಿಮೆ ಇಲ್ಲ
ಕಾವೇರಿ ಆರತಿಯನ್ನು ಉತ್ತಮವಾಗಿ ಮಾಡಿದ್ದೀರಿ. ಇನ್ನು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ನಿರ್ಧರಿಸಿದ್ದೇವೆ. ಇಂತಹ ಭಕ್ತಿಪ್ರಧಾನವಾದ ಕಾರ್ಯಕ್ರಮವು ಜನರಿಗೆ ಆಕರ್ಷಣೀಯವಾಗಿ ತಲುಪಿಸಬೇಕು. ಕಾಶಿಗಿಂತ ನಮ್ಮಲ್ಲಿ ಪಾಂಡಿತ್ಯ ಏನೂ ಕಡಿಮೆ ಇಲ್ಲ. ಶ್ರೀರಂಗಪಟ್ಟಣ, ಮೈಸೂರು, ಬೆಂಗಳೂರಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವಿದ್ಯೆ ಕಲಿತುಕೊಂಡು ನೀವು ಬಂದಿದ್ದೀರಿ. ಇದನ್ನು ನಾವೆಲ್ಲರೂ ಉಳಿಸಿಕೊಂಡು ಹೋಗೋಣ ಎಂದು ಹೇಳಿದ್ದಾರೆ.
ಕಾವೇರಿ ತಾಯಿ ಎಲ್ಲರಿಗೂ ಒಳ್ಳೆಯದು ಮಾಡಲಿ. ಕಾವೇರಿ ಆರತಿಯಲ್ಲಿ ಏನೆಲ್ಲ ಮಾಡಬಹುದು? ಎನ್ನುವುದರ ಬಗ್ಗೆಯೂ ಸಲಹೆ ಸೂಚನೆಗಳನ್ನು ನೀಡಿ. ಅರ್ಚಕರ ಆಶೀರ್ವಾದ ಸದಾ ನಮ್ಮ ಸರ್ಕಾರದ ಮೇಲೆ ಇರಲಿ. ಒಳ್ಳೆಯ ಮಳೆ, ಬೆಳೆ ಬಂದು ರಾಜ್ಯ ಸುಭೀಕ್ಷೆಯಿಂದ ಇರಲಿ ಎಂದು ಎಲ್ಲ ಶ್ರೀಗಳು ಆಶೀರ್ವಾದ ಮಾಡಿದ್ದಾರೆ. ಕಾವೇರಿ ಆರತಿ ಪ್ರಾರಂಭವಾಗಿದೆ. ಕಾವೇರಿ ಆರತಿ ಜನರ ಸಂಪತ್ತು ಆಗಬೇಕು, ಪ್ರಾರ್ಥನೆಯಾಗಬೇಕು, ಭಾವನೆಯಾಗಬೇಕು ಎಂಬುದು ನನ್ನ ಬಯಕೆ ಎಂದಿದ್ದಾರೆ.












Click it and Unblock the Notifications