ಕೈ ನಾಯಕರಿಗೆ ಗುಡ್ ನ್ಯೂಸ್; ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ: ಮಹತ್ವ ಹೇಳಿಕೆ ನೀಡಿದ ಡಿ ಕೆ ಶಿವಕುಮಾರ್
ಬೆಂಗಳೂರು, ಜೂನ್ 03: ಕಾಂಗ್ರೆಸ್ ನಲ್ಲಿ ಅಸಮಾಧಾನಗೊಂಡ ಶಾಸಕರು ಹಾಗೂ ಕಾರ್ಯಕರ್ತರನ್ನ ಸಮಾಧಾನಗೊಳಿಸಲು ನಿಗಮ ಮಂಡಳಿ ಸ್ಥಾನ ನೀಡಲು ಹಾಗೂ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಲು ಸಿಎಂ ಸಿದ್ದರಾಮಯ್ಯ ಹಾಗೂ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮುಂದಾಗಿದ್ದಾರೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳ ಜೊತೆಗೆ ಪ್ರತಿಕ್ರಿಯಿಸಿದ್ದಾರೆ.
ದೆಹಲಿ ಪ್ರವಾಸದ ಕುರಿತು ಮಾಧ್ಯಮಗಳ ಜೊತೆಗೆ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಕೇಂದ್ರ ಸಚಿವಾಲಯಗಳು ಅಲ್ಲಿರುವ ಕಾರಣ ದೆಹಲಿಗೆ ತೆರಳಬೇಕಾಗುತ್ತದೆ. ಸಧ್ಯಕ್ಕೆ ನನಗೆ ದೆಹಲಿಯಲ್ಲಿ ಯಾವುದೇ ಕಾರ್ಯಕ್ರಮ ಇಲ್ಲ. ಸಿಎಂ ಅವರ ಕಾರ್ಯಕ್ರಮ ಇರಬಹುದು. ಹೈಕಮಾಂಡ್ ನನಗೆ ಭೇಟಿ ಮಾಡಲು ತಿಳಿಸಿದರೆ ನಾನು ಹೋಗುತ್ತೇನೆ. ಆದರೆ ನಾನು ಕೆಲವು ಕೇಂದ್ರ ಸಚಿವರನ್ನು ಭೇಟಿ ಮಾಡಬೇಕಿದ್ದು, ಅವರ ಸಮಯ ನಿಗದಿ ಮಾಡಿದ ನಂತರ ನಾನು ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.

ಸರ್ಕಾರಕ್ಕೆ 2 ವರ್ಷ ಪೂರೈಸಿದ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, ಈ ವಿಚಾರ ಏನಿದ್ದರೂ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳನ್ನೇ ಕೇಳಬೇಕು ಎಂದರು. ನಿಗಮ ಮಂಡಳಿ ನೇಮಕವನ್ನ ಶೀಘ್ರದಲ್ಲೇ ಮಾಡುತ್ತೇವೆ. ಈಗಾಗಲೇ ಗ್ಯಾರಂಟಿ ಸಮಿತಿಯಲ್ಲಿ 4 ಸಾವಿರ ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. 8 ಸಾವಿರ ಜನ ಕಾರ್ಯಕರ್ತರನ್ನು ಬೇರೆ ಬೇರೆ ಸಮಿತಿ ಸದಸ್ಯರನ್ನಾಗಿ ಮಾಡಿದ್ದೇವೆ. ರಾಜ್ಯ ಮಟ್ಟದಲ್ಲಿ 500-600 ಜನಕ್ಕೆ ಮಾಡಬೇಕಿದೆ. ಈ ಪಟ್ಟಿ ಸಿದ್ಧವಾಗಿದ್ದು, ಸ್ಥಳೀಯ ನಾಯಕರ ಜತೆ ಚರ್ಚಿಸಿ ಪ್ರಕಟಿಸುತ್ತೇವೆ ಎಂದ ಅವರು, ಪರಿಷತ್ ಸದಸ್ಯತ್ವ ನೇಮಕಾತಿಯನ್ನ ಹೈಕಮಾಂಡ್ ಮಾಡಲಿದೆ ಎಂದು ತಿಳಿಸಿದರು.
ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಪತ್ರದ ಬಗ್ಗೆ ಕೇಳಿದಾಗ, ನನಗೆ ಇನ್ನೂ ಆ ಪತ್ರ ಬಂದಿಲ್ಲ. ಬಂದ ನಂತರ ಪ್ರತಿಕ್ರಿಯೆ ನೀಡುತ್ತೇನೆ. ಬಿಜೆಪಿಯವರು ಯಾವ ರೀತಿ ಆಯ್ಕೆ ಮಾಡಿದ್ದರು ಎಂಬುದು ನನಗೆ ಗೊತ್ತಿದೆ. ಇದನ್ನು ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.
ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳದ ಬಗ್ಗೆ ಮಹಾರಾಷ್ಟ್ರ ಸಿಎಂ ಪತ್ರಕ್ಕೆ, ನಮ್ಮ ಮುಖ್ಯಮಂತ್ರಿಗಳು ಪತ್ರ ಬರೆದ ನಂತರ, ಈ ಬಗ್ಗೆ ಚರ್ಚಿಸಲು ಪ್ರಧಾನಮಂತ್ರಿ ಹಾಗೂ ಕೇಂದ್ರ ಜಲಶಕ್ತಿ ಸಚಿವರ ಭೇಟಿಗೆ ಸಮಯ ಕೇಳುತ್ತೇವೆ. ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಪತ್ರಕ್ಕೆ ನಮ್ಮ ಮುಖ್ಯಮಂತ್ರಿಗಳು ಎರಡು ದಿನಗಳಲ್ಲಿ ಪತ್ರ ಬರೆಯಲಿದ್ದಾರೆ. ನಾನು ನನ್ನ ಅಭಿಪ್ರಾಯವನ್ನು ಈಗಾಗಲೇ ಕಳುಹಿಸಿಕೊಟ್ಟಿದ್ದೇನೆ. ಸಿಎಂ ಬರೆಯುವ ಪತ್ರವನ್ನು ಎಲ್ಲಾ ಸಂಸದರಿಗೆ ಕಳುಹಿಸಿಕೊಡುತ್ತೇನೆ. ನಂತರ ಈ ವಿಚಾರವಾಗಿ ಚರ್ಚಿಸಲು ಪ್ರಧಾನಮಂತ್ರಿ ಹಾಗೂ ಕೇಂದ್ರ ಜಲಶಕ್ತಿ ಸಚಿವರ ಭೇಟಿಗೆ ದಿನಾಂಕ ಕೇಳುತ್ತೇವೆ. ಈ ವಿಚಾರವಾಗಿ ನಾವೆಲ್ಲಾ ಸೇರಿ ಒತ್ತಾಯ ಮಾಡಲೇಬೇಕು ಎಂದು ಅಭಿಪ್ರಾಯ ಪಟ್ಟರು.
ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರು ಬುದ್ಧಿವಂತರಿದ್ದಾರೆ. ಈ ಹಿಂದೆ ಅವರೇ ಈ ಯೋಜನೆಗೆ ಬೆಂಬಲ ನೀಡಿದ್ದರು. ಈಗ ಅವರು ಯಾಕೆ ಈ ಪತ್ರ ಬರೆದರು ಎಂದು ಅಚ್ಚರಿಯಾಗಿದೆ. ಮಳೆ ಹೆಚ್ಚಾದಾಗ ಪ್ರವಾಹ ಬರುತ್ತದೆ. ಇದನ್ನು ನಿಭಾಯಿಸುವುದು ಅವರ ಕರ್ತವ್ಯ ಎಂದು ಹೇಳಿದರು.












Click it and Unblock the Notifications