ಆರೋಗ್ಯ ಇಲಾಖೆ: 'ಮಿಷನ್ ಇಂದ್ರಧನುಷ್ 5.0 ಅಭಿಯಾನ'ಕ್ಕೆ ಡಿಕೆ ಶಿವಕುಮಾರ್ ಚಾಲನೆ
ಬೆಂಗಳೂರು, ಆಗಸ್ಟ್ 07: ರಾಜ್ಯದಲ್ಲಿ ಐದು ವರ್ಷದ ಒಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಯಾವುದೇ ಲಸಿಕೆ ಇದ್ದರೂ ಅದನ್ನು ಹಾಕಲು ಹಾಗೂ ಉತ್ತೇಜಿಸಲು ಸರ್ಕಾರ ಕೈಗೊಂಡ ಮಿಷನ್ ಇಂದ್ರಧನುಷ್ 5.0 ಅಭಿಯಾನಕ್ಕೆ ಸೋಮವಾರ ಚಾಲನೆ ದೊರೆಯಿತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ಬೆಂಗಳೂರಿನ ಶಾಂತಿನಗರದ ಆಸ್ಟಿನ್ ಟೌನ್ ಹೆರಿಗೆ ಆಸ್ಪತ್ರೆಯಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನಕ್ಕೆ ಗ್ರೀನ್ ಸಿಗ್ನಲ್ ನೀಡಿದರು.

ಈ ಮೂಲಕ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಸಿಬ್ಬಂದಿ ಕೊರೊನಾ, ಇನ್ನಿತರ ಲಸಿಕೆ ತಪ್ಪಿಸಿಕೊಂಡ ಐದು ವರ್ಷದ ಒಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ನೀಡಲಿದ್ದಾರೆ. ಈ ಕುರಿತು ಅಭಿಯಾನದಡಿ ಜಾಗೃತಿ ಮೂಡಿಸಲಿದ್ದಾರೆ.
ಮಿಷನ್ ಇಂದ್ರಧನುಷ್ 5.0 ಅಭಿಯಾನ ಮಾಹಿತಿ
ಈ ಪರಿಣಾಮಕಾರಿ ಮಿಷನ್ ಇಂದ್ರಧನುಷ್ (IMI) 5.0, ಲಸಿಕ ಕ್ಯಾಚ್- ಅಪ್, ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂನಲ್ಲಿ ಯಾವುದೇ ಲಸಿಕೆ ಡೋಸ್ ಗಳನ್ನು ತಪ್ಪಿಸಿಕೊಂಡಿರುವ 0 ಮತ್ತು 5 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ತಲುಪಿಸುವ ಕಾರ್ಯಕ್ರಮ ಇದಾಗಿದೆ.

ವಿಶೇಷವಾಗಿ ಕೊರೊನಾ ವೈರಸ್ (COVID-19), ಅನಾರೋಗ್ಯ ಮತ್ತು ವಲಸೆಯಂತಹ ವಿವಿಧ ಕಾರಣಗಳಿಂದ ವಂಚಿತರಾಗಿರುವ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಲಸಿಕಾಕರಣ ಮಾಡಲಾಗುತ್ತದೆ ಎಂದು ಬಿಬಿಎಂಪಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಅಭಿಯಾನವು ವಿವಿಧ ರೋಗಗಳನ್ನು ಬರದಂತೆ ತಡೆಯಲು ಲಸಿಕೆ ಅರ್ಹರಿಗೆ ನೀಡುತ್ತದೆ. ನಾಯಿಕೆಮ್ಮು, ಟೆಟಸನ್, ಡಿಫ್ತೀರಯಾ, ಪೊಲೀಯೋ, ಕ್ಷಯ, ದಡಾರ, ಹೆಪಟೈಟಸ್ ಬಿ ವೈರಸ್, ನ್ಯುನೋನಿಯಾ, ಮೆನಿಂಜೈಟಿಸ್ ಗೆ ಕಾರಣವಾಗುವ ಹಿಮೋಫಿಲಸ್ ಇನ್ಫ್ಲುಯೆಂಜಾ ಟೈಪ್ ಬಿ ತಡೆಗೆ ಎಲ್ಲ ಜಿಲ್ಲೆಗಳಲ್ಲಿ ಲಸಿಕೆ ಹಾಕಿಸದ ಮಕ್ಕಳಿಗೆ ಆರೋಗ್ಯ ಸಿಬ್ಬಂದಿ ಲಸಿಕೆ ನೀಡಲಿದ್ದಾರೆ. ಇದರಿಂದ ಸಂಭವಿನೀಯ ಅನಾರೋಗ್ಯ ಸ್ಥಿತಿ ನಿಯಂತ್ರಿಸಲಾಗುವುದು ಎಂದು ಪಾಲಿಕೆ ಹೇಳಿದೆ.
ಆಗಸ್ಟ್- ಅಕ್ಟೋಬರ್‌ವರೆಗೆ ಲಸಿಕಾಕರಣ
ಅಭಿಯಾನದಡಿ ಮೊದಲ ಸುತ್ತಿನ ಲಸಿಕೆಯು ಆಗಸ್ಟ್ 7ರಿಂದ 12ರವರೆಗೆ ನಡೆಯಲಿದೆ. ಎರಡನೇ ಸುತ್ತು ಸೆಪ್ಟಂಬರ್ 11 ರಿಂದ 16ರವರೆಗೆ ಹಾಗೂ ಮೂರನೇ ಸುತ್ತಿನ ಲಸಿಕಾಕರಣವು ಅಕ್ಟೋಬರ್ 09ರಿಂದ 14ರವರೆಗೆ ನಡೆಯಲಿದೆ. ಲಸಿಕೆ ವಿವರವನ್ನು U- WIN ಪೋರ್ಟ್‌ಲ್ ನಲ್ಲಿ ನೀಡಲಾಗಿದೆ.
ಈ ಲಸಿಕಾಕರಣ ಕಾರ್ಯಕ್ರಮದಲ್ಲಿ ಆರು ದಿನ ಬಿಬಿಎಂಪಿ ಅಂಗನವಾಡಿ, ಆರೋಗ್ಯ ಸಂಸ್ಥೆ, ಸಮುದಾಯಮಟ್ಟದಲ್ಲಿ ಮತ್ತು 114 ಮೊಬೈಲ್ ಟೀಂ ಒಳಗೊಂಡು 1067 ಲಸಿಕಾ ಶಿಬಿರ ಆಯೋಜಿಸಿ ಅರ್ಹ ಗರ್ಭಿಣಿಯರು ಮತ್ತು 0-5 ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್, ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ಕೆ.ವಿ. ತ್ರಿಲೋಕ್ ಚಂದ್ರ, ಜಂಟಿ ಆಯುಕ್ತರು (ಪೂರ್ವ) ಪಲ್ಲವಿ, ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications