ಇದು ಫೇಕ್ ಸರ್ಕಾರ; ಡಿಕೆಶಿ ಸೂಪರ್ ಸಿಎಂ! ಕಾಂಗ್ರೆಸ್ ಸರ್ಕಾರದಲ್ಲಿ 65% ಕಮಿಷನ್: ಬಸವರಾಜ ಬೊಮ್ಮಾಯಿ
ಬೆಂಗಳೂರು, ಆಗಸ್ಟ್ 10: ರಾಜ್ಯದಲ್ಲಿ ಡಿ. ಕೆ ಶಿವಕುಮಾರ್ ಸೂಪರ್ ಸಿಎಂ ಆಗಿದ್ದಾರೆ. ಬಿಬಿಎಂಪಿ ಗುತ್ತಿಗೆದಾರರ ಸಂಘದವರು ಕಾಂಗ್ರೆಸ್ ಸರ್ಕಾರದಲ್ಲಿ 65% ಕಮಿಷನ್ ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಕುರಿತು ಆರ್ ಟಿ ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಭ್ರಷ್ಟಾಚಾರ ಸಹಿಸದೇ ಇದ್ದರೇ ತಕ್ಷಣ ಮಧ್ಯ ಪ್ರವೇಶ ಮಾಡಿ, ಗುತ್ತಿಗೆದಾರರ ಬಿಲ್ ಬಿಡುಗಡೆಗೆ ಸೂಚಿಸಬೇಕು. ಇಲ್ಲದಿದ್ದರೆ ಕರ್ನಾಟಕ ಕಾಂಗ್ರೆಸ್ ನ ಎಟಿಎಂ ಎನ್ನುವುದು ಸಾಬೀತಾದಂತೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಇಂದು ನನ್ನನ್ನು ಭೇಟಿ ಮಾಡಿದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಮನವಿ ಸ್ವೀಕರಿಸಿದ್ದೇನೆ. ಬಿಬಿಎಂಪಿಯಲ್ಲಿ ಕಾಮಗಾರಿ ಮಾಡಿರುವ ಗುತ್ತಿಗೆದಾರರು ಭೇಟಿ ಮಾಡಿದ್ದಾರೆ. ಅವರು ಮಾಡಿರುವ ಕೆಲಸಕ್ಕೆ ಹಣ ಬಿಡುಗಡೆ ಮಾಡಿಸಲು ಸರ್ಕಾರವನ್ನು ಆಗ್ರಹಿಸಲು ಮನವಿ ಮಾಡಿದ್ದಾರೆ. ನಾನು ಸಿಎಂ ಇದ್ದಾಗ ಬಿಲ್ ಪಾವತಿಗೆ ಆನ್ಲೈನ್ ಮಾಡಿ ಸ್ಟ್ರೀಮ್ ಲೈನ್ ಮಾಡಿದ್ದೆ. ಹಿರಿತನದ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಇದರಿಂದ ಅವರ ಬಾಕಿ ಕೂಡ ಕಡಿಮೆ ಉಳಿದಿತ್ತು ಎಂದರು.
ಗುತ್ತಿಗೆದಾರರು ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿದ ಕೆಲಸಕ್ಕೆ ಈಗ ಲಂಚ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಎಲ್ಲ ಇಲಾಖೆಗಳಲ್ಲಿ ಹಿಂದಿನ ಸರ್ಕಾರದ ಅವಧಿಯ ಕಾಮಗಾರಿಗಳಿಗೆ ಲಂಚ ಕೇಳುತ್ತಿರುವುದು ಸರ್ವವಿಧಿತವಾಗಿದೆ. ಮುಖ್ಯಮಂತ್ರಿಗಳು ಇದರ ಬಗ್ಗೆ ಮೌನ ವಹಿಸಿದ್ದಾರೆ. ಇದು ಅವರ ಸಮ್ಮತಿ ಅಂತ ಸೂಚಿಸುತ್ತದೆ ಎಂದು ಆರೋಪಿಸಿದರು.
ಸಿಎಂ ವರ್ಗಾವಣೆಗೆ ಹಣ ಪಡೆದಿಲ್ಲ ಅಂತ ಹೇಳಿದ್ದಾರೆ. ಆದರೆ, ಅವರ ಕಚೇರಿಯಿಂದ ವರ್ಗಾವಣೆ ಆಗಿರುವ ಆದೇಶಗಳು ಯಾಕೆ ಬದಲಾವಣೆ ಆಗುತ್ತಿವೆ? ನಮ್ಮ ಅವಧಿಯಲ್ಲಿ ಕಾಮಗಾರಿಗಳಲ್ಲಿ ಪಾರದರ್ಶಕತೆ ತರಲು 3 ಜನರ ಸಮಿತಿ ರಚನೆ ಮಾಡಿದ್ದೆವು. ಆ ಆದೇಶಗಳನ್ನು ಈಗ ಪಾಲನೆ ಮಾಡುತ್ತಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಹೈಕಮಾಂಡ್ ಭ್ರಷ್ಟಾಚಾರ ಸಹಿಸುವುದಿಲ್ಲ ಅಂತ ಹೇಳಿದ್ದಾರೆ. ಆದರೆ, ಗುತ್ತಿಗೆದಾರರು ರಾಹುಲ್ ಗಾಂಧಿಗೆ ಟ್ವೀಟ್ ಮಾಡಿ, ನಿಮ್ಮ ಸರ್ಕಾರ 65% ಕಮಿಷನ್ ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯವರು ಭ್ರಷ್ಟಾಚಾರದ ಬಗ್ಗೆ ಝಿರೋ ಟಾಲೆರೆನ್ಸ್ ಇದ್ದರೆ, ತಕ್ಷಣ ಮಧ್ಯ ಪ್ರವೇಶ ಮಾಡಿ, 24 ಗಂಟೆಯಲ್ಲಿ ಗುತ್ತಿಗೆದಾರರ ಬಾಕಿ ಹಣ ಕೊಡಿಸಲಿ ಎಂದು ಆಗ್ರಹಿಸಿದರು.
ಯಾರು ಕಳಪೆ ಕಾಮಗಾರಿ ಮಾಡಿದ್ದಾರೆ ಅದರ ಬಗ್ಗೆ ತನಿಖೆ ನಡೆಸಲಿ, ಪ್ರಾಮಾಣಿಕವಾಗಿ ಕೆಲಸ ಮಾಡಿದವರ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಅಂತ ಕರಿಯೋದು ಸಾಬೀತಾದಂತೆ ಆಗುತ್ತದೆ. ರಾಹುಲ್ ಗಾಂಧಿ ಮಧ್ಯ ಪ್ರವೇಶ ಮಾಡಿ 24 ಗಂಟೆಯಲ್ಲಿ ಸಮಸ್ಯೆ ಬಗೆ ಹರಿಸಬೇಕು ಎಂದು ಆಗ್ರಹಿಸಿದರು.
ಗುತ್ತಿಗೆದಾರರು ಕೆಲಸ ನಿಲ್ಲಿಸಿದರೆ ಬ್ರ್ಯಾಂಡ್ ಬೆಂಗಳೂರು ಸ್ಥಗಿತ ಆಗುತ್ತದೆ. ಕಮಿಷನ್ ಎಷ್ಟು ಪಡೆಯಬೇಕು ಎನ್ನುವುದು ಸ್ಯಾಂಗ್ರಿಲಾ ಹೊಟೆಲ್ ನಲ್ಲಿ ಮಾತುಕತೆ ನಡೆಯುತ್ತಿದೆಯಂತೆ ಎಷ್ಟಕ್ಕೆ ಆಗುತ್ತದೆಯೋ ನೊಡೊಣ ಲಂಚ ಪಡೆಯುವುದು ಕೊಡುವುದು ಎರಡೂ ಅಪರಾಧ. ಗುತ್ತಿಗೆದಾರರು ಎಷ್ಟು ಪರ್ಸೆಂಟೇಜಿಗೆ ಒಪ್ಪುತ್ತಾರೊ, ಭ್ರಷ್ಟಾಚಾರದ ಭಾಗವಾಗುತ್ತಾರೊ, ಇಲ್ಲವೋ ನೋಡೊಣ ಎಂದು ಹೇಳಿದರು.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೆಂಪಣ್ಣ ದೊಡ್ಡವರು, ಅವರೇ ಆರೋಪ ಮಾಡಿದ್ದರಲ್ಲಾ ಎಂದರು. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಇದರ ಹಿಂದೆ ಯಾರಿದ್ದಾರೆ ಅಂತ ಗೊತ್ತು ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರ ಅವಧಿಯಲ್ಲಿ 40% ಆರೋಪದ ಡ್ರಾಪ್ಟ್ ಎಲ್ಲಿ ಆಗಿತ್ತು ಅಂತ ನಮಗೆ ಗೊತ್ತಿಲ್ವಾ ಅದರ ಅನುಭವದ ಮೇಲೆ ಅವರು ಈಗ ಆರೊಪ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಡಿ. ಕೆ ಶಿವಕುಮಾರ್ ಸೂಪರ್ ಸಿಎಂ ಆಗಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ಟ್ರಾನ್ಸಫರ್ ತನ್ನ ಗಮನಕ್ಕೆ ತಂದು ಮಾಡಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಹೀಗಾಗಿ ಡಿ. ಕೆ.ಶಿವಕುಮಾರ್ ಸೂಪರ್ ಸಿಎಂ ಎಂದರು.ರಾಜ್ಯದಲ್ಲಿ ಸಿಎಂ ಮತ್ತು ಸೂಪರ್ ಸಿಎಂ ಇಬ್ಬರು ಇದ್ದಾರೆ. ಸರ್ಕಾರದ ವಿರುದ್ದ ಬರುವ ಎಲ್ಲ ಪತ್ರಗಳೂ ಫೇಕ್ ಎಂದು ಸರ್ಕಾರ ಅಲ್ಲಗಳೆಯುತ್ತಿದೆ. ಅವರದೇ ಪಕ್ಷದ ಶಾಸಕರು ಬರೆದ ಪತ್ರವನ್ನೂ ಫೇಕ್ ಎನ್ನುತ್ತಾರೆ. ಈ ಸರ್ಕಾರವೇ ಫೇಕ್ ಎಂದು ಆರೋಪಿಸಿದರು.












Click it and Unblock the Notifications