ಹಳೇ ಸ್ನೇಹಿತರನ್ನು ಕರೆದ ಡಿಕೆಶಿ; ವ್ಯಂಗ್ಯವಾಡಿದ ಸಚಿವ ಆರ್. ಅಶೋಕ
ಬೆಂಗಳೂರು, ನವೆಂಬರ್ 3; "ಕಾಂಗ್ರೆಸ್ ದಿವಾಳಿಯಾಗಿದೆ ಹೀಗಾಗಿ ಹತಾಶೆರಾಗಿ ಸಂತೆಯಲ್ಲಿ ನಿಂತು ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಬನ್ನಿ ಎಂದು ಕರೆಯುತ್ತಿದ್ದಾರೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತಿಗೆ ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದರು.
ಗುರುವಾರ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "125 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷಕ್ಕೆ ಈ ಪರಿಸ್ಥಿತಿ ಬರಬಾರದಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಗತಿ ಇಲ್ಲ, ಅವರ ಹೇಳಿಕೆ ನೋಡಿದರೆ ಪಕ್ಷದಲ್ಲಿ ಅಭ್ಯರ್ಥಿಗಳೇ ಇಲ್ಲ ಅನಿಸುತ್ತದೆ. ಹಾಗಾಗಿ ಈ ರೀತಿ ಪಕ್ಷ ತೊರೆದವರನ್ನು ಕರೆಯುತ್ತಿದ್ದಾರೆ" ಎಂದರು.
ಬಿಜೆಪಿಯಲ್ಲಿರೋರು ಹೋಗಲು ಮನಸ್ಸು ಮಾಡ್ತಿದ್ದಾರೆ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ಆರ್. ಅಶೋಕ, "ನಮ್ಮಲ್ಲಿರೋರು ಮನಸ್ಸು ಮಾಡಿದ್ದಾರೆ ಅನ್ನೋದು ನಿಜ. ಇನ್ನೆಂದೂ ಕಾಂಗ್ರೆಸ್ ಹೋಗಬಾರದು ಅಂತ ಮನಸ್ಸ ಮಾಡಿದ್ದಾರೆ. ಇನ್ನೇನಿದ್ದರೂ ಮುಂದಿನ ದಿನಗಳಲ್ಲಿ ಬಿಜೆಪಿಯ ಪರ್ವ ಆರಂಭವಾಗಲಿದೆ" ಎಂದರು.

"ಕಾಂಗ್ರೆಸ್‌ನಲ್ಲಿ ಎಲ್ಲರೂ ಖಾಲಿಯಾಗಿ ಬಿಜೆಪಿ ಕಡೆ ಬರುತ್ತಾರೆ. ಈಗ ತುಮಕೂರಿಂದ ಮುದ್ದಹನುಮೇಗೌಡರು ಬಂದಿದ್ದಾರೆ. ಇನ್ನೂ ಸ್ವಲ್ಪ ದಿನಗಳಲ್ಲಿ ಮಂಡ್ಯ, ಮೈಸೂರು ಭಾಗದಿಂದಲೂ ಬರುತ್ತಾರೆ. ಮಂಡ್ಯದಲ್ಲಿ ಕನಿಷ್ಠ 4 ಸ್ಥಾನಗಳನ್ನು ಗೆಲ್ಲಬೇಕು. ಈ ನಿಟ್ಟಿನಲ್ಲಿ ಅನ್ಯಪಕ್ಷದವರು ಬಿಜೆಪಿಗೆ ಬರಲಿದ್ದಾರೆ" ಎಂದು ಅಶೋಕ ಹೇಳಿದರು.
"ಮೈತ್ರಿ ಸರ್ಕಾರದ ವೇಳೆ ಬಂದ 17 ಜನರು ಕೂಡ ಬಿಜೆಪಿಯಲ್ಲಿ ಇರುತ್ತಾರೆ. ಅವರು ಬಿಜೆಪಿಯಲ್ಲೇ ಇರಬೇಕೆಂದು ಮನಸ್ಸು ಮಾಡಿದ್ದಾರೆ. ಅವರು ಯಾರೂ ಕೂಡ ಬೇರೆ ಪಕ್ಷಕ್ಕೆ ಹೋಗಲ್ಲ, 17 ಜನರು ನಮ್ಮೊಂದಿಗೆ ವಿಲೀನ ಆಗಿದ್ದಾರೆ. ಕಾಂಗ್ರೆಸ್‌ಗೆ 15 ಜನರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲ. ಅಧಿಕಾರ ಇದ್ದಾಗಲೇ ಉಳಿಸಿಕೊಳ್ಳಲು ಅವರಿಗೆ ಆಗಲಿಲ್ಲ. ಅಧಿಕಾರ ಹೋದಮೇಲೆ ಸಾಧ್ಯವಾ?" ಎಂದು ಅಶೋಕ ಪ್ರಶ್ನಿಸಿದರು.
ಕಾಂಗ್ರೆಸ್‌ಗೆ ಹೋಗುವ ಪ್ರಮೇಯ ಇಲ್ಲ: "ನಾವು ಬಿಜೆಪಿಯಲ್ಲಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡುತ್ತಿದ್ದೇವೆ. ಮತ್ತೆ ಕಾಂಗ್ರೆಸ್‌ಗೆ ಹೋಗುವ ಪ್ರಮೇಯ ಇಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಹ್ವಾನವನ್ನು ಸಚಿವ ಎಸ್. ಟಿ. ಸೋಮಶೇಖರ್ ತಿರಸ್ಕರಿಸಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, "ಯಾರೇ ಆಹ್ವಾನ ಮಾಡಿದರೂ ಕಾಂಗ್ರೆಸ್‌ಗೆ ಹೋಗಲ್ಲ, ನಾವು ಪಕ್ಷ ಬಿಟ್ಟು ಹೋದಾಗ ಆಕಾಶ ಕೆಳಗೆ ಬಂದರೂ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಅಂತ ಅವರೇ ಹೇಳಿದ್ದಾರೆ. ಈಗ ಸಹಕಾರ ಸಚಿವನಾಗಿ, ಶಾಸಕನಾಗಿ ಇಲ್ಲಿ ಕೆಲಸ ಮಾಡುತ್ತಿದ್ದೇನೆ, ನಾವು ಯಾವ ಕಾರಣಕ್ಕೂ ಮತ್ತೆ ಕಾಂಗ್ರೆಸ್‌ಗೆ ಹೋಗಲ್ಲ" ಎಂದರು.
ಬಿಜೆಪಿ ಸೇರ್ಪಡೆಯಾದ ಮಾಜಿ ಸಂಸದ ಮುದ್ದಹನುಮೇಗೌಡ ಮಾತನಾಡಿ, "ಡಿ. ಕೆ. ಶಿವಕುಮಾರ್ ಬಿಜೆಪಿಗೆ ಬಂದವರಿಗೆ ಆಹ್ವಾನ ಕೊಟ್ಟಿದ್ದಾರೆ. ವಲಸಿಗರು ಕಾಂಗ್ರೆಸ್‌ನಲ್ಲಿದ್ದಾಗ ಬಹಳ ನೋವು ಅನುಭವಿಸಿದ್ದರು, ಹಾಗಾಗಿ ಅವರು ಬಿಜೆಪಿ ಸೇರಿದ್ದಾರೆ. ಬಿಜೆಪಿಗೆ ಬಂದವರು ಎಲ್ಲರೂ ಆರಾಮಾಗಿದ್ದಾರೆ" ಎಂದು ಹೇಳಿದರು.












Click it and Unblock the Notifications