RCB ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಡಿ ಕೆ ಶಿವಕುಮಾರ್
ಬೆಳಗಾವಿ, ಡಿಸೆಂಬರ್ 12: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವರ್ಷ ಐಪಿಎಲ್ ಟ್ರೋಫಿ ಗೆದ್ದು ಬೀಗಿದ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಜನ ಅಭಿಮಾನಿಗಳು ಸಾವನ್ನಪ್ಪಿದ್ದರು. ಹಾಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಕ್ರಿಕೆಟ್ ಪಂದ್ಯ ನಡೆಸದೇ ಇರಲು ನಿರ್ಧರಿಸಲಾಗಿತ್ತು. ಇದೀಗ ಆರ್‌ಸಿಬಿ ಅಭಿಮಾನಿಗಳಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗುಡ್ ನ್ಯೂಸ್ ನೀಡಿದ್ದಾರೆ.
ಈ ಕುರಿತು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತು ಚರ್ಚೆಯಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ರ ಐಪಿಎಲ್ ಪಂದ್ಯಾರ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ. ಗೃಹ ಇಲಾಖೆಗೆ ಜವಾಬ್ದಾರಿ ನೀಡಿ ಮೈಕೆಲ್ ಡಿ ಕುನ್ಹಾ ವರದಿಯ ಶಿಫಾರಸುಗಳನ್ನ ಅಳವಡಿಸಿಕೊಂಡು ಪಂದ್ಯಕ್ಕೆ ಅವಕಾಶ ಮಾಡಿಕೊಡಲು ಬೆಳಗಾವಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಲಾಗಿದೆ. ಬೆಂಗಳೂರಿನ ಗೌರವ ಉಳಿಸಲು ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಮುಂದೆ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿದ್ದೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು. ಈ ವಿಚಾರದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಜವಾಬ್ದಾರಿಯನ್ನು ಗೃಹ ಸಚಿವ ಪರಮೇಶ್ವರ್ ಅವರಿಗೆ ವಹಿಸಲಾಗಿದೆ. ಕೆಎಸ್ ಸಿಎ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಅವರ ತಂಡ ಹಾಗೂ ಪೊಲೀಸ್ ಅಧಿಕಾರಿಗಳು ಕೂತು ಚರ್ಚೆ ಮಾಡಲಿದ್ದಾರೆ" ಎಂದು ತಿಳಿಸಿದರು.
ಬೆಳಗಾವಿ ಹೊರವಲಯದಲ್ಲಿ ನಿನ್ನೆ ರಾತ್ರಿ ಶಾಸಕರ ಜತೆ ಔತಣಕೂಟ ಮಾಡಿದ್ದೀರಂತಲ್ಲಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ದಿನ ಒಬ್ಬೊಬ್ಬ ಸ್ಥಳೀಯರು, ನಮ್ಮ ಕ್ಷೇತ್ರದವರು ಪ್ರೀತಿಯಿಂದ ಊಟ ತಂದು ಕೊಡುತ್ತಿದ್ದಾರೆ. ಊಟವನ್ನು ಬೇಡ ಎನ್ನಲು ಆಗುತ್ತದೆಯೇ? ಪ್ರೀತಿಯಿಂದ ಕರೆಯುತ್ತಾರೆ, ಅದಕ್ಕೆ ಒಂದೊಂದು ದಿನ ಒಂದೊಂದು ಕಡೆ ಊಟಕ್ಕೆ ಹೋಗುತ್ತೇವೆ. ಇದು ಯಾವ ಔತಣಕೂಟವೂ ಅಲ್ಲ, ಏನೂ ಅಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ನನ್ನ ಕ್ಷೇತ್ರದ ಹುಡುಗನೊಬ್ಬ ಇಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನ ಮನೆಯಿಂದ ಇವತ್ತು ಮುದ್ದೆ, ಉಪ್ಸಾರು ಊಟ ಮಾಡಿ ಕಳಿಸುತ್ತೇವೆ ಎನ್ನುತ್ತಿದ್ದಾನೆ. ಹೀಗೇ ಅವರು ಪ್ರೀತಿಯಿಂದ ಹೇಳಿದಾಗ, ಕರೆದಾಗ ಬೇಡ ಎನ್ನಲು ಆಗುತ್ತದೆಯೇ? ನಾಳಿದ್ದು ನಮ್ಮ ಆಸೀಫ್ ಸೇಠ್, ಫಿರೋಜ್ ಸೇಠ್ ಅವರು ಊಟಕ್ಕೆ ಕರೆದಿದ್ದಾರೆ ಎಂದರು. ದೊಡ್ಡಣ್ಣನವರ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರು. ನನ್ನ ಸ್ನೇಹಿತರೂ ಹೌದು. ಅವರದು ದೊಡ್ಡ ಕುಟುಂಬ. ಕಳೆದ 15 ವರ್ಷಗಳಿಂದ ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಕರೆಯುತ್ತಿದ್ದರು. ನಮ್ಮ ಕಾಂಗ್ರೆಸ್ ಕುಟುಂಬದವರನ್ನು ಮರೆಯಲು ಆಗುತ್ತದೆಯೇ? ಹೀಗಾಗಿ ನಾನೂ ಸೇರಿದಂತೆ ಒಂದಷ್ಟು ಜನರು ಊಟಕ್ಕೆ ಹೋಗಿದ್ದೆವು, ಅಷ್ಟೇ. ಅದರಲ್ಲಿ ಯಾವ ಔತಣಕೂಟವು ಇಲ್ಲ, ಏನೂ ಇಲ್ಲ ಎಂದು ಹೇಳಿದರು.












Click it and Unblock the Notifications