IPL Free VIP Tickets: ಶಾಸಕರಿಗೆ ಐಪಿಎಲ್‌ ವಿಐಪಿ ಟಿಕೆಟ್ ಪಡೆಯುವ ಹಕ್ಕು ಇದೆ: ಡಿ.ಕೆ.ಶಿವಕುಮಾರ್ ಸಮರ್ಥನೆ

ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯಗಳ ವೀಕ್ಷಣೆಗೆ ಶಾಸಕರಿಗೆ ವಿಐಪಿ ಪಾಸ್‌ಗಳನ್ನು ನೀಡಬೇಕೆಂಬ ಬೇಡಿಕೆ ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಾಸಕರ ಬೇಡಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಈ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಅಧ್ಯಕ್ಷರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ.

ಶಾಸಕರು ಸರ್ಕಾರದ ಭಾಗವಾಗಿರುವುದರಿಂದ ಅವರಿಗೆ ಈ ಸೌಲಭ್ಯ ಪಡೆಯುವ ಹಕ್ಕಿದೆ ಎಂದು ಡಿ.ಕೆ.ಶಿವಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ. ಶಾಸಕರು ಸರ್ಕಾರದ ವ್ಯವಸ್ಥೆಯ ಒಂದು ಭಾಗ. ಅವರಿಗೆ ವಿಐಪಿ ಟಿಕೆಟ್ ಮತ್ತು ಸೌಲಭ್ಯಗಳನ್ನು ಕೇಳುವ ಹಕ್ಕಿದೆ. ಅವರು ಕೂಡ ಜನರ ಪ್ರತಿನಿಧಿಗಳು. ಶಾಸಕರಿಗೆ ಪಂದ್ಯ ವೀಕ್ಷಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ. ಶಾಸಕರ ಈ ಬೇಡಿಕೆಯನ್ನು 'ವಿಐಪಿ ಸಂಸ್ಕೃತಿ' ಎಂದು ಟೀಕಿಸಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

DK Shivakumar

ಮಾರ್ಚ್ 28ರಿಂದ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ಆರಂಭವಾಗಲಿದ್ದು, ವಿಧಾನಸಭೆಯಲ್ಲಿ ತಮಗೆ ಕನಿಷ್ಠ 4 ರಿಂದ 5 ವಿಐಪಿ ಟಿಕೆಟ್ ನೀಡಬೇಕೆಂದು ಶಾಸಕ ವಿಜಯಾನಂದ ಕಾಶಪ್ಪನವರ್ ಬೇಡಿಕೆ ಇಟ್ಟಿದ್ದರು. ನಾವು ವಿಐಪಿಗಳು, ನಾವು ಜನಸಾಮಾನ್ಯರಂತೆ ಕ್ಯೂನಲ್ಲಿ ನಿಲ್ಲಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೂಡ ಕೆಎಸ್‌ಸಿಎ ಸಂಸ್ಥೆಯು ಸರ್ಕಾರದಿಂದ ಕಡಿಮೆ ದರಕ್ಕೆ ಭೂಮಿ ಪಡೆದು, ಜನಪ್ರತಿನಿಧಿಗಳನ್ನು ಗೌರವಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಸ್ಪೀಕರ್ ಯು.ಟಿ. ಖಾದರ್ ಅವರು ಈ ಸಮಸ್ಯೆಯನ್ನು ಬಗೆಹರಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದರು.

ಏನಿದು ಬೇಡಿಕೆ?

ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳು ಐಪಿಎಲ್ ಪಂದ್ಯಗಳ ವೀಕ್ಷಣೆಗೆ 'ಉಚಿತ ವಿಐಪಿ ಟಿಕೆಟ್'ಗಾಗಿ ಪಟ್ಟು ಹಿಡಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಈ ಬೇಡಿಕೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮರ್ಥಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಚರ್ಚೆಯ ವೇಳೆ ಶಾಸಕ ಕಾಶಪ್ಪನವರ್ ಅವರು ಕೆಎಸ್‌ಸಿಎ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರತಿ ಶಾಸಕರು ಮತ್ತು ಸಚಿವರಿಗೆ ತಲಾ 5 ಉಚಿತ ಐಪಿಎಲ್ ಟಿಕೆಟ್‌ಗಳನ್ನು ನೀಡಬೇಕು. ಶಾಸಕರಿಗಾಗಿಯೇ ಕ್ರೀಡಾಂಗಣದಲ್ಲಿ ಪ್ರತ್ಯೇಕ ವಿಐಪಿ ಆಸನಗಳ ವ್ಯವಸ್ಥೆ ಮಾಡಬೇಕು. ನಾವು ಜನಪ್ರತಿನಿಧಿಗಳು, ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಟಿಕೆಟ್ ಪಡೆಯಲು ಸಾಧ್ಯವಿಲ್ಲ. ನಮಗೆ ಗೌರವ ನೀಡಬೇಕು ಎಂಬುದು ಅವರ ವಾದವಾಗಿತ್ತು.

ಜನಸಾಮಾನ್ಯರ ಆಕ್ರೋಶ

ಸಾಮಾನ್ಯ ಜನರು ಸಾವಿರಾರು ರೂಪಾಯಿ ನೀಡಿ, ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಟಿಕೆಟ್ ಪಡೆಯುತ್ತಿರುವಾಗ, ಶಾಸಕರು 'ಉಚಿತ ಭಾಗ್ಯ' ಕೇಳುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಇವರಿಗೆ ಟಿಕೆಟ್ ಕೊಳ್ಳಲು ಹಣವಿಲ್ಲವೇ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಬರಗಾಲದ ಸಮಯದಲ್ಲಿ ಜನರ ಕಷ್ಟ ಕೇಳುವ ಬದಲು ಕ್ರಿಕೆಟ್ ಟಿಕೆಟ್‌ಗಾಗಿ ಲಾಬಿ ಮಾಡುವುದು ಎಷ್ಟು ಸರಿ? ಎಂಬ ಚರ್ಚೆ ಶುರುವಾಗಿದೆ. ವಿಧಾನಸೌಧದಲ್ಲಿ ಈ ವಿಷಯ ಚರ್ಚೆಯಾದ ಬೆನ್ನಲ್ಲೇ, ಸ್ಪೀಕರ್ ಯು.ಟಿ. ಖಾದರ್ ಅವರು ಈ ಗೊಂದಲ ಬಗೆಹರಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ. ಕ್ರಿಕೆಟ್ ಪ್ರೇಮಿಗಳು ಮತ್ತು ಜನಪ್ರತಿನಿಧಿಗಳ ನಡುವಿನ ಈ 'ಟಿಕೆಟ್ ಸಮರ' ಈಗ ರಾಜಕೀಯ ತಿರುವು ಪಡೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+