Karnataka Ministers Assets: ಕರ್ನಾಟಕ ನೂತನ ಸಚಿವರ ಶೈಕ್ಷಣಿಕ ಅರ್ಹತೆ, ಆಸ್ತಿ ವಿವರ ಬಹಿರಂಗ
ಬೆಂಗಳೂರು, ಜೂನ್ 7: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಇತ್ತೀಚೆಗೆ ಪುನರ್ರಚನೆಗೊಂಡಿರುವ ನೂತನ ಕರ್ನಾಟಕ ಸಚಿವ ಸಂಪುಟದ ಸಚಿವರ ಶೈಕ್ಷಣಿಕ ಹಿನ್ನೆಲೆ ಹಾಗೂ ಆಸ್ತಿಪಾಸ್ತಿಗಳ ಸಂಪೂರ್ಣ ವಿವರಗಳು ಈಗ ಹೊರಬಿದ್ದಿವೆ. ದೇಶದ ಪ್ರಮುಖ ಚುನಾವಣಾ ನಿಗಾ ಸಂಸ್ಥೆಯಾದ 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್' (ಎಡಿಆರ್) ಬಿಡುಗಡೆ ಮಾಡಿದ ಈ ಹೊಸ ವರದಿಯಲ್ಲಿ ರಾಜ್ಯದ ಸಚಿವರ ಆಸ್ತಿ ಮತ್ತು ಓದಿನ ಕುರಿತು ಹಲವು ಕುತೂಹಲಕಾರಿ ಸಂಗತಿಗಳು ಬಹಿರಂಗವಾಗಿವೆ.
ಈ ವರದಿ ಪ್ರಕಾರ, ನೂತನ ಸಂಪುಟದಲ್ಲಿ ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿರುವ ನಾಯಕರಾಗಿ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು ಗುರುತಿಸಿಕೊಂಡಿದ್ದಾರೆ. ಕೃಷಿ ವಿಷಯದಲ್ಲಿ ಬಿ.ಎಸ್ಸಿ. ಮತ್ತು ಎಂ.ಎಸ್ಸಿ. ಪದವಿ ಪಡೆದಿರುವ ಇವರು, ಆಸ್ಟ್ರೇಲಿಯಾದ ಅಡಿಲೇಡ್ ವಿಶ್ವವಿದ್ಯಾಲಯದಿಂದ ಸಸ್ಯ ಶರೀರಶಾಸ್ತ್ರದಲ್ಲಿ ಪಿಎಚ್ಡಿ ಮುಗಿಸಿದ್ದಾರೆ. ಮತ್ತೊಂದೆಡೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.

ಸಚಿವ ಡಾ.ಯತೀಂದ್ರ
ವೈದ್ಯಕೀಯ ವಲಯದಿಂದ ಬಂದಿರುವ ಡಾ.ಯತೀಂದ್ರ ಸಿದ್ದರಾಮಯ್ಯ (ಎಂಬಿಬಿಎಸ್ ಮತ್ತು ಎಂಡಿ) ಅವರು 31 ಕೋಟಿ ರೂಪಾಯಿ ಆಸ್ತಿ ಹೊಂದಿದ್ದರೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ (ಎಂಡಿ) 28 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ಕೃಷ್ಣ ಬೈರೇಗೌಡ ಅವರು ವಿದೇಶದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಸ್ನಾತಕೋತ್ತರ ಪದವಿ ( in International Relations) ಪಡೆದಿದ್ದು, ಇವರು 16 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿದ್ದಾರೆ.
ಕಾನೂನು ಮತ್ತು ತಾಂತ್ರಿಕ ಹಿನ್ನೆಲೆಯ ಸಚಿವರು
ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಅವರು ಬಿ.ಎ. ಮತ್ತು ಎಲ್.ಎಲ್.ಬಿ. ಪದವಿಗಳನ್ನು ಪಡೆದಿದ್ದು, ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸಹ ಪಡೆದಿದ್ದಾರೆ. ಇವರ ಒಟ್ಟು ಆಸ್ತಿ 59 ಕೋಟಿ ರೂಪಾಗೂ ಹೆಚ್ಚಿದೆ. ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಇಂಜಿನಿಯರಿಂಗ್ (ಬಿಇ) ಪದವೀಧರರಾಗಿದ್ದು, 141 ಕೋಟಿ ರೂಪಾಯಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಹಾಗೂ ಇವರಿಗೂ ಗೌರವ ಡಾಕ್ಟರೇಟ್ ಲಭಿಸಿದೆ.
ತಾಂತ್ರಿಕ ಹಿನ್ನೆಲೆಯುಳ್ಳ ಮತ್ತೊಬ್ಬ ಸಚಿವ ಈಶ್ವರ್ ಖಂಡ್ರೆ ಅವರು ಇಂಜಿನಿಯರಿಂಗ್ ಪದವಿ ಮುಗಿಸಿದ್ದು, ಇವರು 8 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಕಾನೂನು ಪದವೀಧರರಾದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು 6 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು, ಇವರು ಸಂಪುಟದ ಅತ್ಯಂತ ಕಡಿಮೆ ಆಸ್ತಿಯ ನಾಯಕರಾಗಿದ್ದಾರೆ. ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರು ಪದವೀಧರರಾಗಿದ್ದು, 110 ಕೋಟಿ ರೂಪಾಯಿ ಆಸ್ತಿಯ ಒಡೆಯರಾಗಿದ್ದಾರೆ.
ಕಡಿಮೆ ಶಿಕ್ಷಣ, ಕೋಟಿ ಒಡೆಯರು..
ಶೈಕ್ಷಣಿಕ ಅರ್ಹತೆಯಲ್ಲಿ ಸ್ವಲ್ಪ ಹಿಂದುಳಿದಿದ್ದರೂ ಆಸ್ತಿ ಗಳಿಕೆಯಲ್ಲಿ ಸಂಪುಟದ ಇತರರಿಗಿಂತ ಮುಂಚೂಣಿಯಲ್ಲಿರುವ ನಾಯಕರೂ ಇದ್ದಾರೆ. ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಹೊಂದಿರುವ ಬೈರತಿ ಸುರೇಶ್ ಅವರು ಬರೋಬ್ಬರಿ 648 ಕೋಟಿ ರೂಪಾಯಿಗಳ ಆಸ್ತಿ ಹೊಂದುವ ಮೂಲಕ ಸಂಪುಟದ ಅತ್ಯಂತ ಶ್ರೀಮಂತ ಸಚಿವರ ಪಟ್ಟಿಯಲ್ಲಿದ್ದಾರೆ.
ಅದೇ ರೀತಿ ದ್ವಿತೀಯ ಪಿಯುಸಿ ಓದಿರುವ ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರು ಕೃಷಿ ಮತ್ತು ಉದ್ಯಮ ರಂಗದಲ್ಲಿ ಸಕ್ರಿಯರಾಗಿದ್ದು, 175 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇನ್ನು ನೂತನ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಪ್ರಿಯಾಂಕ್ ಖರ್ಗೆ ಅವರು 10ನೇ ತರಗತಿ ಪಾಸ್ ಮಾಡಿದ್ದು, ಇವರು 16 ಕೋಟಿ ರೂಪಾಯಿಗಳ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ನೂತನ ಸಚಿವ ಸಂಪುಟವು ಉನ್ನತ ಶಿಕ್ಷಣ ಪಡೆದ ವೈದ್ಯರು, ಇಂಜಿನಿಯರ್ಗಳು, ವಕೀಲರು ಹಾಗೂ ತಳಮಟ್ಟದಿಂದ ಬಂದ ಪ್ರಭಾವಿ ಉದ್ಯಮಿಗಳನ್ನೊಳಗೊಂಡ ವಿಶಿಷ್ಟ ಮಿಶ್ರಣದಂತಿದೆ ಎಂದು ಈ ವರದಿಯಿಂದ ತಿಳಿದುಬಂದಿದೆ.
ಡಿಕೆಶಿ ಸಂಪುಟದ ಸಚಿವರ ಶಿಕ್ಷಣ, ಆಸ್ತಿ ವಿವರ
ಡಾ. ಜಿ. ಪರಮೇಶ್ವರ
* ಹುದ್ದೆ: ಡಿಸಿಎಂ ಹಾಗೂ ಕಂದಾಯ ಸಚಿವ
* ಶಿಕ್ಷಣ: ಕೃಷಿ ವಿಷಯದಲ್ಲಿ ಬಿ.ಎಸ್ಸಿ. ಮತ್ತು ಎಂ.ಎಸ್ಸಿ. ಪೂರ್ಣಗೊಳಿಸಿದ್ದು, ಆಸ್ಟ್ರೇಲಿಯಾದ ಪ್ರತಿಷ್ಠಿತ ಅಡಿಲೇಡ್ ವಿಶ್ವವಿದ್ಯಾಲಯದಿಂದ ಸಸ್ಯ ಶರೀರಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ.
ಡಾ.ಯತೀಂದ್ರ ಸಿದ್ದರಾಮಯ್ಯ
* ಶಿಕ್ಷಣ: ವೃತ್ತಿಪರ ವೈದ್ಯರಾಗಿರುವ ಇವರು ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
* ಆಸ್ತಿ: 31 ಕೋಟಿ ರೂಪಾಯಿ
ಡಾ. ಶರಣ ಪ್ರಕಾಶ್ ಪಾಟೀಲ್
* ಹುದ್ದೆ: ವೈದ್ಯಕೀಯ ಶಿಕ್ಷಣ ಸಚಿವ
* ಶಿಕ್ಷಣ: ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
* ಆಸ್ತಿ: 28 ಕೋಟಿ ರೂಪಾಯಿ
ಕೆ.ಎಚ್. ಮುನಿಯಪ್ಪ
* ಶಿಕ್ಷಣ: ಬಿ.ಎ. ಮತ್ತು ಎಲ್.ಎಲ್.ಬಿ. ಪದವಿಗಳನ್ನು ಪೂರ್ಣಗೊಳಿಸಿದ್ದು, ಗುಲ್ಬರ್ಗಾ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ.
* ಆಸ್ತಿ: 59 ಕೋಟಿ ರೂಪಾಯಿ
ಎಂ.ಬಿ. ಪಾಟೀಲ್
* ಹುದ್ದೆ: ಬೃಹತ್ ಕೈಗಾರಿಕಾ ಸಚಿವ
* ಶಿಕ್ಷಣ: ಮೂಲತಃ ಇಂಜಿನಿಯರಿಂಗ್ ಪದವೀಧರರಾಗಿದ್ದು, ಇವರಿಗೆ ಡಿ.ವೈ. ಪಾಟೀಲ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿದೆ.
* ಆಸ್ತಿ: 141 ಕೋಟಿ ರೂಪಾಯಿಗೂ ಅಧಿಕ
ಕೃಷ್ಣ ಬೈರೇಗೌಡ
* ಶಿಕ್ಷಣ: ವಿದೇಶದಲ್ಲಿ MA in International Relations ಪದವಿ ಮುಗಿಸಿದ್ದಾರೆ.
* ಆಸ್ತಿ: 16 ಕೋಟಿಗೂ ಅಧಿಕ
ಈಶ್ವರ್ ಖಂಡ್ರೆ
* ಶಿಕ್ಷಣ: ಇಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದಾರೆ.
* ಆಸ್ತಿ: 8 ಕೋಟಿ ರೂಪಾಯಿ
ಯು.ಟಿ. ಖಾದರ್
* ಹುದ್ದೆ: ಆರೋಗ್ಯ ಸಚಿವ
* ಶಿಕ್ಷಣ: ಕಾನೂನು ಪದವಿ ಮುಗಿಸಿದ್ದು, ರಾಜಕೀಯಕ್ಕೆ ಬರುವ ಮುನ್ನ ವಕೀಲರಾಗಿ ವೃತ್ತಿ ಆರಂಭಿಸಿದ್ದರು.
* ಆಸ್ತಿ: 6 ಕೋಟಿ ರೂಪಾಯಿ
ರಾಮಲಿಂಗಾ ರೆಡ್ಡಿ
* ಶಿಕ್ಷಣ: ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.
* ಆಸ್ತಿ: 110 ಕೋಟಿ ರೂಪಾಯಿ
ಬೈರತಿ ಸುರೇಶ್
* ಶಿಕ್ಷಣ: ದ್ವಿತೀಯ ಪಿಯುಸಿ ಪಾಸ್
* ಆಸ್ತಿ: 648 ಕೋಟಿ ರೂಪಾಯಿ
ಸತೀಶ್ ಜಾರಕಿಹೊಳಿ
* ಶಿಕ್ಷಣ: ದ್ವಿತೀಯ ಪಿಯುಸಿ
* ಆಸ್ತಿ: 175 ಕೋಟಿ ರೂಪಾಯಿ
ಪ್ರಿಯಾಂಕ್ ಖರ್ಗೆ
* ಹುದ್ದೆ: ಗೃಹ ಸಚಿವ
* ಶಿಕ್ಷಣ: ಎಸ್ಎಸ್ಎಲ್ಸಿ ಪಾಸ್
* ಆಸ್ತಿ: 16 ಕೋಟಿ ರೂಪಾಯಿ












Click it and Unblock the Notifications