ನನ್ನ ಹುಟ್ಟಿಗಾಗಿ ಶಿವಾಲ್ದಪ್ಪನ ಬೆಟ್ಟದಲ್ಲಿ ಹರಕೆ ಕಟ್ಟಿದ್ದ ತಾಯಿ: ಡಿಕೆಶಿ ಭಾವುಕ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಶ್ವ ತಾಯಂದಿರ ದಿನಕ್ಕೆ ಶುಭಕೋರಿದ್ದಾರೆ. ಇದೇ ವೇಳೆ ತಮ್ಮ ತಾಯಿಯನ್ನು ಅವರು ನೆನೆದಿದ್ದಾರೆ. ಇದೇ ವೇಳೆ ತಮ್ಮ ಹುಟ್ಟಿಗಾಗಿ ತಾಯಿ ಹರಕೆ ಹೊತ್ತಿದ್ದ ವಿಚಾರವನ್ನು ಕೂಡ ಅವರು ನೆನೆದಿದ್ದಾರೆ. ಬಂದ ಬಾಗಿಲು ಮಣ್ಣು ಬಿಡುವ ಬಾಗಿಲು ಮಣ್ಣು ನಡುವೆ ಕಾಯುವುದು ತಾಯ ಕಣ್ಣು ಎಂದು ಅವರು ಬರೆದುಕೊಂಡಿದ್ದಾರೆ.
ಇಂದಿಗೂ ನಾನು ಅವಳ ಮಡಿಲಲ್ಲಿ ಮಗುವಾಗಿಬಿಡುತ್ತೇನೆ. ಮಾತನಾಡುತ್ತಿದ್ದರೆ ಚಿಂತೆಗಳೆಲ್ಲ ಕಳೆದು ಹಗುರಾಗಿಬಿಡುತ್ತೇನೆ. ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡು ಭಾವುಕನಾಗಿಬಿಡುತ್ತೇನೆ. ನನ್ನ ಶಿಕ್ಷಣಕ್ಕಾಗಿ, ಉತ್ತಮ ಭವಿಷ್ಯಕ್ಕಾಗಿ ಅವಳ ತ್ಯಾಗವನ್ನು ನೆನಪಿಸಿಕೊಳ್ಳುತ್ತೇನೆ ಎಂದು ಭಾವುಕ ಮಾತುಗಳನ್ನಾಡಿದ್ದಾರೆ.

ಶಿವಾಲ್ದಪ್ಪನ ಬೆಟ್ಟದಲ್ಲಿ ನನ್ನ ಹುಟ್ಟಿಗೋಸ್ಕರ ಹರಕೆ ಕಟ್ಟಿಕೊಂಡ ಕತೆ ಕೇಳಿ ಹರುಷಪಡುತ್ತೇನೆ. ಇವಳು ನನ್ನ ಪಾಲಿನ ದೇವತೆ, ನನ್ನ ಭಾಗ್ಯದಾತೆ. ಮಮತೆಯ ಸಾಕಾರಮೂರ್ತಿ ನನ್ನವ್ವನಿಗೆ ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು. ನಾಡಿನ ಎಲ್ಲಾ ತಾಯಂದಿರಿಗೂ ಪ್ರೀತಿಯ ಶುಭಾಶಯಗಳು ಎಂದು ಹಾರೈಸಿದ್ದಾರೆ.
ಡಿಕೆಶಿ ಸಹೋದರ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಅವರು ಕೂಡ ವಿಶ್ವ ತಾಯಂದಿರ ದಿನದ ಅಂಗವಾಗಿ ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಹತ್ತು ದೇವರಿಗೂ ಮಿಗಿಲಾದ ಕಣ್ಣಿಗೆ ಕಾಣುವ ದೇವತೆ ಅಮ್ಮ. ಅಮ್ಮನ ಪ್ರೀತಿಗೆ ಸರಿಸಾಟಿ ಯಾರೂ ಇಲ್ಲ. ಲಾಲನೆ ಪಾಲನೆ ಮಾಡಿ ಮಕ್ಕಳ ಭವಿಷ್ಯ ರೂಪಿಸುವ ತ್ಯಾಗಮಯಿ ಅಮ್ಮ. ಅಮ್ಮ ಎನ್ನುವ ಎರಡಕ್ಷರದಲ್ಲಿ ಅಮೃತವಿದೆ. ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಸಂಸದ ಹಾಗೂ ಬಿಜೆಪಿ ಮಾಜಿ ಸಚಿವ ಕೆ.ಸುಧಾಕರ್ ಅವರು ಕೂಡ ತಾಯಂದಿರ ದಿನಕ್ಕೆ ಶುಭಕೋರಿದ್ದಾರೆ. ತನಗಾಗಿ ಏನನ್ನೂ ಬಯಸದವಳು, ಅವಳಿಗಾಗಿ ಏನನ್ನೂ ಕೂಡಿಡದವಳು, ಸೋತಾಗ ಜೊತೆಗೆ ನಿಂತವಳು, ಸದಾ ಬೆನ್ನು ತಟ್ಟಿದವಳು, ನಮ್ಮ ನಗುವಲ್ಲೆ ತನ್ನ ಖುಷಿ ಕಂಡವಳು, ನಮಗಾಗಿಯೇ ಇಡೀ ಜೀವನ ಮೀಸಲಿಟ್ಟವಳು, ಅವಳೇ "ಅಮ್ಮ" ಎಲ್ಲ ಅಮ್ಮಂದಿರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು ಎಂದಿದ್ದಾರೆ.
ಮಾತೃ ದೇವೋ ಭವ. ಪ್ರೀತಿ, ವಾತ್ಸಲ್ಯ, ತ್ಯಾಗ, ಸಹಾನುಭೂತಿ, ಮಮತೆಯ ಪ್ರತಿರೂಪವೇ ತಾಯಿ. ನವಮಾಸ ಹೊತ್ತು ಹೆತ್ತು, ಸಾಕಿ ಸಲಹಿದ ಕರುಣಾಮಯಿ ತಾಯಂದಿರ ತ್ಯಾಗ, ಪ್ರೀತಿಗೆ ನಮಿಸಿ ಗೌರವ ಸಲ್ಲಿಸೋಣ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಶುಭಕೋರಿದ್ದಾರೆ.
ಕೇಂದ್ರ ಸಚಿವ ವಿ.ಸೋಮಣ್ಣ, ಹೆತ್ತವಳು ಕರುಣೆಯ ಕಡಲು, ಹೊತ್ತವಳು ಮಮತೆಯ ಮಡಿಲು ಎಂದು ನೆನೆದಿದ್ದಾರೆ. ನಾಡಿನ ಸಮಸ್ತ ಮಾತೃ ಹೃದಯಿಗಳಿಗೆ ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು. ಪ್ರೀತಿ, ಮಮತೆ, ತ್ಯಾಗ, ಸಹಾನುಭೂತಿ ಹಾಗೂ ವಾತ್ಸಲ್ಯದ ಮೂರ್ತಿಯಾದ ತಾಯಂದಿರನ್ನು ಪೂಜಿಸೋಣ, ಗೌರವಿಸೋಣ ಎಂದು ವಿಶ್ ಮಾಡಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ವಾತ್ಸಲ್ಯ, ಕರುಣೆ, ಮಮತೆಯ ಮಹಾಸಾಗರವೇ ಆಗಿರುವ ತಾಯಿಗಿಂತ ಮಿಗಿಲಾದ ದೇವರಿಲ್ಲ. ಅಮ್ಮನಿಲ್ಲದ ಜಗವನ್ನು ಊಹಿಸಲೂ ಸಾಧ್ಯವಿಲ್ಲ. ಅಮ್ಮನ ಮಡಿಲು ದೈವ ಸನ್ನಿಧಿಗಿಂತಲೂ ಮಿಗಿಲು ಎಂದು ಪೋಸ್ಟ್ ಮಾಡಿದ್ದಾರೆ.












Click it and Unblock the Notifications