ಡಿಕೆ ರವಿ ಸಾವು : ಪೊಲೀಸರ ತನಿಖೆ ಹೇಗೆ?
ಬೆಂಗಳೂರು, ಮಾ. 17 : ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ. ಎರಡು ಕೋನಗಳಲ್ಲಿ ಬೆಂಗಳೂರು ಪೊಲೀಸರು ರವಿ ಅವರ ಸಾವಿನ ಬಗ್ಗೆ ತನಿಖೆ ನಡೆಸಲಿದ್ದಾರೆ. [ಈ ಸಾವು ನ್ಯಾಯವೇ ಮತ ಹಾಕಿ]
ಡಿ.ಕೆ.ರವಿ ಅವರ ಸಾವಿನ ಪ್ರಕರಣದ ತನಿಖೆ ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ನೇತೃತ್ವದಲ್ಲಿ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದ ಬಳಿಕ ಪೊಲೀಸರು ತನಿಖೆಯನ್ನು ಚುರುಕುಗೊಳಿಸುವ ಸಾಧ್ಯತೆ ಇದೆ. [ರವಿ ಸಾವು, ಪ್ರಮುಖ ಘಟನೆಗಳು]

ಸದ್ಯ, ಪೊಲೀಸರು ಡಿ.ಕೆ.ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂಶದ ಮೇಲೆಯೇ ತನಿಖೆ ನಡೆಸಲಿದ್ದಾರೆ. ರವಿ ಅವರ ಸಾವಿಗೆ ಕೌಟುಂಬಿಕ ಕಾರಣಗಳು ಇವೆಯೇ? ಅಥವ ಕೆಲಸದಲ್ಲಿನ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡರೆ ಎಂದು ಪೊಲೀಸರು ತನಿಖೆ ನಡೆಸಲಿದ್ದಾರೆ. [ಡಿಕೆ ರವಿ ಸಾವು, ಯಾರು ಏನು ಹೇಳಿದರು?]
ಡಿ.ಕೆ.ರವಿ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ವರದಿಗಳು ಹೇಳುತ್ತಿವೆ. ಆದರೆ, ಅವರು ಈ ಕುರಿತು ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಒಂದು ವಾರದ ಹಿಂದೆ ಡಿ.ಕೆ.ರವಿ ತಮ್ಮನ್ನು ಭೇಟಿಯಾಗಿದ್ದರು ಎಂಬ ಮಾಹಿತಿ ಸುಳ್ಳು ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಸ್ಪಷ್ಟಪಡಿಸಿದ್ದಾರೆ. [ಪ್ರತಿಕ್ರಿಯೆ: ಮಾಫಿಯಾಗಳ ದಾಹಕ್ಕೆ ದಕ್ಷ ಅಧಿಕಾರಿ ಬಲಿ]
ಖಡಕ್ ಅಧಿಕಾರಿ : ಡಿ.ಕೆ.ರವಿ ಅವರು ದಕ್ಷ ಅಧಿಕಾರಿ ಎಂದು ಕೋಲಾರದ ಜನರು ಹೇಳುತ್ತಾರೆ. ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗ ಅವರು ಅಕ್ರಮ ಮರಳು ಮಾಫಿಯಾಕ್ಕೆ ಕಡಿವಾಣ ಹಾಕಿದ್ದರು. ಕೆಲವು ತಿಂಗಳ ಹಿಂದಷ್ಟೇ ಅವರನ್ನು ವಾಣಿಜ್ಯ ತೆರಿಗೆ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಇಲ್ಲಿಗೆ ಬಂದ ಮೇಲೆಯೂ ಹಲವಾರು ದಾಳಿಗಳನ್ನು ನಡೆಸಿ ತೆರಿಗೆ ಸಂಗ್ರಹ ಮಾಡಿದ್ದರು.
ಈಗಲೇ ನಿರ್ಧರಿಸುವುದು ಕಷ್ಟ : ಕೆಲಸ ಮಾಡುವಾಗ ರವಿ ಅವರಿಗೆ ಹಲವಾರು ಶತ್ರುಗಳಿದ್ದರು ಎಂಬುದು ಸತ್ಯ. ಆದರೆ, ಅವರ ಸಾವಿಗೆ ಇದೇ ಕಾರಣ ಎಂದು ಹೇಳಲು ಇದು ಸೂಕ್ತ ಸಮಯವಲ್ಲ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಪೊಲೀಸರು ಹೇಳಿದ್ದಾರೆ.
ಡಿ.ಕೆ.ರವಿ ಅವರು ಸೋಮವಾರ ಕಚೇರಿಗೆ ತೆರಳಿದ್ದರು. ಆದರೆ, ಅಲ್ಲಿ ಯಾರೊಂದಿಗೂ ಮಾತನಾಡಿರಲಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಹಲವಾರು ಜನರ ವಿಚಾರಣೆ ನಡೆಸುವ ಅವಶ್ಯಕತೆ ಇದೆ. ಅವರು ಸಾವಿಗೆ ಶರಣಾಗುವ ಮುನ್ನ ಬಂದ ಫೋನ್ ಕರೆ, ಈ ಮೇಲ್ ಮುಂತಾದವುಗಳನ್ನು ಪರಿಶೀಲಿಸಲಾಗುತ್ತದೆ ಎಂದು
ಪೊಲೀಸರು ತಿಳಿಸಿದ್ದಾರೆ.












Click it and Unblock the Notifications