Get Updates
Get notified of breaking news, exclusive insights, and must-see stories!

ಡಿಕೆ ರವಿ ಸಾವು : ಸೋಮವಾರದ ಪ್ರಮುಖ ಬೆಳವಣಿಗೆಗಳು

ಬೆಂಗಳೂರು, ಮಾ. 23 : ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅವರ ನಿಗೂಢ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಘೋಷಣೆ ಮಾಡಿದ್ದಾರೆ. ರಾಜ್ಯದ ಜನರ ಭಾವನೆ ಮತ್ತು ರವಿ ಅವರ ಕುಟುಂಬದ ಮನವಿಗೆ ಸ್ಪಂದಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಡಿಕೆ ರವಿ ಪ್ರಕರಣದಲ್ಲಿ ಸೋಮವಾರ ನಡೆದ ಪ್ರಮುಖ ಬೆಳವಣಿಗೆಗಳ ವಿವರ ಇಲ್ಲಿದೆ.

ಸೋಮವಾರದ ಪ್ರಮುಖ ಬೆಳವಣಿಗೆಗಳು ಇಲ್ಲಿವೆ

ಸಮಯ 6 ಗಂಟೆ : 'ನನ್ನ ಯಾವುದೇ ಕಂಪನಿ ಮೇಲೆ ಐಟಿ ದಾಳಿ ಆಗಿಲ್ಲ. ಯಾವುದೇ ಕಂಪನಿಗೆ ನೋಟಿಸ್ ಕೊಟ್ಟಿಲ್ಲ. ವಿಪಕ್ಷಗಳು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿವೆ ಎಂದು ಗೃಹ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ. ಡಿಕೆ ರವಿ ಅವರ ಸಾವಿನ ಪ್ರಕರಣದಲ್ಲಿ ವಿರೋಧ ಪಕ್ಷಗಳನ್ನು ನನ್ನ ಹೆಸರನ್ನು ವಿನಾಕಾರಣ ಎಳೆದು ತರುತ್ತಿವೆ. ದಾಖಲೆಗಳನ್ನು ಮುಂದಿಟ್ಟು ಆರೋಪ ಮಾಡಲಿ ಎಂದು ಜಾರ್ಜ್ ಸವಾಲು ಹಾಕಿದರು.

ಸಮಯ 5 ಗಂಟೆ : ಆದಿಚುಂಚನಗಿರಿ ಮಠದಿಂದ ಡಿಕೆ ರವಿಯವರ ಅಣ್ಣನ ಮಗ ರೋಹನ್ ಗೌಡನನ್ನು ದತ್ತು ಸ್ವೀಕರಿಸುವುದಾಗಿ ನಿರ್ಮಲಾನಂದ ಸ್ವಾಮೀಜಿ ಹೇಳಿದ್ದಾರೆ. ಡಿಕೆ ರವಿ ಶ್ರದ್ಧಾಂಜಲಿ ಸಭೆಯಲ್ಲಿ ದತ್ತು ಸ್ವೀಕಾರದ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ ಸ್ವಾಮೀಜಿ, ರವಿಯ ಅಣ್ಣನ ಮಗನನ್ನು ದತ್ತು ತಗೆದುಕೊಂಡು ಆತನ ವಿದ್ಯಾಭ್ಯಾಸದ ಖರ್ಚು ಭರಿಸಿ ಆತನನ್ನು ಇನ್ನೊಬ್ಬ ರವಿಯನ್ನಾಗಿ ಬೆಳೆಸುವುದಾಗಿ ಭರವಸೆ ನೀಡಿದ್ದಾರೆ.

ಸಮಯ 4 ಗಂಟೆ : ಡಿ.ಕೆ.ರವಿ ಅಸಹಜ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ. ಆದರೆ, ಬಹುತೇಕ ಪ್ರಕರಣಗಳಲ್ಲಿ ಸಿಬಿಐ ತನಿಖೆ ವಿಳಂಬವಾಗುವ ಹಿನ್ನೆಲೆಯಲ್ಲಿ ರವಿ ಸಾವಿನ ತನಿಖೆ ನಡೆಸಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲು 3 ತಿಂಗಳ ಡೆಡ್ ಲೈನ್ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಮಯ 3 ಗಂಟೆ : ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವಿನ ಪ್ರಕರಣದಲ್ಲಿ ಮುಖ್ಯಮಂತ್ರಿ, ಮಂತ್ರಿಗಳು, ಮತ್ತಿನ್ಯಾರೇ ಆಗಲಿ ಭಾಗಿಯಾಗಿದ್ದಾರೆ ಎಂದು ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ' ಎಂದು ರಾಜ್ಯಸಭಾ ಸದಸ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. [ಹರಿಪ್ರಸಾದ್ ಹೇಳಿದ್ದೇನು?]

ಸಮಯ 2 ಗಂಟೆ : ಸಿದ್ದರಾಮಯ್ಯ ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಹಿಳಾ ಐಎಎಸ್ ಅಧಿಕಾರಿಗೆ ರವಿ ಅವರು ಒಂದು ಗಂಟೆಯಲ್ಲಿ 44 ಬಾರಿ ಕರೆ ಮಾಡಿದ್ದಾರೆ ಎಂದು ತಪ್ಪು ಸಂದೇಶ ರವಾನಿಸಿದ್ದಾರೆ. ಇದನ್ನು ಸಾಬೀತುಪಡಿಸಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಸಮಯ 1 ಗಂಟೆ : ಹೊಸಕೋಟೆ ಬಳಿ ಇರುವ ಕಾನ್ಫಿಡೆಂಟ್ ಗ್ರೂಪ್ ರೆಸಾರ್ಟ್‌ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆಸಿದ್ದಾರೆ.

ಸಮಯ 12.30 : ಡಿಕೆ ರವಿ ಅವರ ಸಾವಿನ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ. ನಾವು ಯಾವುದೇ ರಾಜಕಾರಣ ಮಾಡಿಲ್ಲ, ರಾಜ್ಯದ ಜನತೆಯ ಒತ್ತಾಯವನ್ನು ಸರ್ಕಾರಕ್ಕೆ ತಿಳಿಸಿದ್ದೇವೆ. ಒಂದು ವಾರದಿಂದ ಮುಖ್ಯಮಂತ್ರಿಗಳು ರಾಜಕಾರಣ ಮಾಡಿದರು ಎಂದು ಪ್ರತಿಪಕ್ಷಗಳು ತಿರುಗೇಟಿ ನೀಡಿವೆ.

ಸಮಯ 12 ಗಂಟೆ : ಡಿಕೆ ರವಿ ಅವರ ಪ್ರಕರಣದಲ್ಲಿ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಸಭಾತ್ಯಾಗ ಮಾಡಿದೆ.

ಸಮಯ 11.47 : 'ಡಿಕೆ ರವಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸಿನ ವ್ಯಕ್ತಿಯಲ್ಲ, ಸಿಬಿಐ ತನಿಖೆಯಿಂದ ಮಾತ್ರ ಸತ್ಯ ಹೊರಬರಲಿದೆ ಸರ್ಕಾರ ಸಿಬಿಐ ತನಿಖೆಗೆ ವಹಿಸಿರುವ ಕ್ರಮವನ್ನು ಸ್ವಾಗತಿಸುತ್ತೇನೆ. ಸಿಬಿಐ ತನಿಖೆಗೆ ವಹಿಸಲು ಸರ್ಕಾರಕ್ಕೆ ಒತ್ತಾಯ ಮಾಡಿದ ಮಾಧ್ಯಮ, ಪ್ರತಿಪಕ್ಷ, ಸಂಘಟನೆಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ' ಎಂದು ರವಿ ಅವರ ಮಾವ ಹನುಮಂತರಾಯಪ್ಪ ಹೇಳಿದ್ದಾರೆ.

DK Ravi death case

ಸಮಯ 11.43 : ಡಿಕೆ ರವಿ ಪ್ರಕರಣವನ್ನು ಸಿಬಿಐಗೆ ವಹಿಸಿರುವ ಸರ್ಕಾರದ ಕ್ರಮವನ್ನು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸ್ವಾಗತಿಸಿದ್ದಾರೆ. ಕಳೆದ ಒಂದು ವಾರದಿಂದ ರಾಜಕಾರಣ ಮಾಡಿದ ಸರ್ಕಾರದ ಕ್ರಮವನ್ನು ಅವರು ಖಂಡಿಸಿದ್ದಾರೆ.

ಸಮಯ 11.37 : 'ರಾಜ್ಯದ ಜನರ ಭಾವನೆಗೆ ಮತ್ತು ರವಿ ಪೋಷಕರ ಮನವಿಗೆ ಸ್ಪಂದಿಸಿ ಡಿಕೆ ರವಿ ಅವರ ಸಾವಿನ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಲು ತೀರ್ಮಾನಿಸಿದ್ದೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಘೋಷಣೆ ಮಾಡಿದ್ದಾರೆ.

ಸಮಯ 11.30 : 'ಯಾವುದೇ ಘಟನೆ ನಡೆದ ತಕ್ಷಣ ಸಿಬಿಐಗೆ ವಹಿಸುವ ಅಗತ್ಯವಿಲ್ಲ, ಯಾವ ರಾಜ್ಯದಲ್ಲಿಯೂ ಹೀಗೆ ಮಾಡುವುದಿಲ್ಲ. ಡಿಕೆ ರವಿ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ಪ್ರಯತ್ನಿಸಿಲ್ಲ. ಸಾವಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು. ನಮಗೆ ನಮ್ಮ ವ್ಯವಸ್ಥೆಯಲ್ಲಿ ನಂಬಿಕೆ ಇದೆ' ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಮಯ 11.26 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಕ್ಕೆ ಬರುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು ಡಿಕೆ ರವಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಘೋಷಣೆ ಕೂಗಲು ಆರಂಭಿಸಿದರು. ಸದ್ಯ ಸಿದ್ದರಾಮಯ್ಯ ಸದನಕ್ಕೆ ಉತ್ತರ ನೀಡುತ್ತಿದ್ದಾರೆ.

siddaramaiah

ಸಮಯ 11.10 : ವಿಧಾನಸಭೆ ಕಲಾಪ ಆರಂಭವಾಗಿದ್ದು ಬಿಜೆಪಿ ಶಾಸಕರು ಸದಸದ ಬಾವಿಗಿಳಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಸದಸ್ಯರು ಇನ್ನೂ ಸದನಕ್ಕೆ ಆಗಮಿಸಿಲ್ಲ.

ಸಮಯ 10.48 : ವಿಧಾನಸೌಧದಲ್ಲಿ ಜೆಡಿಎಲ್‌ಪಿ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ಬಿಜೆಪಿ ಜೊತೆಗೂಡಿ ಜೆಡಿಎಸ್ ಡಿಕೆ ರವಿ ಪ್ರಕರಣದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದೆ.

ಸಮಯ 10.40 : ವಿಧಾನಸೌಧದಲ್ಲಿ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ಸರ್ಕಾರ ಡಿಕೆ ರವಿ ಪ್ರಕರಣವನ್ನು ಸಿಬಿಐಗೆ ವಹಿಸದಿದ್ದರೆ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲು ಈ ಸಭೆಯನ್ನು ಕಡೆಯಲಾಗಿದೆ.

ಸಮಯ 10.24 : ಗೃಹ ಸಚಿವ ಕೆಜೆ ಜಾರ್ಜ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿಗೆ ಭೇಟಿ ನೀಡಿದ್ದಾರೆ. ಸರ್ಕಾರ ಇಂದು ಡಿಕೆ ರವಿ ಅವರ ಪ್ರಕರಣವನ್ನು ಸಿಬಿಐಗೆ ವಹಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಆದ್ದರಿಂದ ಈ ಭೇಟಿ ಮಹತ್ವ ಪಡೆದಿದೆ.

dk ravi bengaluru

ಸಮಯ 10 ಗಂಟೆ : ಡಿಕೆ ರವಿ ಅವರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ರವಿ ಅವರ ಹುಟ್ಟೂರು ದೊಡ್ಡಕೊಪ್ಪಲಿನಲ್ಲಿ ಇಂದು ಶವಯಾತ್ರೆ ಹಮ್ಮಿಕೊಳ್ಳಲಾಗಿದೆ.

ಸಮಯ 9.15 : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮಾ ಅವರಿಗೆ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ.

ಸಮಯ 8.15 : 'ಸಿದ್ದರಾಮಯ್ಯ ಅವರೇ ನಮ್ಮ ಪ್ರಾಣವನ್ನು ತೆಗೆದುಕೊಳ್ಳಿ, ನೀವು ಸುಖವಾಗಿರಿ' ಎಂದು ಡಿಕೆ ರವಿ ಅವರ ತಾಯಿ ಗೌರಮ್ಮ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಮಗನ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸದಿದ್ದರೆ ನಾವು ಪ್ರಾಣ ಬಿಡುತ್ತೇವೆ' ಎಂದು ಗೌರಮ್ಮ ಮಾಧ್ಯಮಗಳ ಮೂಲಕ ಹೇಳಿಕೆ ನೀಡಿದ್ದಾರೆ.

ಸಮಯ 7.30 : ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನಿವಾಸದಲ್ಲಿ 9.30ಕ್ಕೆ ಬಿಜೆಪಿ ನಾಯಕರ ಸಭೆ

ಸಮಯ 7 ಗಂಟೆ : ಇಂದಿನ ಬಜೆಟ್ ಅಧಿವೇಶನಕ್ಕೆ ಗೈರು ಹಾಜರಾಗದಂತೆ ಎಲ್ಲಾ ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+