ಶಿವಮೊಗ್ಗ, ದಾವಣಗೆರೆಯಲ್ಲಿ ಮಹಿಳೆಯರಿಗೆ ಟಿಕೆಟ್
ಬೆಂಗಳೂರು, ಫೆ.19 : ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಮತ್ತು ಶಿವಮೊಗ್ಗ ಕ್ಷೇತ್ರದಿಂದ ಮಹಿಳೆಯರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಘೋಷಿಸಿದ್ದಾರೆ. 10 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಮಹಿಳಾ ಮೀಸಲಾತಿ ಮಸೂದೆಯನ್ನು ಏಕೆ ಅಂಗೀಕರಿಸಿಲ್ಲ ಎಂದು ಅವರು ಪ್ರಶ್ನಿಸಿದರು.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಚ್.ಡಿ.ದೇವೇಗೌಡರು, ಕಾಂಗ್ರೆಸ್ ಪಕ್ಷ ತಾವು ಮಹಿಳಾ ಪರವಾಗಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. 10 ವರ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿದ ಅವರಿಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಏಕೆ ಅಂಗೀಕರಿಸಲು ಸಾಧ್ಯವಾಗಿಲ್ಲ ಎಂದರು.
ಜೆಡಿಎಸ್ ಮಹಿಳೆಯರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಮತ್ತು ದಾವಣಗೆರೆ ಕ್ಷೇತ್ರದಿಂದ ಮಹಿಳೆಯರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಗೌಡರು ಹೇಳಿದರು. ತುಮಕೂರಿಗೆ ಬಂದ ರಾಹುಲ್ ಗಾಂಧಿ ಮಹಿಳೆಯರಿಗೆ ಶಾಸನಸಭೆಯಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಹೇಳಿದ್ದಾರೆ. [ಮಹಿಳಾ ಸಮಾವೇಶದಲ್ಲಿ ರಾಹುಲ್ ಹೇಳಿದ್ದೇನು]
ನಾನು ಪ್ರಧಾನಿಯಾಗಿದ್ದಾಗ ಲೋಕಸಭೆಯಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಮಸೂದೆ ಮಂಡಿಸಿದ್ದೆ. ಆದರೆ, ರಾಹುಲ್ ಗಾಂಧಿ ಮಹಿಳಾ ಮೀಸಲಾತಿ ಮಸೂದೆ ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. 10 ವರ್ಷಗಳಲ್ಲಿ ಮಸೂದೆಯನ್ನು ಅವರು ಏಕೆ ಅಂಗೀಕರಿಸಲಿಲ್ಲ ಎಂದು ಗೌಡರು ಪ್ರಶ್ನಿಸಿದರು. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಶಿವಮೊಗ್ಗ, ದಾವಣಗೆರೆಯಲ್ಲಿ ಮಹಿಳೆಯರಿಗೆ ಟಿಕೆಟ್
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಮತ್ತು ದಾವಣಗೆರೆ ಕ್ಷೇತ್ರದಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಲಾಗುವುದು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಜೆಡಿಎಸ್ ಮಹಿಳೆಯರಿಗೆ ಪಕ್ಷದಲ್ಲಿ ಸಮಾನ ಆದ್ಯತೆ ನೀಡಲಿದೆ. ಆದ್ದರಿಂದ ಎರಡು ಕ್ಷೇತ್ರದಲ್ಲಿ ಟಿಕೆಟ್ ನೀಡಲಿದೆ ಎಂದು ದೇವೇಗೌಡರು ತಿಳಿಸಿದರು.

ರಜಾದಿನಗಳಲ್ಲೂ ಜೋಳ ಖರೀದಿಸಲು ಆಗ್ರಹ
ಬೆಳಗಾವಿಯ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ರಜಾ ದಿನಗಳಲ್ಲೂ ಖರೀದಿ ಕೇಂದ್ರದಲ್ಲಿ ಗೋವಿನ ಜೋಳ ಖರೀದಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ರಾಷ್ಟ್ರೀಯ ಬಸವದಳ ಗೌರವಾಧ್ಯಕ್ಷ ಆನಂದ ಚೋಪ್ರಾ, ಸರ್ಕಾರ ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಮೆಕ್ಕೆಜೋಳ ಖರೀದಿ ಮಾಡಲು ಖರೀದಿ ಕೇಂದ್ರ ಸ್ಥಾಪಿಸಿದೆ. ಆದರೆ, ಅದು ರಜಾದಿನಗಳಂದು ಬಾಗಿಲು ಮುಚ್ಚಿರುತ್ತದೆ. ಇದರಿಂದ ಜನರಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ರಜಾ ದಿನವೂ ಖರೀದಿ ಕೇಂದ್ರ ಕಾರ್ಯನಿರ್ವರ್ಹಿಸುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ರೈತಸಂಘದಿಂದ ಪ್ರತಿಭಟನೆ
ಜಿಲ್ಲೆಯ ರೈತರ ಸಮಸ್ಯೆಗೆ ಸ್ಪಂದಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಕಣ್ಮರೆಯಾಗಿದ್ದಾರೆ. ಮತ್ತೊಂದು ಕಡೆ ಜಿಲ್ಲಾಡಳಿತ ಬೀದರ್ ಉತ್ಸವದ ಗುಂಗಿನಲ್ಲಿದ್ದು ಇದನ್ನು ಖಂಡಿಸಿ, ಫೆ.24ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ರೈತ ಸಂಘ ತಿಳಿಸಿದೆ. ಈ ಕುರಿತು ಹೇಳಿಕೆ ನೀಡಿರುವ ರೈತ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಪಾಟೀಲ್ ಕಬ್ಬಿಗೆ ರಾಜ್ಯ ಸರ್ಕಾರ ನಿಗದಿಗೊಳಿಸಿದ ದರ ನೀಡುವಲ್ಲಿ ಕಾರ್ಖಾನೆಗಳು ಹಿಂದೇಟು ಹಾಕಿದ್ದು ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ರೈತರ ಸಮಸ್ಯೆ ಆಲಿಸಲು ಬರುತ್ತಿಲ್ಲ ಎಂದು ಅವರು ಆರೋಪಿಸಿದರು.

ಫೆ.24, 25ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಚಾಮರಾಜನಗರ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆ. 24 ಮತ್ತು 25ರಂದು ನಗರದ ಪೇಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ. ಸಾಹಿತ್ಯ ಸಮ್ಮೇಳನ ನಡೆಯುವ ಪ್ರಮುಖ ವೇದಿಕೆಗೆ ಪಂಡಿತರಾದ ವೆಂಕಟರಮಣಶಾಸ್ತ್ರಿ ಸಭಾಮಂಟಪ ಎಂದು ಹೆಸರಿಡಲಾಗಿದೆ. ಫೆ. 24ರಂದು ಬೆಳಗ್ಗೆ 8.00ಕ್ಕೆ ಧ್ವಜಾರೋಹಣ ಹಾಗೂ ಮೆರವಣಿಗೆ ಮೂಲಕ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಜಿಲ್ಲಾಧಿಕಾರಿ ಎ.ಎಂ ಕುಂಜಪ್ಪ, ನಾಡಧ್ವಜವನ್ನು ಜಿಲ್ಲಾ ಎಸ್ಪಿ ರಾಜೇಂದ್ರ ಪ್ರಸಾದ್, ಪರಿಷತ್ತಿನ ಧ್ವಜವನ್ನು ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸೋಮಶೇಖರ ಬಿಸಲ್ವಾಡಿ ನೆರವೇರಿಸಲಿದ್ದಾರೆ.

ಶಿವರಾತ್ರಿ ಮಹೋತ್ಸವ
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಮಠ ಟ್ರಸ್ಟ್ ಶಿವರಾತ್ರಿ ಮಹೋತ್ಸವದ ಅಂಗವಾಗಿ ಫೆ. 28ರಂದು ಸಂಜೆ 5.30ಕ್ಕೆ ಶ್ರೀಸಿದ್ಧಾರೂಢರ ರಥೋತ್ಸವ ಹಮ್ಮಿಕೊಳ್ಳಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀಮಠದ ಚೇರ್ಮನ್ ನಾರಾಯಣಪ್ರಸಾದ ಎ. ಪಾಠಕ, ಶಿವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ಫೆ. 22ರಿಂದ ಮಾರ್ಚ್ 2ರ ವರೆಗೆ ಶ್ರೀಮಠದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

60 ಲಕ್ಷ ವೆಚ್ಚದಲ್ಲಿ ಲಕ್ಕುಂಡಿ ಉತ್ಸವ
ಫೆ.22, 23 ಮತ್ತು 24ರಂದು ಲಕ್ಕುಂಡಿ ಉತ್ಸವವನ್ನು ರು. 60 ಲಕ್ಷ ವೆಚ್ಚದಲ್ಲಿ ಆಚರಿಸಲು ಎಲ್ಲ ಸಿದ್ಧತೆ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದ್ದಾರೆ. ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರು. 30 ಲಕ್ಷ ಅನುದಾನ ನೀಡಿದೆ. ರು. 10 ಲಕ್ಷ ಪ್ರವಾಸೋದ್ಯಮ ಇಲಾಖೆಯಿಂದ ಹಾಗೂ ರು. 20 ಲಕ್ಷ ಸ್ಥಳೀಯ ಸಂಪನ್ಮೂಲಗಳ ಸಂಗ್ರಹಸಲಾಗುತ್ತಿದೆ. ಉತ್ಸವವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.












Click it and Unblock the Notifications