ಬೆಳಗಾವಿಯಲ್ಲಿ ಪ್ರೇಮಿಗಳ ದಿನವನ್ನು ಆಚರಿಸಬೇಡಿ
ಬೆಳಗಾವಿ, ಫೆ.10 : ಪ್ರೇಮಿಗಳ ದಿನವನ್ನು ಬೆಳಗಾವಿಯಲ್ಲಿ ಆಚರಣೆ ಮಾಡಲು ಅವಕಾಶ ನೀಡಬಾರದು ಎಂದು ಶ್ರೀರಾಮಸೇನೆ ಒತ್ತಾಯಿಸಿದೆ. ಪ್ರೇಮಿಗಳ ದಿನಾಚರಣೆ ನೆಪದಲ್ಲಿ ಹೋಟೆಲ್, ಪಬ್ ಗಳಲ್ಲಿ ನಡೆಯಲಿರುವ ಅನೈತಿಕ ಚುಟುವಟಿಕೆಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕದಿದ್ದರೆ, ಶ್ರೀರಾಮ ಸೇನೆ ಕಾರ್ಯಕರ್ತರು ದಾಳಿ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದೆ.
ಬೆಳಗಾವಿಯಲ್ಲಿ ಮಾತನಾಡಿದ ಶ್ರೀರಾಮಸೇನೆ ಗೌರವಾಧ್ಯಕ್ಷ ಸಿದ್ಧಲಿಂಗ ಸ್ವಾಮಿ, ಫೆ.14 ರಂದು ವ್ಯಾಲೆಂಟೈನ್ ಡೇ ಹೆಸರಿನಲ್ಲಿ ನಗರದ ಹೋಟೆಲ್ ಗಳಲ್ಲಿ ಲವ್ ಬರ್ಡ್ಸ್ ಪಾರ್ಟಿ ನಡೆಸುವುದಕ್ಕೆ ಅವಕಾಶ ನೀಡಬಾರದೆಂದು ಎಂದು ಹೇಳಿದರು. ಪ್ರೇಮಿಗಳ ದಿನಾಚರಣೆ ವಿರೋದಿಸಿ ನಗರದಲ್ಲಿ ಶ್ರೀರಾಮಸೇನೆ ಬೈಕ್ ಜಾಥಾ ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.
ಪ್ರೇಮಿಗಳ ದಿನಾಚರಣೆ ನೆಪದಲ್ಲಿ ನಗರದ ಹೋಟೆಲ್, ಪಬ್ ಗಳಲ್ಲಿ ನಡೆಯಲಿರುವ ಅನೈತಿಕ ಚುಟುವಟಿಕೆಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು. ಇಲ್ಲದಿದ್ದರೆ, ಶ್ರೀರಾಮ ಸೇನೆ ಕಾರ್ಯಕರ್ತರು ದಾಳಿ ನಡೆಸಲಿದ್ದಾರೆ ಎಂದು ಸಿದ್ಧಲಿಂಗ ಸ್ವಾಮಿ ಎಚ್ಚರಿಕೆ ನೀಡಿದರು. ಪ್ರೇಮಿಗಳ ದಿನಾಚರಣೆ ವಿರೋಧಿಸಿ ನಡೆಸುವ ಬೈಕ್ ಜಾಥಾ ಶುಕ್ರವಾರ ಬೆಳಗ್ಗೆ 10.30ಕ್ಕೆ ನಗರದ ಶಿವಾಜಿ ಉದ್ಯಾನದಿಂದ ಆರಂಭವಾಗಲಿದೆ ಎಂದು ಅವರು ಮಾಹಿತಿ ನೀಡಿದರು. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಪ್ರೇಮಿಗಳ ದಿನಾಚರಣೆಗೆ ಶ್ರೀರಾಮಸೇನೆ ವಿರೋಧ
ಬೆಳಗಾವಿ ನಗರದಲ್ಲಿ ಪ್ರೇಮಿಗಳ ದಿನ ಆಚರಣೆ ಮಾಡಲು ಸರ್ಕಾರ ಅವಕಾಶ ನೀಡಬಾರದು ಎಂದು ಶ್ರೀರಾಮ ಸೇನೆ ಒತ್ತಾಯಿಸಿದೆ. ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ನಗರದ ಹೋಟೆಲ್, ಪಬ್ ಗಳಲ್ಲಿ ಪಾರ್ಟಿಗಳನ್ನು ಮಾಡಲು ಅವಕಾಶ ನೀಡಿದರೆ, ಶ್ರೀರಾಮ ಸೇನೆ ಕಾರ್ಯಕರ್ತರು ಅಲ್ಲಿಗೆ ದಾಳಿ ನಡೆಸಲಿದ್ದಾರೆ ಎಂದು ಸೇನೆ ಎಚ್ಚರಿಕೆ ನೀಡಿದೆ.

ಅಂಚೆ ನೌಕರರ ಮುಷ್ಕರ ಆರಂಭ
ಬ್ಯಾಂಕ್ ನೌಕರರ ಮುಷ್ಕರ ಮುಗಿಯುತ್ತಿದ್ದಂತೆ ಅಂಚೆ ಇಲಾಖೆಯ ನೌಕರರ ಮುಷ್ಕರ ಆರಂಭಿಸಿದ್ದಾರೆ. ವೇತನ ಪರಿಷ್ಕರಣೆ, ಎಲ್ಲಾ ವರ್ಗದ ನೌಕರರಿಗೂ ನಿವೃತ್ತಿ ವೇತನ ಸೇರಿದಂತೆ ಸುಮಾರು 15 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಚೆ ಇಲಾಖೆಯ ನೌಕರರು ಬುಧವಾರದಿಂದ 48 ಗಂಟೆಗಳ ಮುಷ್ಕರ ನಡೆಸುತ್ತಿದ್ದಾರೆ. ಅಖಿಲ ಭಾರತೀಯ ಅಂಚೆ ನೌಕರರ ಸಂಘಟನೆ, ರಾಷ್ಟ್ರೀಯ ಅಂಚೆ ನೌಕರರ ಸಂಘಟನೆ ಗ್ರೂಪ್ 'ಸಿ', ಪೋಸ್ಟ್‌ಮನ್ ಆ್ಯಂಡ್ ಎಂಟಿಎಸ್ ಮುಂತಾದ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿವೆ.

ಆಟೋಗಳಿಗೆ ಮೀಟರ್ ಕಡ್ಡಾಯ
ಕೋಲಾರ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಸಂಚರಿಸುವ ಆಟೋ ರಿಕ್ಷಾಗಳಲ್ಲಿ ಮೀಟರ್ ಕಡ್ಡಾಯವಾಗಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಯಾವ ಆಟೋಗಳಲ್ಲಿ ಮೀಟರ್ ಇರುತ್ತದೋ ಅಂತಹ ಆಟೋಗಳಲ್ಲಿ ಪ್ರಯಾಣಿಸುವವರಿಂದ ಪರಿಷ್ಕೃತ ಕನಿಷ್ಠ ಪ್ರಯಾಣ ದರ ಪಡೆಯಬೇಕೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಸೂಚನೆ ನೀಡಿದ್ದಾರೆ. ಮೀಟರ್ ಅಳವಡಿಸಿದರೆ ಆಟೋ ಚಾಲಕರಿಗೆ ಮತ್ತು ಪ್ರಯಾಣಿಕರಿಬ್ಬರಿಗೂ ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಶ್ರೀನಿವಾಸ ರೆಡ್ಡಿ ಕಾರು ವಾಪಸ್
ಅಕ್ರಮ ಗಣಿಗಾರಿಕೆಗೆ ಪ್ರಕರಣದಲ್ಲಿ ಬಂಧಿತರಾಗಿರುವ ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರ ಮೂರು ಕಾರುಗಳನ್ನು ಸಿಬಿಐ ಅಧಿಕಾರಿಗಳು ಮಂಗಳವಾರ ವಾಪಸ್ ನೀಡಿದ್ದಾರೆ. 2011ರಲ್ಲಿ ಸೆ. 5ರಂದು ಶ್ರೀನಿವಾಸ ರೆಡ್ಡಿ ಅವರನ್ನು ಬಂಧಿಸಿದ ಸಂದರ್ಭದಲ್ಲಿ 5 ಕಾರುಗಳನ್ನು ಸಿಬಿಐ ವಶಕ್ಕೆ ಪಡೆದಿತ್ತು. ಸದ್ಯ ಹೈದರಾಬಾದ್ ನಾಂಪಲ್ಲಿ ಸಿಬಿಐ ನ್ಯಾಯಾಲಯದ ಆದೇಶದ ಮೇರೆಗೆ ಮೂರು ಕಾರುಗಳನ್ನು ವಾಪಸ್ ನೀಡಲಾಗಿದೆ. ಮಂಗಳವಾರ ಸಿಬಿಐ ಅಧಿಕಾರಿಗಳು ರೆಡ್ಡಿ ಕುಟುಂಬದ ಸದಸ್ಯರಿಗೆ ಕಾರುಗಳ ದಾಖಲೆ ಪತ್ರಗಳು ಹಾಗೂ ಕೀಲಿಕೈ ಹಸ್ತಾಂತರಿಸಿದರು.

ರೈತರಿಂದ ಗೋಶಾಲೆಗಾಗಿ ಧರಣಿ
ಮೊಳಕಾಲ್ಮುರು ತಾಲೂಕಿನಲ್ಲಿ ಬರ ಬಂದು ಮೇವಿಲ್ಲದೆ ದನುಕರುಗಳು ಸಾಯುವ ಸ್ಥಿತಿಗೆ ತಲುಪಿವೆ. ಆದರೆ, ಸರ್ಕಾರ ಗೋಶಾಲೆ ಆರಂಭಿಸಲು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ರೈತರು, ಜಾನುವಾರಗಳೊಂದಿಗೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಾಲೂಕಿನಲ್ಲಿ ಕಳೆದ 4 ವರ್ಷದಲ್ಲಿ ಬರ ಬಂದು ಜನಜೀವನ ಅಸ್ತವ್ಯಸ್ತಗೊಂಡಿದೆ. ದನಕರುಗಳ ಮೇವಿನ ಕೊರತೆ ಬಲವಾಗಿ ಕಾಡುತ್ತಿದೆ ಆದರೂ ಸರ್ಕಾರ ಗೋಶಾಲೆಗಳನ್ನು ಆರಂಭಿಸಿಲ್ಲ ಎಂದು ರೈತರು ದೂರಿದರು.

ಹುನಗುಂದದಲ್ಲಿ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಕ್ವಿಂಟಾಲಗೆ 3,100 ರೂ.ದರದಲ್ಲಿ ಕಡಲೆ ಖರೀದಿ ಮಾಡಲು, ಖರೀದಿ ಕೇಂದ್ರವನ್ನು ಆರಂಭಿಸಲಾಗಿದೆ. ಶಾಸಕ ವಿಜಯಾನಂದ ಕಾಶಪ್ಪನವರ ಖರೀದಿ ಕೇಂದ್ರವನ್ನು ಉದ್ಘಾಟಿಸಿ, ರೈತರಿಗೆ ದರ ಮತ್ತು ತೂಕದಲ್ಲಿ ಯಾವುದೇ ಅನ್ಯಾಯವಾಗದಂತೆ ಎಚ್ಚರವಹಿಸಬೇಕು ಎಂದು ಅವರು ಹೇಳಿದರು.

ಅಮೃತಭೂಮಿ ಕಾರ್ಯಕ್ರಮ ಮುಂದಕ್ಕೆ
ಚಾಮರಾಜನಗರ ತಾಲೂಕಿನ ಅಮೃತಭೂಮಿಯಲ್ಲಿ ಫೆ. 13 ರಂದು ಪ್ರೊ. ಎಂಡಿಎನ್ ಕನಸು ನನಸುಗೊಳಿಸುವ ಸುಸ್ಥಿರ ಕೃಷಿ ಕಾರ್ಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಪ್ರೊ.ಎಂಡಿಎನ್ ಜನ್ಮದಿನಾಚರಣೆ ಹಾಗೂ ಸ್ಮರಣೆ ಅಂಗವಾಗಿ ಸುಸ್ಥಿರ ಕೃಷಿ ಅಭಿವೃದ್ದಿ ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ಚಾಲನೆ ನೀಡಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಹೇಳಿದ್ದಾರೆ.












Click it and Unblock the Notifications