ಕೆ.ಸಿ.ಕೊಂಡಯ್ಯಗೆ ಕೆಪಿಸಿಸಿಯಿಂದ ನೋಟಿಸ್
ಬೆಂಗಳೂರು, ನ.26: ಬಳ್ಳಾರಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕಾಗಿ ಮಂಜೂರಾಗಿದ್ದ ನಿವೇಶನದಲ್ಲಿ ಪಕ್ಷದ ಮುಖಂಡ ಕೆ.ಸಿ.ಕೊಂಡಯ್ಯ ಕಟ್ಟಡ ನಿರ್ಮಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಪಿಸಿಸಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ಒಂದು ವಾರದೊಳಗೆ ನೋಟಿಸ್ ಗೆ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ.
ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕೆ.ಸಿ.ಕೊಂಡಯ್ಯ ವಿರುದ್ಧ ನೋಟಿಸ್ ಜಾರಿಗೊಳಿಸಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಸೂಚನೆಯಂತೆ ಪರಮೇಶ್ವರ್ ಈ ನೋಟಿಸ್ ಜಾರಿಗೊಳಿಸಿದ್ದು, ಒಂದು ವಾರದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಕೊಂಡಯ್ಯ ವಿರುದ್ಧ ಕಠಿಣ ಕ್ರಮಕ್ಕ ಕಾಂಗ್ರೆಸ್ ಮುಂದಾಗಿದೆ.
ಕೊಂಡಯ್ಯ ಅವರಿಗೆ ನೀಡಿರುವ ನೋಟಿಸ್ ನಲ್ಲಿ, ಬಳ್ಳಾರಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆಂದು ನಿವೇಶನ ಮಂಜೂರು ಮಾಡಿಸಿಕೊಂಡು, ಸದ್ಯ ಅಲ್ಲಿ ಬೇರೆ ಉದ್ದೇಶಕ್ಕೆ ಕಟ್ಟಡ ನಿರ್ಮಿಸುತ್ತಿರುವುದು ವರದಿಗಳಿಂದ ತಿಳಿದು ಬಂದಿದೆ. ಮಾಧ್ಯಮಗಳಲ್ಲಿಯೂ ಈ ಕುರಿತು ವರದಿ ಪ್ರಸಾರವಾಗಿದೆ, ನಿಮ್ಮ ಮೇಲಿನ ಆರೋಪಗಳಿಗೆ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ. (ಕೊಂಡಯ್ಯ ವಿವಾದದ ಪೂರ್ಣ ವಿವರ)
2005 ರಲ್ಲಿ ನೀವು ಟ್ರಸ್ಟಿಗಳನ್ನು ಬದಲಾವಣೆ ಮಾಡಿದ್ದೀರಿ. ನಿಮ್ಮ ಪತ್ನಿ ಮೀನಾಕ್ಷಿ, ಮಗ ಕೆ.ವಿ.ಆರ್. ಪ್ರಸಾದ್ ಅವರನ್ನು ಟ್ರಸ್ಟಿಗಳನ್ನಾಗಿ ನೇಮಕ ಮಾಡಿದ್ದೀರಿ. ಟ್ರಸ್ಟಿಗಳು ಬದುಕಿದ್ದಾಗಲೇ ಅವರನ್ನು ಬದಲಿಸಿದ್ದು ಏಕೆ? ಎಂಬ ಬಗ್ಗೆ ವಿವರಣೆ ಕೇಳಲಾಗಿದೆ. ಕೊಂಡಯ್ಯ ಅವರ ಉತ್ತರದ ನಂತರ ಅವರ ಮೇಲೆ ಯಾವ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಯಲಿದೆ. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಕೊಂಡಯ್ಯಗೆ ಕೆಪಿಸಿಸಿಯಿಂದ ನೋಟಿಸ್
ಬಳ್ಳಾರಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕಾಗಿ ಮಂಜೂರಾಗಿದ್ದ ನಿವೇಶನದಲ್ಲಿ ಪಕ್ಷದ ಮುಖಂಡ ಕೆ.ಸಿ.ಕೊಂಡಯ್ಯ ಕಟ್ಟಡ ನಿರ್ಮಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಪಿಸಿಸಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೋಟಿಸ್ ಜಾರಿಗೊಳಿಸಿದ್ದು, ಒಂದು ವಾರದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಸೂಚನೆಯಂತೆ ಪರಮೇಶ್ವರ್ ಈ ನೋಟಿಸ್ ಜಾರಿಗೊಳಿಸಿದ್ದಾರೆ.

ನಕ್ಸಲ್ ಚಲನವಲನವಿದೆ
ಪಶ್ಚಿಮಘಟ್ಟ ಪ್ರದೇಶದ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಲ್ಲಿ ಎರಡು ಮೂರು ಕಡೆ ನಕ್ಸಲ್ ಚಟುವಟಿಕೆ ಸಂಬಂಧಪಟ್ಟ ಘಟನೆಗಳು ನಡೆದಿವೆ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಹೇಳಿದ್ದಾರೆ. ಮಂಗಳವಾರ, ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪಶ್ಚಿಮ ವಲಯ ಐಜಿಪಿ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಈ ಕುರಿತು ಸಭೆ ನಡೆಸಿದ್ದು, ಕಳೆದ ನಾಲ್ಕು ತಿಂಗಳಿಂದ ಈ ಭಾಗದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ನಕ್ಸಲ್ ಘಟನೆ ಮರುಕಳಿಸಿದ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ಪುನರಾಂಭಿಸಲು ತೀರ್ಮಾನಿಸಲಾಗಿದೆ ಎಂದರು.

ಬಡತನದಿಂದಾಗಿ ಮಗು ಸರ್ಕಾರಕ್ಕೆ
ಬಡತನ ನಡುವೆಯೂ 5ನೇ ಮಗು ಹಡೆದ ರಾಮನಗರದ ತಾಯಿಯೊಬ್ಬಳು, ಆ ಹೆಣ್ಣು ಹಸುಗೂಸನ್ನು ಸಾಕಲಾರದೆ ಮಕ್ಕಳ ರಕ್ಷಣಾ ಘಟಕದ ವಶಕ್ಕೊಪ್ಪಿಸಲು ಮುಂದಾಗಿದ್ದಾಳೆ. ಇಪ್ಪತ್ತು ದಿನದ ಹಿಂದಷ್ಟೇ ಜನಿಸಿದ ಮಗಳನ್ನು ಹಸ್ತಾಂತರಿಸುವುದಕ್ಕೆ ಮುಂದಾಗಿರುವ ರಾಮನಗರದ ಗೀತಾಮಂದಿರ ಬಡಾವಣೆಯ ಸುಶೀಲಮ್ಮ ಮತ್ತು ರವಿ ದಂಪತಿ, ಮಕ್ಕಳ ರಕ್ಷಣಾ ಘಟಕದ ಎದುರು ಮಗು ಸಮೇತ ಹಾಜರಾಗಿ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದ್ದಾರೆ. ಈ ದಂಪತಿಗೆ ಈಗಾಗಲೇ ಒಬ್ಬ ಮಗ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ. ಆದ್ದರಿಂದ ಮಕ್ಕಳನ್ನು ಸಾಕುವುದು ಕಷ್ಟ ಎಂದು ಮಕ್ಕಳ ರಕ್ಷಣಾ ಘಟಕಕ್ಕೆ ನೀಡಲಿದ್ದಾರೆ.

ಹಂತಕ ಆನೆ ಸೆರೆ
ಇಬ್ಬರನ್ನು ಬಲಿ ತೆಗೆದುಕೊಂಡು ಕೊಡಗಿನ ಗಡಿ ಭಾಗವಾದ ಯಸಳೂರು ಹೋಬಳಿ ಐಗೂರು ಅರಣ್ಯದಲ್ಲಿ ಬೀಡು ಬಿಟ್ಟಿದ ಕಾಡಾನೆಯನ್ನು ಸೆರೆ ಹಿಡಿವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಈ ಆನೆಯನ್ನು ಸೆರೆ ಹಿಡಿಯಲು 4 ದಿನಗಳಿಂದ ಹಾಸನ ಹಾಗೂ ಕೊಡಗಿನ ಅರಣ್ಯ ಇಲಾಖೆ ಸಿಬ್ಬಂದಿ ಹರ ಸಾಹಸ ಪಡುತ್ತಿದ್ದರು. ಈ ಆನೆ ಅರಣ್ಯದಲ್ಲಿ ಕಾಣಿಸಿ ನಂತರ ಮರೆಯಾಗುತ್ತಿತ್ತು. ಆದರೆ, ಸೋಮವಾರ ರಾತ್ರಿ ಆನೆ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದು, ಗ್ರಾಮಸ್ಥರು ನಿರಾಳರಾಗಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿ
ಬಳ್ಳಾರಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕಾಗಿ ಮಂಜೂರಾಗಿದ್ದ ನಿವೇಶನದಲ್ಲಿ ಪಕ್ಷದ ಮುಖಂಡ ಕೆ.ಸಿ.ಕೊಂಡಯ್ಯ ಕಟ್ಟಡ ನಿರ್ಮಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ಮತ್ತು ದಾಖಲಾತಿಗಳನ್ನು ಬಿಡುಗಡೆ ಮಾಡಲು ಕೊಂಡಯ್ಯ ನ.27ರ ಬುಧವಾರ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಸಹ ಉಪಸ್ಥಿತರಿರುತ್ತಾರೆ.

ಮೂರು ಕಡೆ ಲೋಕಾಯುಕ್ತ ದಾಳಿ
ಬೆಂಗಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಮೇಶ್ ಬಿ.ಝಳಕಿ ಅವರ ನಿವಾಸ ಸೇರಿದಂತೆ ರಾಜ್ಯದ ಮೂರು ಕಡೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ.
ಝಳಕಿಯವರ ವೆಸ್ಪ್ ಆಫ್ ಕಾರ್ಡ್ ರೋಡ್, ಬಿಟಿಎಂ ಲೇಔಟ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ದ್ವಿತೀಯ ದರ್ಜೆ ಗುಮಾಸ್ತ ಟಿ.ಭೋಗೇಶ್ ಮತ್ತು ಶಿವಮೊಗ್ಗದಲ್ಲಿ ಮೆಸ್ಕಾಂ ಇಲಾಖೆಯ ವಾಹನ ಚಾಲಕ ಕ್ಲೈಮಂಡ್ ರೆಯಾನ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.












Click it and Unblock the Notifications