ಸಹಜ ಸ್ಥಿತಿಯತ್ತ ಚಿಕ್ಕಮಗಳೂರು, ಇತರ ಸುದ್ದಿ
ಚಿಕ್ಕಮಗಳೂರು, ಡಿ.30: ಎರಡು ಕೋಮುಗಳ ಪ್ರತಿಭಟನೆ, ಪೊಲೀಸ್ ಲಾಠಿ ಚಾರ್ಚ್ ನಿಂದ ಪ್ರಕ್ಷುಬ್ಧಗೊಂಡಿದ್ದ ಚಿಕ್ಕಮಗಳೂರು ನಗರ ಭಾನುವಾರ ಸಂಜೆಯಿಂದಲೇ ಸಹಜ ಸ್ಥಿತಿಗೆ ಮರಳಿದೆ. ಸೋಮವಾರ ಜನಜೀವನ, ವಾಹನಗಳ ಓಡಾಟ ಎಂದಿನಂತೆ ಸಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪ್ರಾರ್ಥನಾ ಮಂದಿರಗಳ ಸಮೀಪ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.
ಶನಿವಾರ ಪ್ರಾರ್ಥನಾ ಮಂದಿರ ಅಪವಿತ್ರಗೊಳಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ 2 ಪ್ರಕರಣಗಳನ್ನು ದಾಖಲುಡಿಕೊಳ್ಳಲಾಗಿದೆ. ಆರೋಪಿಗಳ ಹುಡುಕಾಟಕ್ಕಾಗಿ ಪೊಲೀಸ್ ಇಲಾಖೆಯು ವಿಶೇಷ ತಂಡಗಳನ್ನು ರಚಿಸಿದೆ. ದೇವಾಲಯ, ಪ್ರಾರ್ಥನಾ ಮಂದಿರ ಹಾಗೂ ಆಯಾ ಕಟ್ಟಿನ ಸ್ಥಳಗಳಲ್ಲಿ ಕೆಎಸ್‌ಆರ್‌ಪಿ, ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.[ಬೂದಿ ಮುಚ್ಚಿದ ಕೆಂಡದಂತಿದೆ ಚಿಕ್ಕಮಗಳೂರು]
ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಎನ್.ರೆಡ್ಡಿ, ಪಶ್ಚಿಮ ವಲಯದ ಐಜಿಪಿ ಪ್ರತಾಪ್ ರೆಡ್ಡಿ ಚಿಕ್ಕಮಗಳೂರಿನಲ್ಲಿ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯ ಕುರಿತು ಕ್ಷಣ ಕ್ಷಣದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಘಟನೆ ಕುರಿತು ವರದಿ ನೀಡುವಂತೆ ಸಂಸದ ಜಯ ಪ್ರಕಾಶ್ ಹೆಗ್ಡೆ ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ. [ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು]

ಸಹಜ ಸ್ಥಿತಿಯತ್ತ ಚಿಕ್ಕಮಗಳೂರು
ಶನಿವಾರ ಪ್ರಾರ್ಥನಾ ಮಂದಿರ ಅಪವಿತ್ರಗೊಳಿಸಿದ ನಂತರ ಚಿಕ್ಕಮಗಳೂರು ನಗರದಲ್ಲಿ ಉಂಟಾಗಿದ್ದ ಪ್ರಕ್ಷುಬ್ಧ ವಾತಾವರಣಸ ತಿಳಿಯಾಗಿದೆ. ನಗರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದ್ದು, ದೇವಾಲಯ, ಪ್ರಾರ್ಥನಾ ಮಂದಿರ ಮುಂತಾದ ಆಯ ಕಟ್ಟಿನ ಸ್ಥಳಗಳಲ್ಲಿ ಮಾತ್ರ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಎನ್.ರೆಡ್ಡಿ, ಪಶ್ಚಿಮ ವಲಯದ ಐಜಿಪಿ ಪ್ರತಾಪ್ ರೆಡ್ಡಿ ಚಿಕ್ಕಮಗಳೂರಿನಲ್ಲಿ ಮೊಕ್ಕಾಂ ಹೂಡಿದ್ದು ಪರಿಸ್ಥಿತಿಯ ಕುರಿತು ಕ್ಷಣ ಕ್ಷಣದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಹಾಲಿನ ಪ್ರೋತ್ಸಾಹ ಧನ ಹೆಚ್ಚಳ
ಹೊಸ ವರ್ಷಕ್ಕೆ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಮತ್ತು ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಬಂಪರ್ ಕೊಡುಗೆ ನೀಡಲಾಗಿದೆ. ಜನವರಿ 1ರಿಂದ ನಾಲ್ಕು ಜಿಲ್ಲೆಗಳ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚುವರಿ ಹಣ ದೊರೆಯಲಿದೆ. ಪ್ರಸ್ತುತ ಹಾಲು ಒಕ್ಕೂಟಗಳು ಈ ಜಿಲ್ಲೆಯ ರೈತರಿಗೆ ಪ್ರತಿ ಲೀಟರ್ ಹಾಲಿಗೆ 25 ರೂ. ಪ್ರೋತ್ಸಾಹ ಧನ ನೀಡುತ್ತಿದ್ದವು. ಜನವರಿ 1ರಿಂದ ಇನ್ನೂ 2 ಹೆಚ್ಚಳ ಅಂದರೆ 27 ರೂ. ಹೆಚ್ಚಿಸಲಾಗಿದೆ. ಕೆಎಂಎಫ್ ಅಂಗಸಂಸ್ಥೆಗಳಾಗಿರುವ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬೆಂಗಳೂರು ಡೇರಿ) ಮತ್ತು ಕೋಲಾರ ಹಾಲು ಒಕ್ಕೂಟ ರೈತರಿಗೆ ನೀಡುತ್ತಿರುವ ಹಾಲಿನ ದರದಲ್ಲಿ 2 ರೂ. ಹೆಚ್ಚಳ ಮಾಡಲು ತೀರ್ಮಾನಿಸಿದೆ. ಇದರಿಂದ ಗ್ರಾಹಕರಿಗೆ ಯಾವುದೇ ರೀತಿಯ ಹೊರೆ ಉಂಟಾಗುವುದಿಲ್ಲ.

ತಾಲೂಕಿಗೂ ಬಂತು ಸಕ್ಕಿಂಗ್ ಯಂತ್ರ
ಜಿಲ್ಲಾ ಪಂಚಾಯಿತಿ ಮೂಲಕ ಸರ್ಕಾರ ಪ್ರತಿ ತಾಲೂಕಿಗೂ ಸಕ್ಕಿಂಗ್ ಯಂತ್ರ ನೀಡುತ್ತಿದೆ. ಇದರಿಂದ ತಾಲೂಕು ಮಟ್ಟದಲ್ಲಿ ಮ್ಯಾನ್‌ಹೋಲ್ ಸಹಿತ ಗುಂಡಿಗಳಿಂದ ತ್ಯಾಜ್ಯ ಸಂಗ್ರಹಿಸುವ ಕೆಲಸ ಸುಲಭವಾಗಲಿದೆ. ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಸಹ ಪ್ರತಿ ತಾಲೂಕಿಗೂ ಸಕ್ಕಿಂಗ್ ಯಂತ್ರ ನೀಡಲು ಸಜ್ಜಾಗಿದೆ. ಇದರಿಂದ ಮಾನವ ಶ್ರಮದಿಂದ ಗುಂಡಿಗೆ ಇಳಿದು ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ತಡೆ ಬೀಳಲಿದೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಾಕಾಬಂದಿ
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಿಗಾವಹಿಸಲು ಡಿ. 30, 31 ಹಾಗೂ ಜನವರಿ 1ರಂದು ಕಮೀಷ್ನರೇಟ್‌ನ ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ನಾಕಾಬಂದಿ ಮಾಡಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ರವೀಂದ್ರಪ್ರಸಾದ್ ಹೇಳಿದ್ದಾರೆ. ಮೂರು ದಿನಗಳೆಂದು ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಹೊರಗಿನಿಂದ ಬರುವ ಹಾಗೂ ಅವಳಿನಗರದಿಂದ ತೆರಳುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಲಾಗುವುದು. ಅಲ್ಲದೇ, ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಮಡಿಕೇರಿಯಲ್ಲಿ 'ಕಲಾ ವೈಭವ`
ಮಡಿಕೇರಿಯಲ್ಲಿ ನಡೆಯುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೂರೂ ದಿನಗಳೂ ಕಾವೇರಿ ನೆಲದಲ್ಲಿ 'ಕಲಾ ವೈಭವ' ಹೆಸರಿನಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ 60 ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜ.7ರಿಂದ 9ರವರೆಗೆ ಪ್ರತಿನಿತ್ಯ ಸಂಜೆ 7 ಗಂಟೆಯಿಂದ ನಾಲ್ಕೂವರೆ ಗಂಟೆಗಳ ಕಾಲ ಭಾರತೀಸುತ ಮತ್ತು ಗೌರಮ್ಮ ವೇದಿಕೆಗಳಲ್ಲಿ ಕಲಾ ವೈಭವ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಿಎಂರಿಂದ ಪರಿಹಾರ ಘೋಷಣೆ
ಭಾನುವಾರ ಮುಂಜಾನೆ ಸಿಂಧಗಿ ತಾಲೂಕಿನ ದೇವರ ಹಿಪ್ಪರಗಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದರು. ಸೋಮವಾರ ಮೃತರಿಗೆ ಸರ್ಕಾರದ ವತಿಯಿಂದ 1 ಲಕ್ಷ ರೂ.ಗಳ ಪರಿಹಾರವನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಲಾರಿ ಮುತ್ತು ಟಂಟಂ ನಡುವೆ ಮುಖಾಮುಖಿಯಾಗಿ ಈ ಅಪಘಾತ ಸಂಭವಿಸಿತ್ತು. ಮೃತರೆಲ್ಲರು ದೇವರಹಿಪ್ಪರಗಿಗೆ ಸೇರಿದವರಾಗಿದ್ದರು.

ವೀರಪ್ಪ ಮೊಯ್ಲಿಗೆ ಕಪ್ಪು ಬಾವುಟ ಪ್ರದರ್ಶನ
ಅರ್ಕಾವತಿ ನದಿ ತೀರದ ಗ್ರಾಮಸ್ಥರು ಗ್ರಾಮಗಳನ್ನು ತೆರವುಗೊಳಿಸದಂತೆ ಒತ್ತಾಯಿಸಿ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ ಅವರ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶಿಸಿದ ಘಟನೆ ನೆಲಮಂಗಲ ಸಮೀಪದಲ್ಲಿ ಸೋಮವಾರ ನಡೆದಿದೆ. ಅರ್ಕಾವತಿ ನದಿ ಪಾತ್ರದ ಎರಡೂ ಕಡೆಗಳಲ್ಲಿ ನಿರ್ಮಿಸಿರುವ ಬಡಾವಣೆ, ಹಾಗೂ ಅನಧಿಕೃತ ಕಟ್ಟಡಗಳು ಹಾಗೂ ಕೈಗಾರಿಕಾ ವಲಯ ತೆರವುಗೊಳಿಸುವಂತೆ ನ್ಯಾಯಾಲಯ 2003ರಲ್ಲಿ ಆದೇಶ ನೀಡಿರುವುದರಿಂದ ಗ್ರಾಮಸ್ಥರಿಗೆ ತೊಂದರೆ ಎದುರಾಗಿದೆ. ಆದೇಶದನ್ವಯ ಈ ಭಾಗದ ಸುಮಾರು 17 ಗ್ರಾಮಗಳು ಎತ್ತಂಗಡಿಯಾಗುವ ಆತಂಕವಿದೆ.

ವೈದ್ಯನ ಶವ ಪತ್ತೆ
ಈಜುವಾಗ ಸುಳಿಗೆ ಸಿಕ್ಕಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ವೈದ್ಯ ಡಾ.ಕೆ.ಎಂ.ರಾಜಗೋಪಾಲ್ (62) ಅವರ ಶವ ಸೋಮವಾರ ಪತ್ತೆಯಾಗಿದೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಲಕ್ಷ್ಮೀನರ್ಸಿಂಗ್ ಹೋಮ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಜ್‌ಗೋಪಾಲ್ ಡಿ.26 ರಂದು ಕುಟುಂಬ ಸಮೇತರಾಗಿ ಗಂಗಾವತಿಗೆ ಬಂದಿದ್ದರು. ಭಾನುವಾರ ಮಧ್ಯಾಹ್ನ ಸಣಾಪುರ ಜಲಾಶಯದಿಂದ ನೀರು ಬಿಡುವ ಗೇಟ್ ಬಳಿ ಈಜಲು ತೆರಳಿದಾಗ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದರು.












Click it and Unblock the Notifications