ಬಳ್ಳಾರಿ ಡಿಸಿ ವಿರುದ್ಧ ತಿರುಗಿ ಬಿದ್ದ ಶಾಸಕರು
ಬಳ್ಳಾರಿ, ಜ.31 : ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿ ಮತ್ತು ರಾಜಕೀಯ ನಾಯಕರ ನಡುವಿನ ಜಟಾಪಟಿ ಮತ್ತೊಮ್ಮೆ ಬಹಿರಂಗವಾಗಿದೆ. ಜಿಲ್ಲಾಧಿಕಾರಿ ಆದಿತ್ಯ ಆಮ್ಲಾನ್ ಬಿಸ್ವಾಸ್ ವಿರುದ್ಧ ತಿರುಗಿ ಬಿದ್ದಿರುವ ಶಾಸಕರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು ಮುಖ್ಯಮಂತ್ರಿಗಳಿಗೆ ದೂರು ನೀಡಲು ಸಜ್ಜಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಡಿಸಿ ತೊಡಕು ಉಂಟುಮಾಡುತ್ತಿದ್ದಾರೆ ಎಂಬುದು ಜನಪ್ರತಿನಿಧಿಗಳ ಆರೋಪ.
ಶುಕ್ರವಾರ ಬಳ್ಳಾರಿಯಲ್ಲಿ ಮಾತನಾಡಿದ ಸಂಡೂರು ಕ್ಷೇತ್ರದ ಶಾಸಕ ತುಕರಾಂ, ಬಳ್ಳಾರಿ ಜಿಲ್ಲೆಯಲ್ಲಿ ಅಧಿಕಾರಿಗಳ ಹದ್ದು ಮೀರಿ ವರ್ತಿಸುತ್ತಿದ್ದಾರೆ. ಇದರಿಂದ ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆ ಉಂಟಾಗಿದೆ. ಈ ಬಗ್ಗೆ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮನ್ನಣೆ ನೀಡುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗಲು ಜಿಲ್ಲಾಧಿಕಾರಿಗಳ ಧೋರಣೆಯೇ ಕಾರಣವಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ರೈತರ ಭೂಮಿಯನ್ನು ಪ್ರಭಾವಿ ಉದ್ಯಮಿಗಳು ಬಲವಂತವಾಗಿ ವಶಪಡಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳನ್ನು ಬದಲಾವಣೆ ಮಾಡಿ ದಕ್ಷ ಅಧಿಕಾರಿಯನ್ನು ನೇಮಿಸಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ಅವರು ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯರು ಮತ್ತು ಜಿಲ್ಲೆಯ ಎಲ್ಲಾ ಶಾಸಕರು ಸಿಎಂ ಭೇಟಿ ಮಾಡಿ ಈ ಕುರಿತು ಮನವಿ ಮಾಡುತ್ತೇವೆ ಎಂದರು. [ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು]

ಜಿಲ್ಲಾಧಿಕಾರಿ ವಿರುದ್ಧ ಶಾಸಕರು ಗರಂ
ಬಳ್ಳಾರಿ ಜಿಲ್ಲಾಧಿಕಾರಿ ಆದಿತ್ಯ ಆಮ್ಲಾನ್ ಬಿಸ್ವಾಸ್ ವಿರುದ್ಧ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು ತಿರುಗಿ ಬಿದ್ದಿದ್ದಾರೆ. ಜಿಲ್ಲಾಧಿಕಾರಿ ಅವರ ಧೋರಣೆಯಿಂದಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ. ಆದ್ದರಿಂದ ಅವರನ್ನು ಬದಲಾವಣೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲು ಮುಂದಾಗಿದ್ದಾರೆ.

ಗಿಡನೆಡುವ ಯೋಜನೆ ಮರೆತ ಬಿಬಿಎಂಪಿ
ಕಾಮಗಾರಿಗಳ ನೆಪ ಹೇಳಿ ಮರಗಳ ಬುಡಕ್ಕೆ ಕೊಡಲಿ ಇಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬಜೆಟ್ ನಲ್ಲಿ ಘೋಷಿಸಿದ್ದ 1.60 ಲಕ್ಷ ಗಿಡನೆಡುವ ಯೋಜನೆಯನ್ನು ಮರೆತಿದೆ. ಮೊದಲು ಬರಿದಾಗಿರುವ ಬಿಬಿಎಂಪಿ ಖಜಾನೆ ತುಂಬಿಸಲು ಹೊರಟಿರುವ ಅಧಿಕಾರಿಗಳು ಗಿಡನೆಡುವ ಕುರಿತು ನಂತರ ತೀರ್ಮಾನ ಕೈಗೊಳ್ಳೋಣ ಎಂದು ವಿಳಂಬ ಮಾಡುತ್ತಿದ್ದಾರೆ. ನಟರಾಜ್ ಬಿಬಿಎಂಪಿ ಮೇಯರ್ ಆಗಿದ್ದಾಗ ತಮ್ಮ ಬಜೆಟ್ ನಲ್ಲಿ ನಗರದಲ್ಲಿ 9 ಕೋಟಿ ವೆಚ್ಚದಲ್ಲಿ 1.60 ಲಕ್ಷ ಗಿಡಗಳನ್ನು ನೆಡುವುದಾಗಿ ಘೋಷಿಸಿದ್ದರು. ನಂತರ ಬಿಬಿಎಂಪಿಗೆ ಇಬ್ಬರ ಮೇಯರ್ ಬಂದರೂ ಅದನ್ನು ಅನುಷ್ಟಾನಕ್ಕೆ ತರಲು ಮುಂದಾಗಿಲ್ಲ.

ಶನಿವಾರ ಗುಲ್ಬರ್ಗಕ್ಕೆ ಸೋನಿಯಾ ಗಾಂಧಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಗುಲ್ಬರ್ಗಕ್ಕೆ ಆಗಮಿಸಲಿದ್ದು ಕರ್ನಾಟಕದಲ್ಲಿ ಪಕ್ಷದ ಲೋಕಸಭೆ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಗುಲ್ಬರ್ಗದಲ್ಲಿ ಆಯೋಜಿಸಿರುವ ವಿಭಾಗ ಮಟ್ಟದ ಸಮಾವೇಶ ಉದ್ದೇಶಿಸಿ ಮಾತನಾಡಲಿರುವ ಅವರು ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಲಿದ್ದಾರೆ. ನೂತನವಾಗಿ ನಿರ್ಮಾಣವಾಗಿರುವ ಇಎಸ್ಐ ಆಸ್ಪತ್ರೆಯನ್ನು ಅವರು ಉದ್ಘಾಟಿಸಲಿದ್ದಾರೆ.

ಮಾನನಷ್ಟ ಮೊಕದ್ದಮೆ ಹೂಡುವೆ
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸುತ್ತಿರುವ ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ನಮ್ಮ ಮೇಲೆ ಆಧಾರ ರಹಿತವಾಗಿ ಆರೋಪಗಳನ್ನು ಮಾಡಿ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಲಾಗುವುದು ಎಂದರು. ನನ್ನ ಮತ್ತು ಸಹೋದರ ಶಿವಕುಮಾರ್ ಅವರ ವಿರುದ್ಧ ವ್ಯವಸ್ಥಿತ ರಾಜಕೀಯ ಪಿತೂರಿ ನಡೆಯುತ್ತಿದೆ ಎಂದು ಸುರೇಶ್ ಆರೋಪಿಸಿದರು

ಬಂಡೆ ಕುಟುಂಬಕ್ಕೆ ಪರಿಹಾರ ವಿತರಣೆ
ಗುಲ್ಬರ್ಗದಲ್ಲಿ ಪಾತಕಿ ಮುನ್ನಾ ಜೊತೆಗಿನ ಗುಂಡಿನ ಕಾಳಗದಲ್ಲಿ ಗಾಯಗೊಂಡು ಹೈದರಾಬಾದ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ಕುಟುಂಬಕ್ಕೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಎಂ.ಎನ್. ರೆಡ್ಡಿ ಶುಕ್ರವಾರ ಪರಿಹಾರ ವಿತರಣೆ ಮಾಡಿದರು. ಬಂಡೆ ನಿವಾಸಕ್ಕೆ ತೆರಳಿದ ಅವರು, ಮಲ್ಲಿಕಾರ್ಜುನ ಬಂಡೆ ಪತ್ನಿ ಮಲ್ಲಮ್ಮ ಅವರಿಗೆ 50 ಲಕ್ಷ ಮೌಲ್ಯದ ಪರಿಹಾರದ ಚೆಕ್ ಅನ್ನು ಹಸ್ತಾಂತರಿಸಿದರು.

ಸ್ವಾಮೀಜಿಗಳಿಗೆ ಸ್ವಾಗತ
ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಾಲಯದಲ್ಲಿ 7 ದಿನಗಳ ಕಾಲ ನಡೆಯಲಿರುವ " ಮಂಗಳೂರು ರಥೊಥ್ಸವ" ಕಾರ್ಯಕ್ರಮದಲ್ಲಿ ಭಾಗವಹಿಸಲು ಶ್ರೀ ಕಾಶೀ ಮಠ ಸಂಸ್ಥಾನದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿರವರ ಪಟ್ಟ ಶಿಷ್ಯರಾದ ಶ್ರೀಮದ್ ಸಯ್ಯಮಿಂದ್ರ ತೀರ್ಥ ಸ್ವಾಮೀಜಿರವರು ನಗರಕ್ಕೆ ಆಗಮಿಸಿದ್ದು, ಶುಕ್ರವಾರ ಮಂಗಳೂರಿನ ಗೌಡ ಸಾರಸ್ವತ ಸಮಾಜದ ಪರವಾಗಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.











Click it and Unblock the Notifications