ಕಮಲಾಪುರ ಗಲಭೆ ಮೂವರ ಬಂಧನ, ಪರಿಸ್ಥಿತಿ ಶಾಂತ
ಧಾರವಾಡ, ಜ.16 : ಮಂಗಳವಾರ ರಾತ್ರಿ ಕಮಲಾಪುರದದಲ್ಲಿ ನಡೆದ ಎರಡು ಕೋಮಿನ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕಮಲಾಪುರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಎರಡೂ ಕೋಮಿನ ಜೊತೆ ಸಂಧಾನ ಸಭೆ ನಡೆಸಿರುವ ಪೊಲೀಸರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಬುಧವಾರ ಬೆಳಗ್ಗೆ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕೋಮಿನ ಬಸವರಾಜ ಮಹಾದೇವಪ್ಪ ರಾಮಜೀ, ಗೋಪಾಲ ಸಂಕೋಜಿ ಹಾಗೂ ಮಂಜುನಾಥ ಬಸಲಿಂಗಪ್ಪ ಕಮತಿ ಎಂಬುವರನ್ನು ಉಪ ನಗರ ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಬಂಧಿತ ಕೋಮಿನ ಕೆಲವರಿಂದ ತೀವ್ರ ವಿರೋಧ ಉಂಟಾಗಿದ್ದು, ಇನ್ನೊಂದು ಕೋಮಿನ ಜನರನ್ನು ಬಂಧಿಸಬೇಕೆಂದು ಪಟ್ಟು ಹಿಡಿದಿದ್ದರು.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕೋಮಿನ ಮುಖಂಡ ಸೇರಿದಂತೆ 200 ಜನರ ಮೇಲೆ ಬಂಧಿತ ಕೋಮಿನವರು ದೂರು ಸಲ್ಲಿಸಿದ್ದು, ದೂರಿನ ಅನ್ವಯ ಪೊಲೀಸರು ಅವರನ್ನು ಬಂಧಿಸುವ ಸಾಧ್ಯತೆ ಇದೆ. ಜನರಿಗೆ ತೊಂದರೆ ಆಗುವುದರಿಂದ ಶಾಂತಿ ಕಾಪಾಡುವಂತೆ ಪೊಲೀಸರು ಎರಡು ಕೋಮಿನ ಮುಖಂಡರಲ್ಲಿ ಮನವಿ ಮಾಡಿದ್ದಾರೆ.
ಬುಧವಾರ ಬೆಳಗ್ಗೆಯಿಂದಲೇ ಕಮಲಾಪುರ ಸಹಜ ಸ್ಥಿತಿಗೆ ಮರಳಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯ ಮೇಲೆ ನಿಗಾವಹಿಸಲಾಗಿದೆ. ಬುಧವಾರ ಎರಡು ಕೋಮಿನ ಮುಖಂಡರ ಜೊತೆಗೆ ಪೊಲೀಸ್ ಅಧಿಕಾರಿಗಳು ಸಂಧಾನ ಸಭೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರವೂ ಪೊಲೀಸ್ ಪಡೆ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. [ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು]

ಕಮಲಾಪುರ ಶಾಂತ, ಮುಂದುವರೆದ ಪೊಲೀಸ್ ಭದ್ರತೆ
ಮಂಗಳವಾರ ರಾತ್ರಿ ಧಾರವಾಡದ ಕಮಲಾಪುರದದಲ್ಲಿ ನಡೆದ ಎರಡು ಕೋಮಿನ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕಮಲಾಪುರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಎರಡೂ ಕೋಮಿನ ಜೊತೆ ಸಂಧಾನ ಸಭೆ ನಡೆಸಿರುವ ಪೊಲೀಸರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಗುರುವಾರವೂ ಮುಂಜಾಗ್ರತಾ ಕ್ರಮವಾಗಿ ಸುಮಾರು 100 ಪೊಲೀಸರನ್ನು ನಿಯೋಜಿಸಲಾಗಿದೆ.

ಲೋಹವನ್ನು ಕೊಡುಗೆಯಾಗಿ ನೀಡಿ
ಭಾರತವನ್ನು ಒಗ್ಗೂಡಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಪಕ್ಷಭೇದ, ಜಾತಿ ಭೇದ ಮರೆತು ಲೋಹವನ್ನು ಕೊಡುಗೆಯಾಗಿ ನೀಡಬೇಕು ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಚಿತ್ರದುರ್ಗದ ಜನತೆಯಲ್ಲಿ ಮನವಿ ಮಾಡಿದ್ದಾರೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಲೋಹ ಸಂಗ್ರಹಣಾ ಸಹಕಾರ ಸಮಿತಿ ವತಿಯಿಂದ ಚಿತ್ರದುರ್ಗದ ಐನಳ್ಳಿ ಗ್ರಾಮ ಪಂಚಾಯಿತಿಯ ಬೀರಾವರದಲ್ಲಿ ಲೋಹ ಸಂಗ್ರಹಣಾ ಉದ್ಘಾಟಿಸಿ ಅವರು ಮಾತನಾಡಿದರು. ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದವರೆಗೆ ಪ್ರತಿ ಹಳ್ಳಿಗಳಲ್ಲೂ ರೈತರು ಈ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ ಎಂದರು ತಿಪ್ಪಾರೆಡ್ಡಿ ಹೇಳಿದರು.

ಅಖಿಲ ಭಾರತ ಕೊಂಕಣಿ ಲೇಖಕರ ಸಂಘಟನೆ ಅಸ್ತಿತ್ವಕ್ಕೆ
ಕೊಂಕಣಿಯನ್ನು ದೇವನಾಗರಿವಾದಿಗಳಿಂದ ರಕ್ಷಿಸಲು ಮತ್ತು ಕೊಂಕಣಿಯ ಎಲ್ಲ ಲಿಪಿಗಳ ಸಾಹಿತ್ಯಕ್ಕೆ ನ್ಯಾಯ ಸಿಗುವಂತೆ ಮಾಡಲು, ಅಖಿಲ ಭಾರತ ಕೊಂಕಣಿ ಲೇಖಕರ ಸಂಘಟನೆ ಅಸ್ತಿತ್ವಕ್ಕೆ ಬರುತ್ತಿದೆ. ಜ.19ರಂದು ಮಂಗಳೂರಿನ ಕಲಾಂಗಣದಲ್ಲಿ ಇದರ ಉದ್ಘಾಟನೆ ನಡೆಯಲಿದೆ ಎಂದು ಜಾಗತಿಕ ಕೊಂಕಣಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಎರಿಕ್ ಒಝಾರಿಯೊ ಹೇಳಿದ್ದಾರೆ. ಕಳೆದ ಸೆ.29ರಂದು ಅಖಿಲ ಭಾರತ ಲೇಖಕರ ಸಮ್ಮೇಳನದಲ್ಲಿ ಎಲ್ಲ ಲಿಪಿಗಳಿಗೆ ಮಾನ್ಯತೆ ಮತ್ತು ವಿವಿಧತೆಯಲ್ಲಿ ಏಕತೆ ಎಂಬ ಮೂಲತತ್ವಗಳ ಮೇಲೆ ಅಖಿಲ ಭಾರತ ಕೊಂಕಣಿ ಲೇಖಕರ ಸಂಘಟನೆ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಯಿತು. ಗೋವಾ, ಮಹಾರಾಷ್ಟ್ರ, ಕರ್ನಾಟಕ, ಕೇರಳದಿಂದ ಸಂಘಟನೆ ಉದ್ಘಾಟನೆಗೆ 100 ಮಂದಿ ಕೊಂಕಣಿ ಲೇಖಕರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.

ರಾಯಚೂರು ನಗರಕ್ಕೆ ನೀರಿನ ಕೊರತೆ
ರಾಯಚೂರು ನಗರದ ಜನರಿಗೆ ಕುಡಿಯುವ ನೀರು ಪೂರೈಸುವ ರಾಂಪುರ ಕೆರೆಯಲ್ಲಿ ನೀರಿನ ಸಂಗ್ರಹ ಕುಸಿತ ಕಂಡಿದ್ದು, ಜನರು ಬೇಸಿಗೆಗೆ ಮೊದಲೇ ಆತಂಕಗೊಂಡಿದ್ದಾರೆ. ಅತ್ತ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿಯೂ ನೀರಿನ ಕೃತಕ ಅಭಾವ ಕಂಡು ಬಂದಿದ್ದು, ಜಿಲ್ಲಾಡಳಿತ ಕೆರೆ ತುಂಬಿಸಿಕೊಳ್ಳಲೂ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜನರು ಒತ್ತಾಯಿಸಿ, ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ನಗರದ ಎಂಟಕ್ಕೂ ಹೆಚ್ಚು ವಾರ್ಡುಗಳಿಗೆ ರಾಂಪುರ ಕೆರೆಯಿಂದ ಕುಡಿಯುವ ನೀರು ಪೂರೈಸಲಾಗುತ್ತದೆ. ತುಂಗಭದ್ರಾ ಎಡದಂಡೆಯಿಂದ ನೀರನ್ನು ರಾಂಪುರ ಕೆರೆಗೆ ತುಂಬಿಸಿಕೊಂಡು ನಂತರ ಜನರಿಗೆ ಪೂರೈಸಲಾಗುತ್ತದೆ.

ತ್ಯಾಗರಾಜರ ಆರಾಧನಾ ಮಹೋತ್ಸವ
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರುದ್ರಪಟ್ಟಣದಲ್ಲಿ ಜ. 21ರಂದು ತ್ಯಾಗರಾಜರ ಆರಾಧನಾ ಮತ್ತು ವೇದೋಕ್ತ-ಗಾಯನದ ಸಂಭ್ರಮಾಚರಣೆ ನಡೆಯಲಿದೆ ಎಂದು ಸಂಗೀತ ವಿದ್ವಾನ್ ಆರ್.ಕೆ.ಪದ್ಮನಾಭ ಹೇಳಿದ್ದಾರೆ. ಜ.21 ರಂದು ಬೆಳಗ್ಗೆ ತ್ಯಾಗರಾಜರ ಅರಾಧನಾ ಕಾರ್ಯಕ್ರಮದ ಅಂಗವಾಗಿ ಕಾವೇರಿ ನದಿ ತೀರದಿಂದ ತ್ಯಾಗರಾಜರ ವಿಗ್ರಹ ಹಾಗೂ ಭಾವಚಿತ್ರದ ಮರೆವಣಿಗೆ ನಡೆಯಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ಸಂತ ತ್ಯಾಗರಾಜರ ಆರಾಧನೆಯ ವೇಳೆ ನಾದ ನಮನ ಹಾಗೂ ಗಾನ ಸಮರ್ಪಿಸಲಾಗುವುದು. ಗಣಪತಿ ಮತ್ತು ಯಮುನಾ ಪೂಜಾ ಕಾರ್ಯಗಳು ಕಾವೇರಿ ನದಿ ತೀರದ ರಾಮೇಶ್ವರ ದೇವಾಲಯದಲ್ಲಿ ನಡೆಯಲಿವೆ ಎಂದು ತಿಳಿಸಿದ್ದಾರೆ.

ಜ.23ರಿಂದ ಓಶೋ ಧ್ಯಾನ ಶಿಬಿರ
ಮೈಸೂರಿನ ಓಶೋ ಮಿತ್ರರು ಬೆಂಗಳೂರಿನ ಉತ್ತನಹಳ್ಳಿಯ ಓಶೋ ಸನ್ನಿಧಿಯಲ್ಲಿ ಮೂರು ದಿನಗಳ ಕಾಲದ ರಾಜ್ಯಮಟ್ಟದ ವಸತಿಯುತ ಧ್ಯಾನ ಶಿಬಿರವನ್ನು ಜ.23ರಿಂದ 26ರವರೆಗೆ ಹಮ್ಮಿಕೊಂಡಿದ್ದಾರೆ. ಓಶೋ ಅವರ ಸರ್ವಸಾರ್, ಡೈನಾಮಿಕ್, ಕುಂಡಲಿನಿ, ನಾದಬ್ರಹ್ಮ ಮುಂತಾದ ಧ್ಯಾನಗಳನ್ನು ಶಿಬಿರದಲ್ಲಿ ಕಳಿಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ 9480278144 ನಂಬರಿಗೆ ಸಂಪರ್ಕಿಸಬಹುದು.

ಬೆಂಗಳೂರು-ಮೈಸೂರು ನಡುವಿನ ರಸ್ತೆ ಅಷ್ಟಪಥ
ಮೈಸೂರು-ಬೆಂಗಳೂರು ನಡುವಿನ ರಾಜ್ಯ ಹೆದ್ದಾರಿಯನ್ನು ಎಂಟು ಪಥದ ಹೆದ್ದಾರಿಯಾಗಿ ಪರಿವರ್ತಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ಸದ್ಯ ನಾಲ್ಕು ಪಥದ ರಸ್ತೆ ಇದೆ. ಇದನ್ನು ಎಂಟು ಪಥದ ರಸ್ತೆಯಾಗಿ ಪರಿವರ್ತನೆ ಮಾಡಲು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅವರು ಇದಕ್ಕೆ ಒಪ್ಪಿಗೆ ನೀಡದಿದ್ದರೆ, ರಾಜ್ಯ ಸರ್ಕಾರವೇ ಈ ಕಾರ್ಯವನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ಅಕ್ರಮ ಟೋಲ್ ಸಂಗ್ರಹ ಹೋರಾಟಕ್ಕೆ ದೊರೆಸ್ವಾಮಿ
ನೆಲಮಂಗಲ, ಅತ್ತಿಬೆಲೆ, ಹೊಸಕೋಟೆ, ಮುಳಬಾಗಿಲು, ದೇವನಹಳ್ಳಿ, ಕೋಲಾರ ಭಾಗದ ರೈತರು ಮತ್ತು ಸಾರ್ವಜನಿಕರು ಅಕ್ರಮ ಟೋಲ್ ಸಂಗ್ರಹದ ವಿರುದ್ಧ ಹೋರಾಟ ನಡೆಸಲು ಮುಂದಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳ ಟೋಲ್ ವಸೂಲಾತಿ ವಿರೋಧಿ ಒಕ್ಕೂಟ ಎಂಬ ಸಂಘಟನೆ ಕಟ್ಟಿಕೊಂಡು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಹೋರಾಟ ಮಾಡಲು ನಿರ್ಧರಿಸಿದ್ದಾರೆ. ಮೊದಲು ನಾವೇಕೆ ಶುಲ್ಕ ಕಟ್ಟಬೇಕು ಎಂದು ಜನಜಾಗೃತಿ ಸಮಾವೇಶ ಮಾಡಿ ನಂತರ ಹೋರಾಟ ಆರಂಭಿಸಲು ನಿರ್ಧರಿಸಲಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಈ ಸಮಾವೇಶ ನಡೆಯಲಿದೆ.












Click it and Unblock the Notifications