ಕೊಂಡಯ್ಯ ವಿರುದ್ಧ ವರದಿ ಮತ್ತು ಇತರ ಸುದ್ದಿಗಳು
ಬಳ್ಳಾರಿ, ನ.8: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮೀಸಲಾಗಿದ್ದ ಜಾಗದಲ್ಲಿ ಪಕ್ಷದ ಮುಖಂಡ ಕೆ.ಸಿ.ಕೊಂಡಯ್ಯ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಶುಕ್ರವಾರ ಕೆಪಿಸಿಸಿಗೆ ತನಿಖಾ ವರದಿ ಸಲ್ಲಿಸಿದೆ. ಪ್ರಾಥಮಿಕ ತನಿಖಾ ವರದಿಯಲ್ಲಿ ಆರೋಪ ಸಾಬೀತಾಗಿದೆ.
ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಂಜನೇಯಲು ಅವರು ಶುಕ್ರವಾರ ಕೆಪಿಸಿಸಿಗೆ 30 ಪುಟಗಳ ತನಿಖಾ ವರದಿ ಸಲ್ಲಿಸಿದ್ದು, ಜೊತೆಗೆ ವಾಣಿಜ್ಯ ಸಂಕೀರ್ಣ ನಿರ್ಮಾಣವಾದ ಸ್ಥಳ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸೇರಿದ್ದು ಎಂಬುದಕ್ಕೆ 8 ಪುಟಗಳ ದಾಖಲೆಯನ್ನು ಸಲ್ಲಿಸಲಾಗಿದೆ. ಇದರಿಂದ ಕೊಂಡಯ್ಯ ಅವರ ವಿರುದ್ಧ ಕೇಳಿ ಬರುತ್ತಿರುವ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಆಂಜನೇಯಲು ಅವರು, ಬಳ್ಳಾರಿಯಲ್ಲಿ ರಾಜೀವ್ ಗಾಂಧಿ ಮೆಮೋರಿಯಲ್ ಟ್ರಸ್ಟ್ ಹಾಗೂ ತರಬೇತಿ ಸಂಸ್ಥೆ ಸ್ಥಾಪಿಸಿರುವ ಪಕ್ಷದ ಮುಖಂಡ ಕೆ.ಸಿ.ಕೊಂಡಯ್ಯ, ಕಾಂಗ್ರೆಸ್ ಕಚೇರಿಗೆಂದು ಮೀಸಲಾಗಿದ್ದ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಲು, ನಗರದ ದುರ್ಗಮ್ಮ ದೇವಾಲಯದ ಬಳಿ86.76 ಚದರ ಅಡಿನಿವೇಶನವನ್ನು ಕೆಲವು ಷರತ್ತುಗಳನ್ನು ಹಾಕಿ 99 ವರ್ಷಗಳ ಅವಧಿಗೆ ನೀಡಿದ್ದರು. ಇದನ್ನು ದುರುಪಯೋಗ ಪಡಿಸಿಕೊಂಡು ಕೊಂಡಯ್ಯ ಅವರು ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುತ್ತಿದ್ದಾರೆ ಎಂಬುದು ಸದ್ಯದ ದೂರು. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಕೆ.ಸಿ.ಕೊಂಡಯ್ಯ ವಿರುದ್ಧ ವರದಿ
ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮೀಸಲಾಗಿದ್ದ ಜಾಗದಲ್ಲಿ ಪಕ್ಷದ ಮುಖಂಡ ಕೆ.ಸಿ.ಕೊಂಡಯ್ಯ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಶುಕ್ರವಾರ ಕೆಪಿಸಿಸಿಗೆ ತನಿಖಾ ವರದಿ ಸಲ್ಲಿಸಿದೆ. ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಂಜನೇಯಲು ಅವರು ಶುಕ್ರವಾರ ಕೆಪಿಸಿಸಿಗೆ 30 ಪುಟಗಳ ತನಿಖಾ ವರದಿ ಸಲ್ಲಿಸಿದ್ದು, ಜೊತೆಗೆ ವಾಣಿಜ್ಯ ಸಂಕೀರ್ಣ ನಿರ್ಮಾಣವಾದ ಸ್ಥಳ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸೇರಿದ್ದು ಎಂಬುದಕ್ಕೆ 8 ಪುಟಗಳ ದಾಖಲೆಯನ್ನು ಸಲ್ಲಿಸಲಾಗಿದೆ. ಇದರಿಂದ ಕೊಂಡಯ್ಯ ಅವರ ವಿರುದ್ಧ ಕೇಳಿ ಬರುತ್ತಿರುವ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ.

ತಮಿಳು ಚಿತ್ರ ಪ್ರದರ್ಶನಕ್ಕೆ ಅಡ್ಡಿ
ನವೆಂಬರ್ ತಿಂಗಳಿನಲ್ಲಿ ಕನ್ನಡ ಚಿತ್ರಗಳನ್ನು ಮಾತ್ರ ಪ್ರದರ್ಶಿನಸಬೇಕು ಎಂದು ಒತ್ತಾಯಿಸಿ ನವಕರ್ನಾಟಕ ನಿರ್ಮಾಣ ಸೇನೆ ಶಿವಮೊಗ್ಗದ ವಿನಾಯಕ ಚಿತ್ರಮಂದಿದಲ್ಲಿ ಶುಕ್ರವಾರ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಪಡಿಸಿತು. ವಿನಾಯಕ ಚಿತ್ರಮಂದಿರದಲ್ಲಿ ತಮಿಳಿನ ಅಳಗು ರಾಜ ಚಿತ್ರವನ್ನು ಪ್ರದರ್ಶಿಸಲಾಗುತ್ತಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸೇನೆ ಕಾರ್ಯಕರ್ತರು ಮತ್ತು ಚಿತ್ರ ಮಂದಿರದ ಸಿಬ್ಬಂದಿ ನಡುವೆ ಜಟಾಪಟಿ ನಡೆಯಿತು. ನವೆಂಬರ್ ತಿಂಗಳಿನಲ್ಲಿ ಕನ್ನಡ ಚಿತ್ರಗಳನ್ನು ಮಾತ್ರ ಪ್ರದರ್ಶಿಸಬೇಕು ಎಂದು ಸೇನೆ ಕಾರ್ಯಕರ್ತರು ಚಿತ್ರದ ಪೋಸ್ಟರ್ ಹರಿದು ಪ್ರತಿಭಟನೆ ನಡೆಸಿದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಆರ್.ಪಿ.ಶರ್ಮಾ ವಿರುದ್ಧ ಮಾನನಷ್ಟ ಮೊಕದ್ದಮೆ
ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಮುಖ್ಯಸ್ಥ ಆರ್.ಪಿ.ಶರ್ಮಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಬಿಬಿಎಂಪಿ ನೌಕರರ ಸಂಘ ತೀರ್ಮಾನಿಸಿದೆ. ಸರಿಯಾಗಿ ಕಟ್ಟಡದ ಪ್ಲಾನ್ ರಚಿಸದೇ ಬಿಬಿಎಂಪಿಯ ಇಂಜಿನಿಯರ್ ಗಳು ನಗರದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗಲು ಕಾರಣರಾಗಿದ್ದಾರೆ ಎಂದು ಶರ್ಮಾ ದೂರು ದಾಖಲಿಸಿದ್ದರು. ಗಾಂಧಿ ನಗರ ಕ್ಷೇತ್ರದಲ್ಲಿ ಸರಿಯಾಗಿ ರಸ್ತೆ ನಿರ್ಮಿಸಿಲ್ಲ ಎಂದು ಇಂಜಿನಿಯರ್ ಅಮಾನತುಗೊಳಿಸಿ ಅವರು ಜೈಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದರು. ಶರ್ಮಾ ಅವರ ಇಂತಹ ಧೋರಣೆ ಖಂಡಿಸಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಬಿಬಿಎಂಪಿ ಇಂಜಿನಿಯರ್ ಗಳು ತೀರ್ಮಾನಿಸಿದ್ದಾರೆ.

ಚಿಕ್ಕೋಡಿಯಲ್ಲಿ ಅನ್ನಭಾಗ್ಯ ಅಕ್ಕಿವಶ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದ ಲಾರಿಯನ್ನು ತಹಶೀಲ್ದಾರ್ ರಾಜಶೇಖರ ಡಂಬಳ ಅವರು ವಶಕ್ಕೆ ಪಡೆದಿದ್ದಾರೆ. 16 ಟನ್ ಅಕ್ಕಿ ಹೊಂದಿದ್ದ ಲಾರಿ ಅಥಣಿಯಿಂದ ಸಂಕೇಶ್ವರದತ್ತ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಮಾಂಗನೂರ ಗ್ರಾಮದ ಬಳಿ ಪರಿಶೀಲನೆ ನಡೆಸಿದಾಗ ಅಕ್ರಮ ಸಾಗಾಟ ಪತ್ತೆಯಾಗಿದ್ದು, ಲಾರಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿ ತನಿಖೆ ಕೈಗೊಳ್ಳಲಾಗಿದೆ. 320 ಗೋಣಿ ಚೀಲಗಳಲ್ಲಿ ಸುಮಾರು 160 ಕ್ವಿಂಟಲ್ ಅಕ್ಕಿಗಳಿದ್ದು, ಗೋಣಿ ಚೀಲಗಳ ಮೇಲಿರುವ ಅಂಕಿಗಳಿಂದ ಇದು ಅನ್ನಭಾಗ್ಯ ಅಕ್ಕಿ ಎಂದು ತಿಳಿದು ಬಂದಿದೆ, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿಗೆ ಹಿಮಾಚಲ ಪ್ರದೇಶ ನಿಯೋಗ
ಮೈಸೂರು ಮಹಾನಗರ ಪಾಲಿಕೆಗೆ ಹಿಮಾಚಲ ಪ್ರದೇಶದ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ನಿಯೋಗ ಎರಡು ದಿನಗಳ ಭೇಟಿಗಾರಿ ಗುರುವಾರ ಸಂಜೆ ಆಗಮಿಸಿದೆ. ಪಾಲಿಕೆ ಮೇಯರ್ ಎನ್.ಎಂ. ರಾಜೇಶ್ವರಿ ಅವರು ನಿಯೋಗದ ಸದಸ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಮೈಸೂರು ಮಹಾನಗರ ಪಾಲಿಕೆಯ ಘನತ್ಯಾಜ್ಯ ವಿಲೇವಾರಿ ಘಟಕ, ಕೊಳಚೆ ನೀರು ಸಂಸ್ಕರಣ ಘಟಕಗಳು, ಭೌಗೋಳಿಕ ಆಸ್ತಿ ತೆರಿಗೆ ಪದ್ಧತಿ, ಜಿಪಿಎಸ್ ವ್ಯವಸ್ಥೆಗಳ ಬಗ್ಗೆ ಅಧ್ಯಯನ ನಡೆಸಿ ನಿಯೋಗ ಮರಳಲಿದೆ.

ಚಾಮರಾಜನಗರದಲ್ಲಿ ವಿಚಿತ್ರ ಜ್ವರ
ಚಾಮರಾಜನಗರ ಜಿಲ್ಲೆಯ ಗಡಿಭಾಗದ ಗೋಪಿನಾಥಂನಲ್ಲಿ ಜ್ವರದಿಂದ 100ಕ್ಕೂ ಹೆಚ್ಚು ಜನರು ನರಳುತ್ತಿದ್ದು, ಮಹದೇಶ್ವರ ಬೆಟ್ಟದ ವೈದ್ಯಾಧಿಕಾರಿ ಸೆಲ್ವಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಚಿಕಿತ್ಸೆ ನೀಡಿದರು. ತಪಾಸಣೆ ವೇಳೆ 45ಜನಕ್ಕೆ ಸೂಕ್ತ ಚಿಕಿತ್ಸೆ ನೀಡಿ ಹೆಚ್ಚು ಜ್ವರದಿಂದ ಬಳಲುತ್ತಿರುವ, ಕೀಲುನೋವು, ಮಂಡಿನೋವು, ಮೈಕೈ ನೋವಿನಿಂದ ಬಳಲುತ್ತಿರುವ 8ಜನರನ್ನು ರಕ್ತ ಪರೀಕ್ಷೆಗಾಗಿ ಚಾಮರಾಜನಗರಕ್ಕೆ ಕಳುಹಿಸಿಕೊಡಲಾಯಿತು. ಜನತೆಗೆ ಕುಡಿಯುವ ನೀರು, ಟ್ಯಾಂಕ್ ಮತ್ತು ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಲಹೆ ನೀಡಲಾಗಿದೆ.












Click it and Unblock the Notifications