ಮೂಢನಂಬಿಕೆ ಕಾಯ್ದೆ : ಚಂಪಾ ಹೇಳಿದ್ದೇನು?
ಚಿಕ್ಕಮಗಳೂರು, ನ. 15 : ಕರ್ನಾಟಕ ಸರ್ಕಾರ ಮೂಢನಂಬಿಕೆ ಪ್ರತಿಬಂಧಕ ವಿಧೇಯಕವನ್ನು ಜಾರಿಗೆ ತರುವ ಜೊತೆಗೆ ಅದನ್ನು ಅನುಷ್ಠಾನಗೊಳಿಸಲು ಪ್ರಾಧಿಕಾರಿ ರಚನೆ ಮಾಡಲು ಮುಂದಾಗಬೇಕು ಎಂದು ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ) ಒತ್ತಾಯಿಸಿದ್ದಾರೆ. ವಿಧೇಯಕವನ್ನು ತಕ್ಷಣ ಜಾರಿಗಳಿಸಿ ನಂತರ ಅಗತ್ಯ ತಿದ್ದುಪಡಿ ಮಾಡಬಹುದು ಎಂದು ತಿಳಿಸಿದರು.
ಶುಕ್ರವಾರ ಚಿಕ್ಕಮಗಳೂರಿನಲ್ಲಿ ಗ್ರಂಥಾಲಯ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ವಿಧೇಯಕವನ್ನು ತಕ್ಷಣ ಜಾರಿಗೆ ತರಬೇಕು, ನಂತರ ತಿದ್ದುಪಡಿ ಮಾಡಬಹುದಾಗಿದೆ ಎಂದರು. ಮೂಢನಂಬಿಕೆ ಪ್ರತಿಬಂಧಕ ವಿಧೇಯಕ ಜಾರಿಗೆ ತರುವ ಜೊತೆಗೆ ಮೂಢನಂಬಿಕೆ ಹಾಗೂ ಜ್ಯೋತಿಷ್ಯದ ಬಗ್ಗೆ ಮಾಧ್ಯಮಗಳಲ್ಲಿ ಬರುವ ಕಾರ್ಯಕ್ರಮಗಳಿಗೆ ನಿಯಂತ್ರಣ ತರಬೇಕು ಎಂದು ಪ್ರತಿಪಾದಿಸಿದರು.
ವೀರಶೈವ ಸಮುದಾಯದ ಪ್ರಗತಿಪರ ಸ್ವಾಮೀಜಿಗಳು ಮಡೆಸ್ನಾನ ವಿರೋಧಿಸುವಂತೆ ಪಾದಪೂಜೆ ವಿರೋಧಿಸುತ್ತಿಲ್ಲ. ಪಾದಪೂಜೆ ಅನಿಷ್ಟ ಪದ್ಧತಿ, ಅನಾರೋಗ್ಯಕರವಾದದ್ದು, ಇದನ್ನು ಮೊದಲು ಮೂಢನಂಭಿಕೆ ಪ್ರತಿಬಂಧಕ ವಿಧೇಯಕದಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದ ಅವರು, ಮೂಢನಂಬಿಕೆ ನಿಷೇಧದ ಕುರಿತು ಪಕ್ಷಾತೀತ ಹೋರಾಟದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಮೂಢನಂಬಿಕೆ ವಿಧೇಯಕದ ಕುರಿತು ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಸಂಪ್ರದಾಯ, ಮೌಢ್ಯಗಳು ಇಂದು ವ್ಯಾಪಾರೀಕರಣಕ್ಕೆ ಬಳಕೆಯಾಗುತ್ತಿವೆ ಎಂದು ವಿಶ್ಲೇಷಿಸಿದರು. ಜನರಲ್ಲಿನ ಅಸಹಾಯಕತೆ, ಭೀತಿ ಮುಂತಾದವುಗಳನ್ನು ಬಳಸಿಕೊಂಡು ಕೆಲವರು ಹಣ ಮಾಡುತ್ತಿದ್ದಾರೆ ಎಂದು ಚಂಪಾ ಹೇಳಿದರು. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಮೂಢನಂಬಿಕೆ ವಿಧೇಯಕ ಜಾರಿಗೆ ಬರಲಿ
ಕರ್ನಾಟಕ ಸರ್ಕಾರ ಮೂಢನಂಬಿಕೆ ಪ್ರತಿಬಂಧಕ ವಿಧೇಯಕವನ್ನು ತಕ್ಷಣಜಾರಿಗೆ ತರುವ ಜೊತೆಗೆ ಅದನ್ನು ಅನುಷ್ಠಾನಗೊಳಿಸಲು ಪ್ರಾಧಿಕಾರಿ ರಚನೆ ಮಾಡಲು ಮುಂದಾಗಬೇಕು ಎಂದು ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ) ಒತ್ತಾಯಿಸಿದ್ದಾರೆ. ವಿಧೇಯಕವನ್ನು ತಕ್ಷಣ ಜಾರಿಗಳಿಸಿ ನಂತರ ಅಗತ್ಯ ತಿದ್ದುಪಡಿ ಮಾಡಬಹುದು ಎಂದು ತಿಳಿಸಿದರು. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ವಿಧೇಯಕವನ್ನು ತಕ್ಷಣ ಜಾರಿಗೆ ತರಬೇಕು, ನಂತರ ತಿದ್ದುಪಡಿ ಮಾಡಬಹುದಾಗಿದೆ. ಮೂಢನಂಬಿಕೆ ಪ್ರತಿಬಂಧಕ ವಿಧೇಯಕ ಜಾರಿಗೆ ತರುವ ಜೊತೆಗೆ ಮೂಢನಂಬಿಕೆ ಹಾಗೂ ಜ್ಯೋತಿಷ್ಯದ ಬಗ್ಗೆ ಮಾಧ್ಯಮಗಳಲ್ಲಿ ಬರುವ ಕಾರ್ಯಕ್ರಮಗಳಿಗೆ ನಿಯಂತ್ರಣ ತರಬೇಕು ಎಂದು ಪ್ರತಿಪಾದಿಸಿದರು.

ಮೈಸೂರು ಭಾಗ್ಯ ಯೋಜನೆ ಮಾತ್ರ ಬಾಕಿ
ಮುಂಬರುವ ಲೋಕಸಭೆ ಚುನಾವಣೆ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ. ದಾವಣಗೆರೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡು ವರ್ಷಗಳ ನಂತರ ಪಕ್ಷದಲ್ಲಿ ಒಳಜಗಳ ಪ್ರಾರಂಭವಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲೇ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳು ಬಯಲಾಗಿವೆ ಎಂದರು. ಅನ್ನಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ ಎಲ್ಲ ಭಾಗ್ಯಗಳು ಮುಗಿದಿವೆ. ಇನ್ನೇನಿದ್ದರೂ ಸಿದ್ಧರಾಮಯ್ಯ ಅಧಿಕಾರ ಬಿಟ್ಟುಕೊಟ್ಟು ಮೈಸೂರಿಗೆ ತೆರಳುವ ಭಾಗ್ಯವೊಂದೇ ಉಳಿದಿದೆ ಎಂದು ವ್ಯಂಗ್ಯವಾಡಿದರು.

ಬಸ್ ಪಲ್ಟಿ 15 ಜನರಿಗೆ ಗಾಯ
ತಿರುವು ಪಡೆಯುವ ವೇಳೆ ಖಾಸಗಿ ಬಸ್ಸೊಂದು ಉರುಳಿ ಬಿದ್ದು 15 ಮಂದಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಯಾಪುರ ಬಳಿ ಶುಕ್ರವಾರ ನಡೆದಿದೆ. ರಾಯದುರ್ಗದಿಂದ ಚಿತ್ರದುರ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ ರಾಯಾಪುರ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ 15 ಮಂದಿ ಗಾಯಗೊಂಡಿದ್ದು, ಐವರಿಗೆ ತೀವ್ರ ಗಾಯಗಳಾಗಿವೆ. ಗಾಯಗೊಂಡವರನ್ನು ಮೊಳಕಾಲ್ಮೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ನೆಲಮಂಗಲದಲ್ಲಿ ಸರ್ಕಾರಿ ಭೂಮಿ ಕಂಡವರ ಪಾಲು
ಬೆಂಗಳೂರು ಸಮೀಪವಿರುವ ನೆಲಮಂಗಲದಲ್ಲಿ ಭೂಮಿಗೆ ಚಿನ್ನದ ಬೆಲೆ. ಆದ್ದರಿಂದ ಇಲ್ಲಿ ಭೂಗಳ್ಳರ ಹಾವಳಿ ಹೆಚ್ಚಾಗಿದೆ. ಕಳೆದ 5 ವರ್ಷಗಳ ಅವಧಿಯಲ್ಲೇ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 1000 ಕೋಟಿ ಬೆಲೆಬಾಳುವ ಸರ್ಕಾರಿ ಭೂಮಿಯನ್ನು ಕಬಳಿಸಲಾಗಿದೆ. ಐದು ವರ್ಷಗಳಲ್ಲಿ 1,537 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಅಂಶ ವರದಿಯಲ್ಲಿ ಬಹಿರಂಗಗೊಂಡಿದೆ. ಬೆಂಗಳೂರು ವಿಭಾಗೀಯ ಪ್ರಾದೇಶಿಕ ಆಯುಕ್ತ ಗೌರವ್ ಗುಪ್ತ ಆದೇಶದ ಅನ್ವಯ ತಾಲ್ಲೂಕು ಆಡಳಿತ ತಯಾರಿಸಿದ ವರದಿಯಲ್ಲಿ ಈ ಮಾಹಿತಿ ಇದೆ. ತಾಲ್ಲೂಕಿನಲ್ಲಿ ಒಟ್ಟು 11,089 ಎಕರೆ ಸರ್ಕಾರಿ ಭೂಮಿ ಇದ್ದು, ಇದರಲ್ಲಿ 1,537 ಎಕರೆ ಒತ್ತುವರಿಯಾಗಿದೆ ಎಂಬ ಮಾಹಿತಿಯನ್ನು ಪ್ರಾದೇಶಿಕ ಆಯುಕ್ತರಿಗೆ ರವಾನಿಸಿದೆ.

ಅಧಿಕಾರಿಗಳಿಗೆ ಶಾಸಕರ ಎಚ್ಚರಿಕೆ
ಹಾನಸ ಜಿಲ್ಲೆಯ ಹಿರೀಸಾವೆ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಬರುವ ಹಳ್ಳಿಗಳ ಪಕ್ಕದಲ್ಲಿ ಚರಂಡಿ ಮತ್ತು ಸರ್ವೀಸ್ ರಸ್ತೆಗಳನ್ನು ನಿರ್ಮಾಣ ಮಾಡದಿದ್ದರೆ ಗ್ರಾಮಸ್ಥರ ಪರವಾಗಿ ರಸ್ತೆ ತಡೆ ನಡೆಸಬೇಕಾಗುತ್ತದೆ ಎಂದು ಶಾಸಕ ಸಿ.ಎಸ್.ಬಾಲಕೃಷ್ಣ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಎನ್‌ಎಚ್‌ಎಐನ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಅಡ್ಡಿಪಡಿಸಿದಾಗ ಸ್ಥಳಕ್ಕೆ ಬಂದ ಶಾಸಕರು ರಸ್ತೆ, ಚರಂಡಿ ಅವ್ಯವಸ್ಥೆ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಮಾರ್ಗದಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು ಸ್ಪಂದಿಸದ ಅಧಿಕಾರಿಗಳಿಗೆ ನಿಮ್ಮ ವರ್ತನೆ ಹೀಗೆ ಮುಂದುವರೆದರೆ ರಸ್ತೆ ತಡೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಮಕ್ಮಲ್ ಟೋಪಿ ಯೋಜನೆಗಳು
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಜನರಿಗೆ ಮಕ್ಮಲ್ ಟೋಪಿ ಹಾಕುವಂತಹ ಯೋಜನೆಗಳಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಉತ್ತರ ಕರ್ನಾಟಕ ಪ್ರವಾಸ ಹಿನ್ನಲೆಯಲ್ಲಿ ಬೆಳಗಾವಿಗೆ ಶುಕ್ರವಾರ ಭೇಟಿ ನೀಡಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ನೀಡಿದ ಯೋಜನೆಗಳು ಜನರು ಕೇಳಿದ್ದಲ್ಲ, ಬದಲಾಗಿ ಕಾಂಗ್ರೆಸ್ ಸ್ವಯಂ ಪ್ರೇರಿತವಾಗಿ ಘೋಷಿಸಿದವು ಎಂದರು. ಎಲ್ಲಾ ಯೋಜನೆಗಳು ಜನರ ಕಣ್ಣಿಗೆ ಮಣ್ಣೆರಚುವ, ಮಕ್ಮಲ್ ಟೋಪಿ ಹಾಕುವಂತಹ ಯೋಜನೆಗಳು. ಅನ್ನಭಾಗ್ಯ ಯೋಜನೆ, ಶಾದಿಭಾಗ್ಯ ಯೋಜನೆ, ಅಹಿಂದ್ ಮಕ್ಕಳಿಗೆ ಪ್ರವಾಸ ಹೀಗೆ ಮೊದಲಾದ ಯೋಜನೆ ಜಾರಿ ಮಾಡಿ ಎಂದು ಜನತೆ ಎಂದೂ ಕೇಳಿಲ್ಲ, ಇಂತಹ ಯೋಜನೆಗಳನ್ನು ತರಾತುರಿಯಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿ ನಗೆಪಾಟಲಿಗೀಡಾಗುತ್ತಿದೆ ಎಂದು ಲೇವಡಿ ಮಾಡಿದರು.

ಅನ್ನ ಭಾಗ್ಯ ಅಕ್ಕಿ ಮಾರಿದರೆ ಕಠಿಣ ಕ್ರಮ
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಆಹಾರ ಮತ್ತು ನಾಗರಿಕ ಇಲಾಖೆ ಆಯುಕ್ತ ಹರ್ಷಗುಪ್ತ ಹೇಳಿದ್ದಾರೆ. ಶುಕ್ರವಾರ ರಾಯಚೂರಿಗೆ ಭೇಟಿ ನೀಡಿದ ಅವರು, ಗೋದಾಮುಗಳಿಗೆ ಭೇಟಿ ನೀಡಿದ ದಾಖಲೆಗಳನ್ನು ಪರಿಶೀಲಿಸಿದರು. ಅಕ್ಕಿಯನ್ನು ಮಾರಾಟ ಮಾಡುವ ಕಾರ್ಯದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆಯೇ? ಎಂದು ತರಾಟೆಗೆ ತೆಗೆದುಕೊಂಡರು. ಅಕ್ರಮದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಶಮೀಲಾಗಿರುವುದು ಕಂಡುಬಂದರೆ ಅವರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಾಲ್ಕು ಜಿಲ್ಲೆಗಳಲ್ಲಿ ತರಬೇತಿ ಕೇಂದ್ರ
ಗ್ರಾಮೀಣ ನಿರುದ್ಯೋಗಿ ಯುವಕರ ಸಬಲೀಕರಣಕ್ಕಾಗಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಕರ್ನಾಟಕ ಜರ್ಮನ್ ಬಹುಕೌಶಲ್ಯ ತರಬೇತಿ ಕೇಂದ್ರಗಳನ್ನು ತೆರೆಯಲಿದೆ ಎಂದು ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಜರ್ಮನ್ ಸರ್ಕಾರದ ಸಹಕಾರದೊಂದಿಗೆ ಈಗಾಗಲೇ ಬೆಂಗಳೂರು ಮತ್ತು ಗುಲ್ಬರ್ಗಾಗಳಲ್ಲಿ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ ಮಂಗಳೂರು, ಹುಬ್ಬಳ್ಳಿ, ಬಳ್ಳಾರಿ, ಮೈಸೂರಿನಲ್ಲಿ ತರಬೇತಿ ಕೇಂದ್ರ ತೆರೆಯಲಾಗುವುದು ಎಂದು ತಿಳಿಸಿದರು. 2014ರ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಹೊಸದಾಗಿ 5 ಹೊಸ ಐಟಿಐ ಕಾಲೇಜು ಆರಂಭಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.

ಅಧಿಕಾರಿಗಳಿಂದ ಲಾರಿ ಚಾಲಕರ ಸುಲಿಗೆ
ಆನೇಕಲ್ ತಾಲೂಕಿನ ಗಡಿಭಾಗ ಅತ್ತಿಬೆಲೆಯಲ್ಲಿ ನೆರೆಯ ತಮಿಳುನಾಡಿನಿಂದ ಬರುವ ಲಾರಿಗಳನ್ನು ಚೆಕ್‌ಪೋಸ್ಟ್‌ನಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡದೆ, ಲಾರಿ ಚಾಲಕರಿಂದ ಹಣ ಪಡೆದು ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ತಪಾಸಣೆ ನೆಪದಲ್ಲಿ ಲಾರಿಗಳನ್ನು ನಿಲ್ಲಿಸಿಕೊಂಡು ಚಾಲಕರಿಂದ ಹಣ ಪಡೆಯುತ್ತಾರೆ. ಇದರಿಂದ ಅಧಿಕ ಸರಕು ಸಾಗಣೆ ಮಾಡುವ ಲಾರಿಗಳು ಕರ್ನಾಟಕಕ್ಕೆ ಆಗಮಿಸುತ್ತಿವೆ ಎಂದು ಜನರು ದೂರಿದ್ದಾರೆ. ಲಾರಿಗೆ 100 ರಿಂದ 500 ರೂ. ಹಣ ಪಡೆದು ಅಧಿಕಾರಿಗಳು ಭಷ್ಟಾಚಾರ ನಡೆಸುತ್ತಿದ್ದಾರೆ. ಇಲ್ಲಿನ ಅಧಿಕಾರಿಗಳನ್ನು ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡಬೇಕೆಂದು ಜನರು ಒತ್ತಾಯಿಸಿದ್ದಾರೆ.












Click it and Unblock the Notifications