E Khata: ರಾಜ್ಯದ ಎಲ್ಲಾ ಗ್ರಾಮಪಂಚಾಯಿತಿ ನಿವೇಶನಗಳಿಗೂ ಇ-ಖಾತಾ ವಿತರಣೆ: ಮಹತ್ವ ಮಾಹಿತಿ ನೀಡಿದ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಮಾರ್ಚ್ 06: ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಕ್ರಮ ಬದ್ಧವಲ್ಲದ ನಿವೇಶನ ಹಾಗೂ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಕ್ರಮ ಕೈಗೊಳ್ಳುತ್ತಿದ್ದು, 2013ಕ್ಕೆ ಮೊದಲು ಅಥವಾ ನಂತರ ನೋಂದಣಿಯಾದ ಎಲ್ಲಾ ನಿವೇಶನ ಹಾಗೂ ಕಟ್ಟಡಗಳಿಗೂ ಇ-ಖಾತೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರಶೋತ್ತರ ಅವಧಿಯಲ್ಲಿ ಮೇಲುಕೋಟೆ ಸದಸ್ಯ ದರ್ಶನ್ ಪುಟ್ಟಣ್ಣಯ್ಯ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದು, ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 2013ಕ್ಕಿಂತ ಮೊದಲು ನೋಂದಣಿಯಾದ ನಿವೇಶನಗಳಿಗೆ ಇ-ಖಾತಾ ಅಭಿಯಾನ ಮಾಡಲಾಗುತ್ತಿದೆ. ಆದರೆ 2013ರ ನಂತರನೋಂದಣಿಯಾದ ನಿವೇಶನಗಳಿಗೆ ಇ-ಖಾತೆ ಮಾಡದೆ ತಿರಸ್ಕಾರ ಮಾಡುತ್ತಿದ್ದು, ಒಂದೇ ಕಡೆ ಎರಡು ರೀತಿಯ ನಿಯಮ ಅನುಸರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕ್ರಮ ಬದ್ಧವಲ್ಲದ ನಿವೇಶನಗಳು ಮತ್ತು ಕಟ್ಟಡಗಳಿಗೆ ಇ-ಖಾತಾ ನೀಡಲು ಸರ್ಕಾರ ಬದ್ಧವಾಗಿದೆ. ಸರ್ಕಾರಿ, ಸ್ಥಳೀಯ ಸಂಸ್ಥೆ, ಶಾಸನಬದ್ದ ಸಂಸ್ಥೆ, ಅರಣ್ಯ ಭೂಮಿಯನ್ನು ಹೊರತುಪಡಿಸಿ ಉಳಿದ ಖಾಸಗಿ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಪ್ರತ್ಯೇಕ ವಹಿಯಲ್ಲಿ ದಾಖಲಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ-1993ಕ್ಕೆ ತಿದ್ದುಪಡಿ ತರುತ್ತೇವೆ. ಬಳಿಕ ಸೂಕ್ತ ನಿಯಮಗಳನ್ನು ರೂಪಿಸಿ 2013 ಜೂ.14ರ ಮೊದಲು ಹಾಗೂ ನಂತರ ನೋಂದಣಿಯಾದ ಎಲ್ಲಾ ನಿವೇಶನ, ಕಟ್ಟಡಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ಖಾತೆ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಅಕ್ರಮ ವಲಸೆಗಾರರನ್ನು ಪತ್ತೆ ಹಚ್ಚಿ ಕಾನೂನು ಕ್ರಮ: ಪರಮೇಶ್ವರ್
ರಾಜ್ಯದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶದ 137 ಅಕ್ರಮ ವಲಸೆಗಾರರನ್ನು ಪತ್ರೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ವಿಧಾನಸಭೆಯ ಅಧಿವೇಶನದಲ್ಲಿ ಶಾಸಕ ಬಸನಗೌಡ ಆರ್.ಪಾಟೀಲ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದಾರೆ ಎಂದರು.
ಬಿಜಾಪುರದಲ್ಲಿ ಸುಮಾರು 27 ಭೂಮಾಫಿಯಾ ಪ್ರಕರಣಗಳನ್ನು ದಾಖಲಿಸಿದ್ದು, 8 ಪ್ರಕರಣಗಳಲ್ಲಿ ದೋಷಾರೋಪಣೆ ಪ್ರಕರಣ ದಾಖಲಿಸಿದೆ. 9 ಪ್ರಕರಣಗಳ ತನಿಖೆ ಮುಂದುವರಿಸಲಾಗಿದೆ. ಇವರುಗಳು ವಯೋವೃದ್ಧರನ್ನು ಗುರಿಯಾಗಿಟ್ಟುಕೊಂಡು ರೇಷನ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯನ್ನು ನಕಲು ಮಾಡಿ ಬೇರೆಯವರಿಗೆ ಮಾರಾಟ ಅಥವಾ ಬೇರೆ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದ್ದು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪಡಿತರ ಸರಬರಾಜಿನಲ್ಲೂ ಅವ್ಯವಹಾರ ಕಂಡು ಬಂದಿದ್ದು ಅವರ ವಿರುದ್ಧವು ಕಠಿಣ ಕ್ರಮಕೈಗೊಳ್ಳಲಾಗಿದೆ. ಕಂಟ್ರಿ ಪಿಸ್ತೂಲ್ ಮತ್ತು ಗುಂಡುಗಳನ್ನು ವಶಪಡಿಸಿಕೊಂಡು ಕ್ರಮಕೈಗೊಳ್ಳಲಾಗಿದೆ ಎಂದರು. ಬಿಜಾಪುರದಲ್ಲಿ ಎನ್.ಐ.ಎ ಘಟಕ ಸ್ಥಾಪಿಸುವಂತೆ ಪ್ರಸ್ತಾಪಿಸಿದ್ದು, ಕೇಂದ್ರದವರು ಮಾಡಬಹುದು ಎಂದು ಸದನಕ್ಕೆ ಮಾಹಿತಿ ನೀಡಿದರು.












Click it and Unblock the Notifications